
ಗಿಲ್ಲಿ ನಟ (Gilli Nata) ಅದ್ಧೂರಿಯಾಗಿ ಬಿಗ್ಬಾಸ್ ಗೆದ್ದಿದ್ದಾರೆ. ಬಿಗ್ಬಾಸ್ ಕನ್ನಡದ ಇತಿಹಾಸದಲ್ಲೇ ಯಾರೂ ಪಡೆಯದಷ್ಟು ಮತಗಳನ್ನು ಗಳಿಸಿ ಗೆದ್ದಿದ್ದಾರೆ. ಬಿಗ್ಬಾಸ್ ದೆಸೆಯಿಂದ ಗಿಲ್ಲಿಗೆ ರಾಜ್ಯದಾದ್ಯಂತ ಅಭಿಮಾನಿಗಳಾಗಿದ್ದಾರೆ. ಹೋದಲ್ಲಿ ಬಂದಲ್ಲೆಲ್ಲ ಜನ ಮುಗಿಬೀಳುತ್ತಿದ್ದಾರೆ. ಗಿಲ್ಲಿ ಸಹ ಗೆದ್ದು ಬಂದ ಬಳಿಕ ಚಿತ್ರರಂಗದ ಹಿರಿಯರು, ರಾಜ್ಯದ ಹಿರಿಯರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದಾರೆ. ಮೊದಲಿಗೆ ಸುದೀಪ್ ಬಳಿಕ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಗಿಲ್ಲಿ ನಟ, ಇದೀಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಹಾಗೂ ಗಿಲ್ಲಿ ನಡುವೆ ನಡೆದ ಮಾತುಕತೆ ಬಲು ಮಜವಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಭೇಟಿಯಾಗಿ ಗಿಲ್ಲಿ ಆಶೀರ್ವಾದ ಪಡೆದಿದ್ದಾರೆ. ಬಳಿಕ ಅಲ್ಲಿದ್ದ ಕೆಲವರು ಗಿಲ್ಲಿಯ ಪರಿಚಯವನ್ನು ಸಿದ್ದರಾಮಯ್ಯ ಅವರಿಗೆ ಮಾಡಿಕೊಟ್ಟು, ಮಳವಳ್ಳಿಯವನು ಎಂದಿದ್ದಾರೆ. ಕೂಡಲೇ ಸಿಎಂ ಸಿದ್ದರಾಮಯ್ಯ ಅವರು, ‘ಓಹ್ ಶಿವಣ್ಣನ ಊರಿನವನಾ?’ ಎಂದಿದ್ದಾರೆ. ಸಿದ್ದರಾಮಯ್ಯ ಅವರು ರಾಜಕೀಯ ಮುಖಂಡ ಮಳವಳ್ಳಿ ಶಿವಣ್ಣ ಬಗ್ಗೆ ಗಿಲ್ಲಿಯಲ್ಲಿ ವಿಚಾರಿಸಿದರು. ‘ಶಿವಣ್ಣ ಊರಿನಲ್ಲಿ ಇಲ್ಲ ಅನಿಸುತ್ತೆ, ಬರ್ತಿರ್ತಾರಾ ಊರು ಕಡೆಗೆ?’ ಎಂದು ಕೇಳಿದರು ಸಿಎಂ. ಅದಕ್ಕೆ ಗಿಲ್ಲಿ, ‘ಹೌದಣ್ಣ, ಆಗಾಗ ಬರ್ತಿರ್ತಾರೆ’ ಎಂದರು.
ಬಳಿಕ ಅಲ್ಲಿದ್ದ ಕೆಲವರು, ‘50 ಲಕ್ಷ ಕೊಟ್ಟಿದ್ದಾರೆ ಬಹುಮಾನ’ ಎಂದರು. ಇನ್ನೊಬ್ಬರು ಕಾರು ಸಹ ಕೊಟ್ಟವ್ರೆ ಎಂದರು. ಇನ್ನೊಬ್ಬರು ಶರವಣ 20 ಲಕ್ಷ ಕೊಟ್ಟರು ಎಂದರು. ಎಲ್ಲವನ್ನೂ ಕೇಳಿಸಿಕೊಂಡ ಸಿಎಂ, ಓಹ್ ಶರವಣನೂ ಕೊಟ್ರ ಎಂದರು. ಅದಕ್ಕೆ ಗಿಲ್ಲಿ, ಅವರು ರನ್ನರ್ ಅಪ್ಗೆ ಅಂದರೆ ಸೆಕೆಂಡ್ ಬಂದವರಿಗೆ ಕೊಟ್ರು ಸಾರ್ ಎಂದರು. ಬಳಿಕ ಅಲ್ಲೇ ಇದ್ದ ಭೈರತಿ ಸುರೇಶ್ ಅವರು, ಸುದೀಪ್ ಅವರು 10 ಕೊಟ್ಟಿರಬೇಕು ಅಲ್ವ ಎಂದರು, ಗಿಲ್ಲಿ ಹೌದೆಂದರು.
ಇದನ್ನೂ ಓದಿ:ಫ್ಯಾನ್ಸ್ಗೆ ಧನ್ಯವಾದ ಅರ್ಪಿಸಿದ ಗಿಲ್ಲಿ ನಟ
ಬಳಿಕ ಸಿದ್ದರಾಮಯ್ಯ ಅವರು, ‘ನಿಮ್ಮ ತಂದೆ ತಾಯಿ ಏನು ಮಾಡ್ತಾರೆ? ಎಂದರು ಅದಕ್ಕೆ ಗಿಲ್ಲಿ, ಊರಲ್ಲೇ ವ್ಯವಸಾಯ ಮಾಡ್ತಾರೆ ಸಾರ್ ಎಂದರು. ‘ನೀವು ಎಷ್ಟು ಜನ ಅಣ್ಣ-ತಮ್ಮಂದಿರು’ ಎಂದು ಲೋಕಾಭಿರಾಮವಾಗಿ ವಿಚಾರಿಸಿದರು. ಅದಕ್ಕೆ ಗಿಲ್ಲಿ, ಅಲ್ಲೇ ಇದ್ದ ಅಣ್ಣನನ್ನು ತೋರಿಸಿ, ಪರಿಚಯ ಮಾಡಿಸಿದರು. ಗಿಲ್ಲಿಯ ಅಣ್ಣಣೂ ಸಿಎಂ ಅವರ ಆಶೀರ್ವಾದ ಪಡೆದರು.
ಅಷ್ಟರಲ್ಲೇ ಸಚಿವ ಭೈರತಿ ಸುರೇಶ್ ಅವರು, ‘ಬಾಳ ಓಟು ಬಂದಿರಬೇಕು ಅಲ್ವ?’ ಎಂದರು. ಅದಕ್ಕೆ ಅಲ್ಲಿದ್ದ ಕೆಲವರು 45 ಕೋಟಿ ಬಂದಿದೆ ಸಾರ್ ಎಂದರು. ಬಳಿಕ ಸ್ವತಃ ಸಿಎಂ ಸಿದ್ದರಾಮಯ್ಯ ಅವರು, ‘ಬಿಗ್ಬಾಸ್ ಇತಿಹಾಸದಲ್ಲೇ ಇವನಿಗೆ ಹೆಚ್ಚು ಓಟು ಬಂದಿದೆ’ ಎಂದರು. ಬಳಿಕ ಮಾತು ಮುಂದುವರೆಸಿ, ‘ಓಟಿಗಿಂತಲೂ ಬಾಳ ಜನಪ್ರಿಯತೆ ಪಡೆದಿದ್ದಾನೆ, ಒಳ್ಳೆದಾಗಲಿ’ ಎಂದರು.
ಸಚಿವ ಭೈರತಿ ಸುರೇಶ್ ಅವರು, ‘ಒಳ್ಳೆ ಹುಡುಗ ಸಾರ್, ಪಾಪ ಎಲ್ಲರನ್ನೂ ನಗಿಸುತ್ತಿದ್ದ, ಮನೆಯಲ್ಲಿ ನನ್ನ ಪತ್ನಿ ಸಹ ಶೋ ನೋಡ್ತಿದ್ರು, ಇವನ ಫ್ಯಾನ್ ಅವರು’ ಎಂದರು. ಭೈರತಿ ಸುರೇಶ್ ಮಾತಿಗೆ ಎಲ್ಲರೂ ನಕ್ಕರು. ಸಚಿವ ಭೈರತಿ ಸುರೇಶ್ ಅವರು, ‘ಮುಂದೆ, ಸಿನಿಮಾ ಮಾಡ್ತೀಯ’ ಎಂದರು, ಗಿಲ್ಲಿ ನೋಡೋಣ ಎಂಬಂತೆ ನಕ್ಕು ಸುಮ್ಮನಾದರು. ಗಿಲ್ಲಿ, ಸಿಎಂ ಸಿದ್ದರಾಮಯ್ಯ ಅವರಿಗೆ ಹಾರ ಹಾಕುವ ಪ್ರಯತ್ನ ಮಾಡಿದರು. ಆದರೆ ಅದೇ ಹಾರನ್ನು ಸಿಎಂ ಸಿದ್ದರಾಮಯ್ಯ ಅವರು ಗಿಲ್ಲಿಗೆ ಹಾಕಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ