ತನ್ನ ಹೆಸರಿನಿಂದ, ಹಾಡುಗಳಿಂದ ಕುತೂಹಲ ಕೆರಳಿಸಿರುವ ‘ಸಿ’ ಸಿನಿಮಾದ ಟ್ರೈಲರ್ ಆಗಸ್ಟ್ 12 ರಂದು ಬಿಡುಗಡೆ ಆಗಿದೆ. ನಟ ರಾಜವರ್ಧನ್ ‘ಸಿ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿ ಹಾರೈಸಿದ್ದಾರೆ. ಈ ಸಿನಿಮಾ, ಅಪ್ಪ-ಮಗಳ ಭಾವುಕ ಸಂಬಂಧದ ಜೊತೆಗೆ ಮೆಡಿಕಲ್ ಮಾಫಿಯಾದ ಕತೆ, ಬಡವರಿಗೆ ಆರೋಗ್ಯ ಎಂಬುದು ಹೇಗೆ ಕೈಗೆಟುದ ದ್ರಾಕ್ಷಿಯಾಗಿದೆ ಎಂಬುದನ್ನು ಸಹ ಹೇಳುವ ಪ್ರಯತ್ನ ಮಾಡುತ್ತಿದೆ ಎಂಬುದು ಟ್ರೈಲರ್ನಿಂದ ತಿಳಿದು ಬರುತ್ತಿದೆ.
‘ಸಿ’ ಸಿನಿಮಾವನ್ನು ಕಿರಣ್ ಸುಬ್ರಮಣಿ ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಕಟ್ ಹೇಳಿರುವ ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಕಣ್ಣು ಕಾಣದ ಮಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಒದ್ದಾಡುವ ತಂದೆಯ ಪಾತ್ರ ಅವರದ್ದು. ಮಗಳ ಶಸ್ತ್ರ ಚಿಕಿತ್ಸೆಗಾಗಿ ಏನು ಬೇಕಾದರೂ ಮಾಡುವ ಹಠಕ್ಕೆ ಬೀಳುವ ಅಪ್ಪ, ಹೇಗೆ ಸಮಾಜವನ್ನು ಮುಕ್ಕಿ ತಿನ್ನುತ್ತಿರುವ ಮೆಡಿಕಲ್ ಮಾಫಿಯಾದ ಬುಡ ಅಲುಗಾಡಿಸುತ್ತಾನೆ ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.
ಟ್ರೈಲರ್ ಬಿಡುಗಡೆ ಮಾಡಿದ ನಟ ರಾಜವರ್ಧನ್, ‘ಸಿನಿಮಾದ ಟ್ರೈಲರ್ ಭಾವುಕವಾಗಿದೆ. ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಇದೆ ಎಂಬುದು ತಿಳಿದು ಬರುತ್ತಿದೆ. ಎಲ್ಲರೂ ದಯವಿಟ್ಟು ಸಿನಿಮಾ ನೋಡಿ’ ಎಂದರು. ಸಿನಿಮಾದ ನಿರ್ದೇಶಕ ಹಾಗೂ ನಟ ಕಿರಣ್ ಮಾತನಾಡಿ, ‘’ಸಿ’ ಎಂಬುದಕ್ಕೆ ಸಿನಿಮಾದಲ್ಲಿ ಮೂರು ಅರ್ಥವಿದೆ. ಆದರೆ ಟ್ರೈಲರ್ನಲ್ಲಿ ಒಂದು ‘ಸಿ’ ಬಗ್ಗೆ ಮಾತ್ರವೇ ತೋರಿಸಿದ್ದೀವಿ. ಮತ್ತೆರಡು ಸಿ ಏನು ಹೇಳುತ್ತದೆ, ಅದರ ಅರ್ಥವೇನು ಎಂಬುದನ್ನು ಚಿತ್ರಮಂದಿರಕ್ಕೆ ಬಂದು ನೋಡಬೇಕು. ಸಿನಿಮಾ ಪ್ರಾರಂಭವಾದಾಗ ಎಂಟು ಜನ ನಿರ್ಮಾಪಕರು ಇದ್ದರು ಆದರೆ ಕಾರಣಾಂತರಗಳಿಂದ ಎಲ್ಲರೂ ಹೊರಟು ಹೋದರು. ಈಗ ಕೃಷ್ಣೇಗೌಡ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ:ನಮ್ಮಿಂದಲೇ ಕನ್ನಡ ಸಿನಿಮಾಗಳು ಓಡುತ್ತಿಲ್ಲ ಎಂದು ಬೀಗುತ್ತಿದ್ದ ದರ್ಶನ್ ಅಭಿಮಾನಿಗಳಿಗೆ ನಿರಾಸೆ
ಅಪ್ಪ-ಮಗಳ ಬಾಂಧವ್ಯದ ಕತೆಯೊಂದಿಗೆ ಥ್ರಿಲ್ಲರ್ ಅಂಶವನ್ನೂ ಸಹ ಹೊಂದಿರುವ ಈ ಸಿನಿಮಾವನ್ನು ಪ್ರೇಕ್ಷಕ ಒಪ್ಪುತ್ತಾನಾ ಕಾದು ನೋಡಬೇಕಿದೆ. ‘ಸಿ’ ಕನ್ನಡ ಸಿನಿಮಾ ಆಗಸ್ಟ್ 23 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಎಬಿ ಮುರಳೀಧರನ್ ಸಂಗೀತ ನೀಡಿದ್ದಾರೆ. ಕ್ಯಾಮೆರಾ ಕೆಲಸ ನವೀನ್ ಸೂರ್ಯ ಮತ್ತು ವೀರೇಶ್ ಕುಮಾರ್ ಅವರದ್ದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ