ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು ನೀಡಿದ ನಿರ್ಮಾಪಕರ ಸಂಘ

ತಮಿಳಿನ ‘ಜನ ನಾಯಗನ್’ ಸಿನಿಮಾ ಬಗ್ಗೆ ಮಾತನಾಡುವಾಗ ಚಕ್ರವರ್ತಿ ಚಂದ್ರಚೂಡ್ ಅವರು ನಿರ್ಮಾಪಕರನ್ನು ಟೀಕಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯು ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ಕ್ಕೆ ದೂರು ನೀಡಿತ್ತು. ಈಗ ನಿರ್ಮಾಪಕರ ಸಂಘವು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿ, ಚಂದ್ರಚೂಡ್ ಮೇಲೆ ಕ್ರಮಕ್ಕೆ ಒತ್ತಾಯಿಸಿದೆ.

ಚಕ್ರವರ್ತಿ ಚಂದ್ರಚೂಡ್ ವಿರುದ್ಧ ದೂರು ನೀಡಿದ ನಿರ್ಮಾಪಕರ ಸಂಘ
Venkat K. Narayana Thalapathy Vijay, Chandrachud
Image Credit source: KVN Productions, Chakravarthy Chandrachud

Updated on: Feb 02, 2026 | 5:06 PM

ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಅವರು ನಿರ್ಮಾಪಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ದೂರು ನೀಡಲಾಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ (Kannada Film Producers Association) ದೂರು ನೀಡಿದೆ. ತಮ್ಮದೇ ಯೂಟ್ಯೂಬ್ ಚಾನಲ್ ಹೊಂದಿರುವ ಚಂದ್ರಚೂಡ್ ಅವರು ಇತ್ತೀಚೆಗೆ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ನಿರ್ಮಾಣದ ‘ಜನ ನಾಯಗನ್’ ಸಿನಿಮಾ ಬಗ್ಗೆ ಮಾತನಾಡಿದ್ದರು. ಆ ವಿಡಿಯೋದಲ್ಲಿ ಅವರು ನಿರ್ಮಾಪಕರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ.

‘ಕೆಲವು ನಿರ್ಮಾಪಕರು ಹೀರೋಗಳ ವಿಚಾರ ಬಂದರೆ ಅವರ ಮನೆಯ ಕಮೋಡ್ ಕೂಡ ಚಿನ್ನದಲ್ಲಿ ನೋಡಿಕೊಳ್ಳುತ್ತಾರೆ. ಅವರ ಮನೆಗೆ ಕಾಂಡೋಮ್ ಕೂಡ ತೆಗೆದುಕೊಂಡು ಹೋಗುತ್ತಾರೆ. ಆದರೆ ತಂತ್ರಜ್ಞರು, ಲೈಟ್ ಬಾಯ್ಸ್, ಪ್ರೊಕ್ಷಡನ್ ಹುಡುಗರು, ರೈಟರ್ ವಿಚಾರ ಬಂದರೆ ಸರಿಯಾಗಿ ಹಣ ಕೊಡಲ್ಲ. ಹೇಳಿಕೊಳ್ಳೋಕೆ ಆಗಲ್ಲ. ದೊಡ್ಡ ದೊಡ್ಡ ನಿರ್ಮಾಪಕರು ಈ ರೀತಿ ಮಾಡುತ್ತಾರೆ’ ಎಂದು ಯೂಟ್ಯೂಬ್ ವಿಡಿಯೋದಲ್ಲಿ ಚಂದ್ರಚೂಡ್ ಮಾತನಾಡಿದ್ದರು.

ಆದ್ದರಿಂದ ಚಂದ್ರಚೂಡ್ ವಿರುದ್ಧ ದೂರು ನೀಡಲಾಗಿದೆ. ‘ಅಶ್ಲೀಲ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಸಾರ್ವಜನಿಕವಾಗಿ ಯೂಟ್ಯೂಬ್ ಮೂಲಕ ನೀಡಿದ್ದಾರೆ. ಈ ಹೇಳಿಕೆಗಳು ಸಂಪೂರ್ಣ ಕನ್ನಡ ಚಲನಚಿತ್ರ ನಿರ್ಮಾಪಕರ ಗೌರವ, ಘನತೆ ಹಾಗೂ ಮಾನಕ್ಕೆ ಗಂಭೀರ ಹಾನಿ ಉಂಟುಮಾಡಿದೆ. ಸಮಾಜದಲ್ಲಿ ನಿರ್ಮಾಪಕರ ಬಗ್ಗೆ ತಪ್ಪು ಕಲ್ಪನೆ, ದ್ವೇಷ ಮತ್ತು ಅವಿಶ್ವಾಸ ಮೂಡಿಸುವ ಉದ್ದೇಶದಿಂದ ಮಾತನಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಯೂಟ್ಯೂಬ್ ಎಂಬ ಡಿಟಿಟಲ್ ಮಾಧ್ಯಮವನ್ನು ದುರುಪಯೋಗಪಡಿಸಿಕೊಂಡು ಅಶ್ಲೀಲ ಮತ್ತು ಕಾನೂನು ವಿರೋಧಿ ವಿಷಯವನ್ನು ಪ್ರಚಾರ ಮಾಡಲಾಗಿದೆ. ಅನೇಕ ಅವಾಚ್ಯ ಶಬ್ದಗಳಲ್ಲಿ ಮಾತನಾಡಿದ್ದಾರೆ. ಇದರ ಬಗ್ಗೆ ಸಂಘಕ್ಕೆ ಅನೇಕ ನಿರ್ಮಾಪಕರು ಮತ್ತು ಕೆವಿಎನ್ ಸಂಸ್ಥೆಯವರು ದೂರು ನೀಡಿರುತ್ತಾರೆ. ಚಂದ್ರಚೂಡ್ ವಿರುದ್ಧ ಪ್ರತಿಭಟನೆ ಮಾಡಲು ಕೆಲವು ನಿರ್ಮಾಪಕರು ತಯಾರಾಗಿರುತ್ತಾರೆ’ ಎಂದು ದೂರಿನಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಗಿಲ್ಲಿಗೆ ಒಳ್ಳೆಯದಾಗಲಿ, ಅವನ ಹೆಸರಲ್ಲಿ ನಡೆಯುತ್ತಿರುವ ನಾಟಕಕ್ಕಲ್ಲ; ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್

‘ಸಮಾಜದಲ್ಲಿ ಶಾಂತಿ ಉಂಟುಮಾಡಲು ತಕ್ಷಣವಾಗಿ ಚಂದ್ರಚೂಡ್ ವಿರುದ್ಧ ಮಾನಹಾನಿ, ಉದ್ದೇಶಪೂರ್ವಕ ಅವಮಾನ, ಸಮಾಜದಲ್ಲಿ ಶಾಂತಿಭಂಗ ಮಾಡುವ ಹೇಳಿಕೆ, ಮಹಿಳೆಯರ ಗೌರವಕ್ಕೆ ಧಕ್ಕೆ ಹಾಗೂ ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಕಾನೂನುಬದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ದೂರು ಸಲ್ಲಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.