ಗಿಲ್ಲಿಗೆ ಒಳ್ಳೆಯದಾಗಲಿ, ಅವನ ಹೆಸರಲ್ಲಿ ನಡೆಯುತ್ತಿರುವ ನಾಟಕಕ್ಕಲ್ಲ; ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್
ಬಿಗ್ ಬಾಸ್ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್, ಗಿಲ್ಲಿ ಅವರ ಜನಪ್ರಿಯತೆಯನ್ನು ಹಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಗಿಲ್ಲಿ ಹೆಸರಿನಲ್ಲಿ ಜಾತಿ, ಪ್ರಾದೇಶಿಕತೆ, ರಾಜಕೀಯ ಮತ್ತು ಸಿನಿಮಾ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಈ ದೊಂಬರಾಟವನ್ನು ಖಂಡಿಸಿದ ಚಂದ್ರಚೂಡ್, ಗಿಲ್ಲಿ ಪ್ರತಿಭಾವಂತನಾಗಿದ್ದು, ಅವನಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಯಾರಾದರೂ ಒಬ್ಬರು ಹೆಸರು ಮಾಡುತ್ತಿದ್ದಾರೆ ಎಂದರೆ ಅದರ ಲಾಭ ಪಡೆಯಲು ಕೆಲವರು ಮುಂದಾಗುತ್ತಾರೆ. ಅವರ ಜನಪ್ರಿಯತೆಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆಯುತ್ತದೆ. ಗಿಲ್ಲಿ ವಿಷಯದಲ್ಲಿ ಹೀಗೆಯೇ ಆಗುತ್ತಿದೆ ಎಂದು ಸುದೀಪ್ (Sudeep) ಆಪ್ತ, ಬಿಗ್ ಬಾಸ್ ಮಾಜಿ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.ಗಿಲ್ಲಿಗೆ ಒಳ್ಳೆಯದಾಗಲಿ ಎಂದು ಹಾರೈಸಿರೋ ಅವರು, ಗಿಲ್ಲಿ ಹೆಸರಲ್ಲಿ ನಡೆಯುತ್ತಿರುವ ದೊಂಬರಾಟವನ್ನು ಖಂಡಿಸಿದ್ದಾರೆ.
ಇದೇ ಮೊದಲ ಬಾರಿಗೆ ತಮ್ಮದೇ ಯೂಟ್ಯೂಬ್ ಚಾನೆಲ್ ಪಾಡ್ಕಾಸ್ಟ್ನಲ್ಲಿ ಚಕ್ರವರ್ತಿ ಮಾತನಾಡಿದ್ದಾರೆ. ‘ಕಾಲಾಪತ್ಥರ್ ಸಿನಿಮಾದಲ್ಲಿ ಗಿಲ್ಲಿ ನನ್ನ ಜೊತೆ ನಟಿಸಿದ್ದ. ಅವನನ್ನು ಹತ್ತಿರದಿಂದ ಕಂಡಿದ್ದೇನೆ. ಅವನು ಬಡವರ ಮಗ. ಯೂಟ್ಯೂಬ್ ಮಾಡಿಕೊಂಡು, ವಿವಿಧ ಶೋ ಮಾಡಿಕೊಂಡು ಇಲ್ಲಿಗೆ ತಲುಪಿದ್ದಾನೆ. ಹೊರಗೆ ಅವನ ಹೆಸರಲ್ಲಿ ಒಂದಷ್ಟು ಜನರು ಪಿಆರ್ ಮಾಡುತ್ತಿದ್ದಾರೆ. ಗಿಲ್ಲಿ ಆ ನಟನ ಪರ, ಈ ನಟನ ವಿರುದ್ಧ, ಗಿಲ್ಲಿ ಆ ಜಾತಿ ಎಂದೆಲ್ಲ ದೊಡ್ಡ ಮಾಫಿಯಾ ನಡೆಯುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ಈ ಬೆಳವಣಿಗೆ ಗಿಲ್ಲಿಗೆ ಗೊತ್ತಿಲ್ಲ ಎಂದು ನನಗೆ ಅನಿಸುತ್ತದೆ. ಆಚೆ ಬಂದಮೇಲೆ ಇದರ ಪರಿಣಾಮ, ದುಷ್ಪರಿಣಾಮ ಎರಡೂ ತಿಳಿಯುತ್ತದೆ. ಗಿಲ್ಲಿ ನಂಗೂ ಇಷ್ಟ. ಆದರೆ, ಅವನ ಹೆಸರಲ್ಲಿ ದೊಂಬರಾಟ ಇಷ್ಟ ಆಗ್ತಿಲ್ಲ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಗಿಲ್ಲಿ ಎಂದರೆ ಯಾಕೆ ಅಷ್ಟು ಇಷ್ಟ? ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಹೇಳಿದ್ದಿಷ್ಟು..
‘ಅವನ ಹೆಸರಲ್ಲಿ ಜಾತಿ ಶುರು ಮಾಡಿದ್ದಾರೆ, ಅವನ ಹೆಸರಲ್ಲಿ ಪ್ರಾದೇಶಿಕತೆ ಶುರು ಮಾಡಿದ್ದರೆ. ರಾಜಕೀಯ ಮಾಡಿದ್ದಾರೆ. ಈಗ ಅವನ ಹೆಸರಲ್ಲಿ ಸಿನಿಮಾ ಮಾಡ್ತೀನಿ ಎಂದು ಹೊರಟಿದ್ದಾರೆ. ಆರು ತಿಂಗಳು ಬಿಟ್ಟು ಇವರೆಲ್ಲ ಏನು ಮಾಡ್ತಾರೆ ಎಂಬುದನ್ನು ನೋಡಬೇಕಿದೆ. ಆತ ಪ್ರತಿಭಾವಂತ, ಅವನಿಗೆ ಒಳ್ಳೆದಾಗಬೇಕು. ಆದರೆ, ಅವನ ಹೆಸರಲ್ಲಿ ನಡೆಯುತ್ತಿರುವ ದೊಂಬರಾಟಕ್ಕೆ ಪ್ರೋತ್ಸಾಹಿಸಬಾರದು. ಇದು ಸಂಪತ್ತಿಗೆ ಸವಾಲ್ ಸಿನಿಮಾ ರೀತಿ ಕಾಣಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:21 am, Sat, 17 January 26




