‘ಕೆಡಿ’ ಸಿನಿಮಾ ಅಶ್ಲೀಲ ಹಾಡು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ; ಲೋಕಸಭೆಯಲ್ಲಿ ಘೋಷಣೆ

ನಿರ್ದೇಶಕ ಜೋಗಿ ಪ್ರೇಮ್ ಬರೆದ ‘ಸರ್ಸೆ ನಿನ್ನ ಸರೆಗ’ ಹಾಡನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಲೋಕಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದ್ದು, ಅಧಿಕೃವಾಗಿ ಬ್ಯಾನ್ ಮಾಡುವಂತೆ ಸೂಚಿಸಲಾಗಿದೆ. ಇದರಿಂದಾಗಿ ‘ಕೆಡಿ’ ಸಿನಿಮಾಗೆ ತೀವ್ರ ಹಿನ್ನಡೆ ಆದಂತಾಗಿದೆ. ಆ ಕುರಿತು ಇಲ್ಲಿದೆ ಹೆಚ್ಚಿನ ಮಾಹಿತಿ..

‘ಕೆಡಿ’ ಸಿನಿಮಾ ಅಶ್ಲೀಲ ಹಾಡು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ; ಲೋಕಸಭೆಯಲ್ಲಿ ಘೋಷಣೆ
Jogi Prem, Sanjay Dutt, Nora Fatehi

Updated on: Mar 18, 2026 | 5:48 PM

ಸಂಜಯ್ ದತ್ ಮತ್ತು ನೋರಾ ಫತೇಹಿ ನಟಿಸಿದ ‘ಸರ್ಕೆ ಚುನರ್ ತೇರಿ’ (Sarke Chunar Teri Sarke) ಹಾಡಿನ ವಿರುದ್ಧ ದೇಶಾದ್ಯಂತ ವ್ಯಕ್ತವಾದ ತೀವ್ರ ಆಕ್ರೋಶದ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಹಾಡನ್ನು ಅಧಿಕೃತವಾಗಿ ನಿಷೇಧಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ (KD) ಸಿನಿಮಾದ ಈ ಹಾಡಿನಿಂದ ಇಡೀ ಕನ್ನಡ ಚಿತ್ರರಂಗಕ್ಕೆ ಮುಜುಗರ ಆದಂತಾಗಿದೆ.

ಸಮಾಜವಾದಿ ಪಕ್ಷದ ಸಂಸದ ಆನಂದ್ ಬಡೋರಿಯಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವಿನಿ ವೈಷ್ಣವ್, ‘ಈ ಹಾಡನ್ನು ಈಗಾಗಲೇ ನಿಷೇಧಿಸಲಾಗಿದೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣ ಪ್ರಶ್ನಾತೀತವಲ್ಲ. ಸಂವಿಧಾನದ ರಚನೆಕಾರರು ವಿಧಿಸಿರುವ ಸಮಂಜಸವಾದ ನಿರ್ಬಂಧಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದು ತಿಳಿಸಿದರು. ಸಂವಿಧಾನದ ವಿಧಿ 19(2) ಉಲ್ಲೇಖಿಸಿದ ಸಚಿವರು, ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಗೆ ಧಕ್ಕೆ ಬಂದಾಗ ಇಂತಹ ನಿರ್ಬಂಧಗಳನ್ನು ಹೇರಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೇಳಿದರು.

ಡಿಜಿಟಲ್ ಮಾಧ್ಯಮಗಳ ಮೂಲಕ ವಿಷಯಗಳು ವೇಗವಾಗಿ ಹರಡುತ್ತಿರುವ ಇಂದಿನ ದಿನಗಳಲ್ಲಿ ಸಮಾಜದ ಹಿತದೃಷ್ಟಿಯಿಂದ ಇಂತಹ ಕ್ರಮಗಳು ಅನಿವಾರ್ಯ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ‘ಸಮಾಜದ ರಕ್ಷಣೆಗಾಗಿ, ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವಂಚಿತ ವರ್ಗಗಳ ಗೌರವ ಕಾಪಾಡಲು ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧವಿದೆ’ ಎಂದು ವೈಷ್ಣವ್ ಅವರು ಲೋಕಸಭೆಯಲ್ಲಿ ತಿಳಿಸಿದರು.

ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಬಿಡುಗಡೆಯಾದ ತಕ್ಷಣವೇ ಅದರ ಸಾಹಿತ್ಯ ಮತ್ತು ದೃಶ್ಯಗಳು ಅಶ್ಲೀಲತೆಯಿಂದ ಕೂಡಿವೆ ಎಂಬ ಆರೋಪ ಕೇಳಿಬಂದಿತ್ತು. ಇದು ಮಹಿಳೆಯರನ್ನು ಕೀಳಾಗಿ ಚಿತ್ರಿಸುತ್ತದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಕರ್ನಾಟಕ ಮತ್ತು ಹರಿಯಾಣ ಮಹಿಳಾ ಆಯೋಗಗಳು ಈ ಹಾಡಿನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದವು.

ಇದನ್ನೂ ಓದಿ: ಪ್ರೇಮ್​​ಗೆ ಆ ದಿನವೇ ಎಚ್ಚರಿಕೆ ನೀಡಿದ್ದೆ: ಅಶ್ಲೀಲ ಹಾಡಿನ ವಿವಾದಕ್ಕೆ ನೋರಾ ಫತೇಹಿ ತಿರುಗೇಟು

ನಟ ರವಿ ಕಿಶನ್, ನಟಿ ಕಂಗನಾ ರಣಾವತ್, ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂಡ ಹಾಡಿನ ಸಾಹಿತ್ಯ ಆಕ್ಷೇಪಾರ್ಹವಾಗಿದೆ ಎಂದು ಸಾರ್ವಜನಿಕವಾಗಿ ಖಂಡಿಸಿದ್ದರು. ಈ ಹಾಡಿನ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ನೋರಾ ಫತೇಹಿ ಅವರು ಚಿತ್ರತಂಡವೇ ಇದಕ್ಕೆಲ್ಲ ಹೊಣೆ ಎಂದು ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳು ‘ಕೆಡಿ’ ಸಿನಿಮಾಗೆ ಅಪಖ್ಯಾತಿ ತಂದಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us