Chaithra Kotoor: ಚೈತ್ರಾ ಕೋಟೂರ್​ ಮದುವೆ ರಂಪಾಟ! ಒಂದೇ ದಿನದಲ್ಲಿ ಪತಿ ನಾಗಾರ್ಜುನ್​ ಬಿಟ್ಟು ಹೋಗಿದ್ದೇಕೆ?

Chaithra Kotoor Marriage: ಸಂಘಟನೆಯೊಂದರ ಬೆಂಬಲದೊಂದಿಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ಚೈತ್ರಾ ಜೊತೆ ಮದುವೆ ಆಗಲು ನಾಗಾರ್ಜುನ್​ ಒಪ್ಪಿಕೊಂಡಿದ್ದರು. ಆದರೆ ಮದುವೆ ನಡೆದ ಬಳಿಕ ನಾಗಾರ್ಜುನ್​ ಮನೆಯವರು ಬಂದು ಗಲಾಟೆ ಮಾಡಿದ್ದಾರೆ. ಹಾಗಾಗಿ ನಾಗಾರ್ಜುನ್​ ಮನಸ್ಸು ಬದಲಾಯಿಸಿದ್ದಾರೆ!

Chaithra Kotoor: ಚೈತ್ರಾ ಕೋಟೂರ್​ ಮದುವೆ ರಂಪಾಟ! ಒಂದೇ ದಿನದಲ್ಲಿ ಪತಿ ನಾಗಾರ್ಜುನ್​ ಬಿಟ್ಟು ಹೋಗಿದ್ದೇಕೆ?
ಚೈತ್ರಾ ಕೋಟೂರ್​ - ನಾಗಾರ್ಜುನ್​ ಮದುವೆ
Edited By:

Updated on: Mar 29, 2021 | 11:12 AM

ಬಿಗ್​ ಬಾಸ್ ಮಾಜಿ​ ಸ್ಪರ್ಧಿ ಚೈತ್ರಾ ಕೋಟೂರ್​ ಅವರು ಕನ್​ಸ್ಟ್ರಕ್ಷನ್ ಮತ್ತು ರಿಯಲ್​ ಎಸ್ಟೇಟ್​​ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ನಾಗಾರ್ಜುನ್​ ಎಂಬುವವರ ಜೊತೆ ಭಾನುವಾರ (ಮಾ.28) ಬೆಳಗ್ಗೆ ಸಿಂಪಲ್ ಆಗಿ ಮದುವೆ ಆಗಿದ್ದರು. ಆದರೆ ವಿವಾಹವಾಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ ನಾಗಾರ್ಜುನ್​ ಮನೆಯವರು ತಕರಾರು ತೆಗೆದಿದ್ದಾರೆ. ದೊಡ್ಡಮಟ್ಟದಲ್ಲಿ ಈ ಮದುವೆ ವಿವಾದಕ್ಕೆ ಕಾರಣ ಆಗಿದೆ. ಅಷ್ಟಕ್ಕೂ ಹೀಗೆ ಆಗಲು ಕಾರಣ ಏನು ಎಂದು ಟಿವಿ9 ಡಿಜಿಟಲ್​ಗೆ ಚೈತ್ರಾ ಕೋಟೂರ್​ ಪ್ರತಿಕ್ರಿಯೆ ನೀಡಿದ್ದಾರೆ.

ಚೈತ್ರಾ ಹೇಳಿಕೊಂಡಿರುವಂತೆ, ಅವರಿಬ್ಬರ ಪ್ರೀತಿಗೆ ನಾಗಾರ್ಜುನ್​ ಮನೆಯವರ ಒಪ್ಪಿಗೆ ಇರಲಿಲ್ಲ. ಆದರೆ ಸಂಘಟನೆಯೊಂದರ ಬೆಂಬಲದೊಂದಿಗೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ಮದುವೆ ಆಗಲು ನಾಗಾರ್ಜುನ್​ ಒಪ್ಪಿಕೊಂಡರು. ಆದರೆ ಮದುವೆ ನಡೆದ ಬಳಿಕ ನಾಗಾರ್ಜುನ್​ ಮನೆಯವರು ಬಂದು ಗಲಾಟೆ ಮಾಡಿದ್ದಾರೆ. ಬೀದಿಯಲ್ಲಿ ಜಗಳ ಮಾಡುವುದು ಬೇಡ, ಮನೆಯಲ್ಲಿ ಕುಳಿತು ಮಾತಾಡೋಣ ಎಂದು ಕೋಲಾರದಲ್ಲಿ ಇರುವ ತಮ್ಮ ನಿವಾಸಕ್ಕೆ ಚೈತ್ರಾ ತೆರಳಿದರು. ಆದರೆ ಇಲ್ಲಿಯೂ ನಾಗಾರ್ಜುನ್​ ಕುಟುಂಬದವರು ಜಗಳ ಮಾಡಿದರು. ನಂತರ ಈ ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿತು.

‘ನಾಗಾರ್ಜುನ್​ ಮನೆಯವರು ಮೊದಲಿನಿಂದ ವಿರೋಧಿಸುತ್ತ ಇದ್ದರು. ಇವನು ಒಮ್ಮೆ ಮದುವೆ ಆಗುತ್ತೇನೆ ಎನ್ನುತ್ತಿದ್ದ. ಇನ್ನೊಮ್ಮೆ ಆಗಲ್ಲ ಎನ್ನುತ್ತಿದ್ದ. ಯಾಕೆ ಹೀಗೆ ಮಾಡುತ್ತಿದ್ದಾನೆ? ಇಷ್ಟು ದಿನ ಜೊತೆಗಿದ್ದು ಈಗ ಮೋಸ ಮಾಡುತ್ತಾನಾ ಎಂದು ನನಗೆ ತಲೆ ಕೆಡುತ್ತಿತ್ತು. ನಿನ್ನೆ ಮದುವೆ ಆದೆವು. ಆದರೆ ಈಗ ಮನಸ್ಸು ಬದಲಾಯಿಸಿದ್ದಾನೆ’ ಎಂದು ಚೈತ್ರಾ ಹೇಳಿದ್ದಾರೆ.

‘ನಾಗಾರ್ಜುನ್​ ಮನೆಯವರು ಅವನ ಮೈಂಡ್​ ವಾಶ್​ ಮಾಡಿದ್ದಾರೆ. ನನ್ನನ್ನು ಸಿನಿಮಾದವಳು ಎಂಬ ಕಾರಣಕ್ಕೆ ನಿಂದಿಸಿದ್ದಾರೆ. ಮಂಡ್ಯಕ್ಕೆ ಬಂದರೆ ಹುಷಾರ್​ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ನಮ್ಮ ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ. ಇದರ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಲು ನಾನು ತೆರಳಿದ್ದೆ. ನಂತರ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳೋಣ ಎಂದು ಮನವಿ ಮಾಡಿಕೊಂಡರು ಎಂಬ ಕಾರಣಕ್ಕೆ ದೂರು ನೀಡಲಿಲ್ಲ. ಆದರೆ ಈಗ ಮತ್ತೆ ವಿವಾದ ಮಾಡುತ್ತಿದ್ದಾರೆ’ ಎಂದು ಚೈತ್ರಾ ಪ್ರತಿಕ್ರಿಯೆ ನೀಡಿದ್ದಾರೆ. ನಾಗಾರ್ಜುನ್​ ಎರಡು ದಿನ ಸಮಯ ತೆಗೆದುಕೊಂಡಿದ್ದಾರೆ. ತವರು ಮನೆಯಲ್ಲಿ ಚೈತ್ರಾ ಇದ್ದಾರೆ. ಎರಡು ದಿನಗಳ ಬಳಿಕ ಮತ್ತೆ ಮಾತುಕತೆ ನಡೆಸುವುದಾಗಿ ಚೈತ್ರಾ ತಿಳಿದ್ದಾರೆ.

ರಂಗಭೂಮಿ ಕಲಾವಿದೆಯಾಗಿ, ಸಿನಿಮಾ ನಟಿಯಾಗಿ, ಬಿಗ್​ ಬಾಸ್​ ಸ್ಪರ್ಧಿಯಾಗಿ, ಜಾಹೀರಾತು ನಿರ್ದೇಶಕಿಯಾಗಿ ಚೈತ್ರಾ ಗುರುತಿಸಿಕೊಂಡಿದ್ದಾರೆ. ‘ಸೂಜಿದಾರ’ ಸಿನಿಮಾದಲ್ಲಿ ಅವರೊಂದು ಗಮನಾರ್ಹ ಪಾತ್ರ ಮಾಡಿದ್ದರು. ಬಿಗ್​ ಬಾಸ್​ ಕನ್ನಡ ಸೀಸನ್​ 7ರಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ಲಗ್ನ ಪತ್ರಿಕೆ ಸೀರಿಯಲ್​ನಲ್ಲಿ ಅವರೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಇದನ್ನೂ ಓದಿ: Hudugaru Tumba Ollevru ಹುಡುಗರು ತುಂಬಾ ಒಳ್ಳೆಯವ್ರು ಎಂದು ಹಾಡಿ ಹೊಗಳಿದ ಚೈತ್ರಾ ಕೋಟೂರು

Published On - 11:04 am, Mon, 29 March 21