
ಚಂದನ್ ಶೆಟ್ಟಿ ಅವರು ಈಗಾಗಲೇ ಹಲವು ಹಿಟ್ ಹಾಡುಗಳನ್ನು ನೀಡಿದ್ದಾರೆ. ಅದರಲ್ಲೂ ಅವರ ಆಲ್ಬಂ ಸಾಂಗ್ಗಳು ತುಂಬಾನೇ ಫೇಮಸ್. ಈಗ ಅವರು ವೆಸ್ಟ್ ಇಂಡೀಸ್, ಆರ್ಸಿಬಿಯ ಮಾಜಿ ಆಟಗಾರ ಕ್ರಿಸ್ ಗೇಲ್ ಜೊತೆ ವಿಡಿಯೋ ಸಾಂಗ್ ಒಂದನ್ನು ಶೂಟ್ ಮಾಡುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಕ್ರಿಸ್ ಗೇಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಚಾರ ಕೇಳಿ ಚಂದನ್ ಶೆಟ್ಟಿ (Chandan Shetty) ಅಭಿಮಾನಿಗಳು ಹಾಗೂ ಕನ್ನಡಿಗರಿಗೆ ಖುಷಿ ಆಗಿದೆ. ಈ ವಿಡಿಯೋ ಸಾಂಗ್ ಯಾವ ರೀತಿಯಲ್ಲಿ ಇರಲಿದೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.
ಚಂದನ್ ಶೆಟ್ಟಿ ಅವರು ಹಲವು ಹಿಟ್ ಹಾಡುಗಳನ್ನು ನೀಡುತ್ತಾ ಬಂದಿದ್ದಾರೆ. ಅವರ ಹಾಡುಗಳಿಗೆ ದೊಡ್ಡ ಅಭಿಮಾನಿ ವರ್ಗ ಇದೆ. ಆದರೆ, ಇತ್ತೀಚೆಗೆ ಅವರು ಹಾಡುಗಳನ್ನು ಮಾಡೋದನ್ನು ಕಡಿಮೆ ಮಾಡಿದ್ದಾರೆ. ಅಷ್ಟಾಗಿ ಸಾಂಗ್ಗಳನ್ನು ಅವರಿಂದ ಮೂಡಿ ಬಂದಿರಲಿಲ್ಲ. ಬದಲಿಗೆ ನಟನೆಯ ಬಗ್ಗೆ ಹೆಚ್ಚು ಆಸಕ್ತಿ ತೋರಿಸಿದ್ದರು. ಇದರ ಜೊತೆಗೆ ಅವರ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತ ಉಂಟಾಯಿತು. ಈಗ ಅದೆಲ್ಲವನ್ನೂ ಮರೆತು ಮುಂದೆ ಸಾಗುತ್ತಿದ್ದಾರೆ.
ಚಂದನ್ ಶೆಟ್ಟಿ ಅವರು ಸದ್ಯ ವಿದೇಶದಲ್ಲಿ ಇದ್ದಾರೆ. ಕ್ರಿಸ್ ಗೇಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಚಂದನ್ ಶೆಟ್ಟಿ ಜೊತೆ ವಿಡಿಯೋ ಸಾಂಗ್ ಶೂಟ್ ಮಾಡುತ್ತಿರುವುದಾಗಿ ಹೇಳಿದ್ದಾರೆ.
‘ನಾವು ಹಾಡು ಮಾಡುತ್ತಿದ್ದೇವೆ. ಅದರ ಹೆಸರು ಲೈಫ್ ಈಸ್ ಕಸಿನೋ. ನಾನು ಎಗ್ಸೈಟ್ ಆಗಿದ್ದೇನೆ. ನಾನು ಈ ಹಾಡಿನ ಫ್ಯಾನ್ ಆಗಿದ್ದೇನೆ’ ಎಂದಿದ್ದಾರೆ ಚಂದನ್ ಶೆಟ್ಟಿ. ಇದಕ್ಕೆ ಕ್ರಿಸ್ ಗೇಲ್ ಕೂಡ ಖುಷಿ ಆಗಿದ್ದು, ಅವರು ಹೆಮ್ಮೆಯಿಂದ ಈ ಬಗ್ಗೆ ಹೇಳಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾಯಿರಿ ಎಂದಿದ್ದಾರೆ.
ಇದನ್ನೂ ಓದಿ: ‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ
ಕ್ರಿಸ್ ಗೇಲ್ ಅವರಿಗೆ ಬೆಂಗಳೂರಿನ ಬಗ್ಗೆ, ಕನ್ನಡಿಗರ ವಿಶೇಷ ಪ್ರೀತಿ ಇದೆ. ಇದಕ್ಕೆ ಕಾರಣ ಆರ್ಸಿಬಿ. ಅವರು ಹಲವು ವರ್ಷಗಳ ಕಾಲ ಆರ್ಸಿಬಿ ಪರ ಆಡಿದ್ದರು. ಅವರು ಅನೇಕ ಬಾರಿ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಆದರೆ, ಈವರೆಗೆ ಅವರು ಕನ್ನಡದ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.