ಚಂದನ್ ಶೆಟ್ಟಿ (Chandan Shetty) ಕನ್ನಡದ ಜನಪ್ರಿಯ ರ್ಯಾಪರ್ಗಳಲ್ಲಿ ಪ್ರಮುಖರು. ಕಾಲ-ಕಾಲಕ್ಕೆ ಹೊಸ ಹಾಡುಗಳೊಟ್ಟಿಗೆ ಜನರ ಮುಂದೆ ಬರುತ್ತಲೇ ಇರುತ್ತಾರೆ. ಸಿನಿಮಾಗಳಿಗೂ ಸಂಗೀತ ನೀಡಿರುವ ಚಂದನ್ ಶೆಟ್ಟಿ, ಇದೀಗ ನಟನಾಗಿಯೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೆಲ್ಲದರ ನಡುವೆ ಹೊಸ ವರ್ಷಕ್ಕೆ ಹೊಸದೊಂದು ರ್ಯಾಪ್ ಹಾಡಿನೊಂದಿಗೆ ಚಂದನ್ ಶೆಟ್ಟಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಟಪಾಂಗುಚಿ ಮಾದರಿಯ ಹಾಡೊಂದನ್ನು ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದು, ಹಾಡಿನಲ್ಲಿ ರಂಗಾಯಣ ರಘ ಸಹ ಇದ್ದಾರೆ. ಜೊತೆಗೆ ಗಿಚ್ಚಿ ಗಿಲಿಗಿಲಿ ಕಲಾವಿದರೂ ಸಹ ಇದ್ದಾರೆ.
ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆಯಲ್ಲಿ ಚಂದನ್ ಶೆಟ್ಟಿ ರ್ಯಾಪ್ ಮಾದರಿಯ ಹಾಡೊಂದನ್ನು ಬಿಡುಗಡೆ ಮಾಡುತ್ತಾ ಬಂದಿದ್ದಾರೆ. ಚಂದನ್ ಶೆಟ್ಟಿಯವರ ಹಾಡುಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಪ್ರತಿ ಬಾರಿಯಂತೆ ಈ ಬಾರಿ ಸಹ ಡಿಸೆಂಬರ್ ತಿಂಗಳಲ್ಲಿ ಚಂದನ್ ಶೆಟ್ಟಿ ಹೊಸದೊಂದು ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ‘ವಾಟ್ ಡೂ ಮಾಮ’ ಎಂದು ಪ್ರಾರಂಭವಾಗುವ ಅಪ್ಪಟ್ಟ ದೇಸಿ ಶೈಲಿಯ ಟಪಾಂಗುಚಿ ಹಾಡನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ.
ಯುವಕರ “ಪ್ರಾಬ್ಲಮ್”ಗಳನ್ನು ಬಿಂಬಿಸುವ ಹಾಡು ಇದಾಗಿದ್ದು, ‘ಪ್ರಾಬ್ಲಮ್ ಪ್ರಾಬ್ಲಮ್ ಪ್ರಾಬ್ಲಮ್ ವಾಟ್ ಟು ಡು ಮಾಮ?’ ಎಂದೇ ಹಾಡು ಆರಂಭವಾಗುತ್ತದೆ. ಇಷ್ಟು ದಿನ ಬಿಡುಗಡೆಯಾಗಿರುವ ಚಂದನ್ ಶೆಟ್ಟಿ ಅವರ ರ್ಯಾಪ್ ಹಾಡುಗಳು ಹೆಚ್ಚಾಗಿ ಆಧುನಿಕ ಜೀವನ ಶೈಲಿಯ ಮೇಲೆ, ಸ್ವಾಗ್ ಮೇಲೆ ಕೇಂದ್ರೀಕೃತವಾಗಿತ್ತು ಆದರೆ ಈ ಹಾಡು ಪಕ್ಕಾ ಲೋಕಲ್ ಶೈಲಿಯಲ್ಲಿ ಮೂಡಿಬಂದಿದೆ. ಕಂಠೀರವ ಸ್ಟುಡಿಯೋದಲ್ಲಿ ಬಾರ್ನ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಚಂದನ್ ಶೆಟ್ಟಿ ಈ ಹಾಡಿನಲ್ಲಿ ಪಕ್ಕಾ ಲೋಕಲ್ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟ ರಂಗಾಯಣ ರಘು ಅವರು ಚಂದನ್ ಶೆಟ್ಟಿ ಅವರ ಸೋದರಮಾವನ ಪಾತ್ರದಲ್ಲಿ ನಟಿಸಿದ್ದಾರೆ. ಜನಪ್ರಿಯ ರಿಯಾಲಿಟಿ ಶೋ ‘ಗಿಚ್ಚಿ ಗಿಲಿಗಿಲಿ’ಯ ಕಲಾವಿದರಾದ ರಾಘವೇಂದ್ರ, ಆರ್ ಜೆ ವಿಕ್ಕಿ, ಹುಲಿ ಕಾರ್ತಿಕ್, ನಿತಿನ್ ಅಮಿನ್, ಶಿಡ್ ಶ್ಯಾಡೋ ಶಿವ, ಎನ್ ಸಿ ಅಯ್ಯಪ್ಪ ಮುಂತಾದವರು ಈ ಅದ್ದೂರಿ ರ್ಯಾಪ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಮೀಟರ್ ನನ್ನದು, ಮ್ಯಾಟರ್ ಅವರದ್ದು ಬಿಜೆಪಿ ಹಾಡು ಹುಟ್ಟಿದ ಬಗ್ಗೆ ಚಂದನ್ ಶೆಟ್ಟಿ ಮಾತು
ಇಷ್ಟು ದಿನ ಚಂದನ್ ಶೆಟ್ಟಿ ಅವರ ಸುಪ್ರಸಿದ್ದ ರ್ಯಾಪ್ ಸಾಂಗ್ಸ್ ಗಳನ್ನು ಬೇರೆ-ಬೇರೆ ನಿರ್ಮಾಪಕರು ನಿರ್ಮಾಣ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಚಂದನ್ ಶೆಟ್ಟಿ ಅವರೆ ತಮ್ಮ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ. ವಿಜಯ್ ಈಶ್ವರ್ ಅವರ ಜೊತೆಗೂಡಿ ಹಾಡನ್ನು ಬರೆದಿದ್ದಾರೆ. ರಿಯಾಲಿಟಿ ಶೋ ನಲ್ಲಿ ಜನಪ್ರಿಯರಾಗಿರುವ ಮುರುಗ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಉದಯಲೀಲ ಛಾಯಾಗ್ರಹಣ, ಸತೀಶ್ ಚಂದ್ರ ಸಂಕಲನ ಹಾಗೂ ದಿವಾಕರ್ ಅವರ ಕಲಾ ನಿರ್ದೇಶನ ಈ ಹಾಡಿಗೆ ಇದೆ. ಚಂದನ್ ಶೆಟ್ಟಿ ಅವರೆ ಸಂಗೀತ ಸಂಯೋಜಿಸಿ, ಹಾಡಿ, ನಿರ್ದೇಶನವನ್ನೂ ಮಾಡಿರುವ ಈ ಹಾಡು ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಮತ್ತು ಹೊಸವರ್ಷದ ಆಗಮನದ ಸಮಯವನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ