‘ಸಿಂಹಾಸನ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ರಾಜಕೀಯದ ಕಥಾಹಂದರ ಇರುವ ಈ ಸಿನಿಮಾಗೆ ಇತ್ತೀಚೆಗೆ ಮುಹೂರ್ತ ಮಾಡಲಾಯಿತು. ಬೆಂಗಳೂರಿನ ಆರ್‌ಪಿಸಿ ಲೇಔಟ್‌ದಲ್ಲಿರುವ ಶ್ರೀ ಗಾಯಿತ್ರಿ ವಿಶ್ವಕರ್ಮ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ. ಚಾಮರಾಜನಗರದ ಚಂದ್ರು ನಾಲ್‌ರೋಡ್ ಅವರು ಈ ಸಿನಿಮಾ ಮೂಲಕ ಹೀರೋ ಆಗಿದ್ದಾರೆ. ‘ಇಲ್ಲಿ ಹೀರೋ ಯಾರು ಎಂಬುದು ಮುಖ್ಯವಲ್ಲ, ಕಾನ್ಸೆಪ್ಟ್ ಮುಖ್ಯ’ ಎಂದು ಚಂದ್ರು ಹೇಳಿದ್ದಾರೆ. ‘ಸಿಂಹಾಸನ’ ಸಿನಿಮಾಗೆ ಡಿ.ಆರ್. ದಯಾನಂದಸ್ವಾಮಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಾಜಕೀಯದ ಕಥಾಹಂದರ ಇರಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಉದ್ಯಮಿ ವಿ. ಜಯಚಂದ್ರ ಅವರು ‘ಸಿಂಹಾಸನ’ ಸಿನಿಮಾದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ರಾಜಕೀಯ ಮುಖಂಡ ಮಾಸ್ತಿ ಗೌಡ ಅವರು ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದರು. ‘ಮುನೇಶ್ವರ ಪ್ರೊಡಕ್ಷನ್’ ಮೂಲಕ ಹೀರೋ ಚಂದ್ರು ಅವರೇ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ರೇಷ್ಮಾ ನಟಿಸುತ್ತಿದ್ದಾರೆ. ಇದು ರೇಷ್ಮಾ ಅವರ ಎರಡನೇ ಸಿನಿಮಾ. ಮುಹೂರ್ತ ಸಮಾರಂಭದಲ್ಲಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು.
‘ಇದು ಪೊಲಿಟಿಕಲ್ ಡ್ರಾಮಾ ಸಿನಿಮಾ. ಕೂಲಿ ಮಾಡುವ ಒಬ್ಬ ವ್ಯಕ್ತಿ ಎಂಎಲ್ಎ ಆಗುವ ಪ್ರಯತ್ನ ಮಾಡುವ ಕಥೆ ಇದರಲ್ಲಿ ಇದೆ. ಆತ ರಾಜಕೀಯಕ್ಕೆ ಬಂದರೆ ಏನಾಗುತ್ತದೆ ಎಂಬುದು ಈ ಸಿನಿಮಾದಲ್ಲಿದೆ. ಖುರ್ಚಿಗಾಗಿ ರಾಜಕೀಯದವರು ಪ್ರಯತ್ನಿಸುತ್ತಾರೆ. ಹಾಗಾಗಿ ಸಿಂಹಾಸನ ಎಂದು ಹೆಸರು ಇಡಲಾಗಿದೆ. ಇದು ಯಾವುದೇ ರಾಜಕೀಯದ ವ್ಯಕ್ತಿಯ ಬಗ್ಗೆಯೂ ಇರುವ ಸಿನಿಮಾ ಅಲ್ಲ. ಆದರೆ ಕನೆಕ್ಟ್ ಆಗಬಹುದು. ರಾಜಕೀಯದ ಜೊತೆ ಲವ್ ಸ್ಟೋರಿ ಕೂಡ ಈ ಸಿನಿಮಾದಲ್ಲಿದೆ. ಮೈಸೂರು, ಬೆಂಗಳೂರು, ಚೆನ್ನಪಟ್ಟಣದಲ್ಲಿ ಶೂಟಿಂಗ್ ಮಾಡುತ್ತೇವೆ’ ಎಂದು ನಿರ್ದೇಶಕ ದಯಾನಂದ ಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ರೌಡಿಸಂ ಕಥೆಗೆ ಹೊಸ ಬಣ್ಣ ನೀಡಿದ ‘ಕೆಂಡ’ ಸಿನಿಮಾ; ಟ್ರೇಲರ್ನಲ್ಲಿದೆ ಝಲಕ್
‘ನಾನು ಮೊದಲು ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದೆ. ಸಿನಿಮಾ ಮಾಡೋಣ ಅಂತ ಸ್ನೇಹಿತನೊಬ್ಬ ಕರೆದುಕೊಂಡು ಬಂದ. ಒಂದೆರಡು ಸಿನಿಮಾ ಮಾಡಿದೆ. ಅವು ಅರ್ಧದಲ್ಲಿ ನಿಂತಿವೆ. ನಿರ್ದೇಶಕ ದಯಾನಂದ್ ಅವರು ನನಗೆ 15 ವರ್ಷದಿಂದ ಫ್ರೆಂಡ್. ಅವರು ಹೇಳಿದ ಕಥೆ ಕೇಳಿ ಈ ಸಿನಿಮಾ ನಿರ್ಮಾಣ ಮಾಡಿ, ನಟಿಸುತ್ತಿದ್ದೇನೆ. ಚೆನ್ನೈಗೆ ಹೋಗಿ ತರಬೇತಿ ಪಡೆದುಕೊಂಡು ಬಂದಿದ್ದೇನೆ. ಚಿತ್ರರಂಗದ ಬಗ್ಗೆ ತಿಳಿದುಕೊಂಡಿದ್ದೇನೆ. ಕೂಲಿ ಮಾಡುವ ವ್ಯಕ್ತಿ ಎಂಎಲ್ಎ ಆಗುತ್ತಾನಾ ಅಥವಾ ಇಲ್ಲವಾ ಎಂಬುದು ಈ ಸಿನಿಮಾದ ಒನ್ಲೈನ್ ಕಥೆ’ ಎಂದು ಚಂದ್ರು ಹೇಳಿದ್ದಾರೆ. ಅರ್ಜುನ್ ಸ್ವರಾಜ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ರಣಧೀರ ಅವರು ಛಾಯಾಗ್ರಹಣ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.