‘ಸೂಪರ್​ ಸ್ಟಾರ್​’ ಚಿತ್ರದ ನಿರ್ದೇಶಕನ ವಿರುದ್ಧ 1.10 ಕೋಟಿ ರೂಪಾಯಿ ವಂಚನೆ ಆರೋಪ; ಕೇಸ್​ ದಾಖಲು

ನಿರ್ದೇಶಕ ರಮೇಶ್​ ವೆಂಕಟೇಶ್​ ಬಾಬು ವಿರುದ್ಧ ಆರೋಪ ಕೇಳಿಬಂದಿದೆ. ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.

‘ಸೂಪರ್​ ಸ್ಟಾರ್​’ ಚಿತ್ರದ ನಿರ್ದೇಶಕನ ವಿರುದ್ಧ 1.10 ಕೋಟಿ ರೂಪಾಯಿ ವಂಚನೆ ಆರೋಪ; ಕೇಸ್​ ದಾಖಲು
‘ಸೂಪರ್ ಸ್ಟಾರ್’ ಕನ್ನಡ ಸಿನಿಮಾ
Updated By: ಮದನ್​ ಕುಮಾರ್​

Updated on: Nov 14, 2022 | 12:37 PM

ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್​ ಸುಧೀಂದ್ರ (Niranjan Sudhindra) ಅವರು ನಟಿಸುತ್ತಿರುವ ‘ಸೂಪರ್​ ಸ್ಟಾರ್​’ ಸಿನಿಮಾ (Super Star Movie) ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಕಾರಣಾಂತರಗಳಿಂದ ಈ ಚಿತ್ರದ ರಿಲೀಸ್​ ತಡವಾಗಿದೆ. ಈಗ ಈ ಸಿನಿಮಾ ವಿವಾದಕ್ಕೆ ಕಾರಣ ಆಗಿದೆ. ‘ಸೂಪರ್​ ಸ್ಟಾರ್​’ ಚಿತ್ರದ ನಿರ್ದೇಶಕ ರಮೇಶ್​ ವೆಂಕಟೇಶ್​ ಬಾಬು (Ramesh Venkatesh Babu) ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಬರೋಬ್ಬರಿ 1 ಕೋಟಿ 10 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಕೇಸ್​ ದಾಖಲಾಗಿದೆ. ಈ ಚಿತ್ರಕ್ಕೆ ಆರಂಭದಲ್ಲಿ ಮೈಲಾರಿ ಅವರು ಹಣ ಹೂಡಿದ್ದರು. ನಂತರ ನಿರ್ಮಾಪಕರ ಸ್ಥಾನಕ್ಕೆ ಸತ್ಯನಾರಾಯಣ ಹಾಗೂ ರಮಾದೇವಿ ಬಂದರು. ಈಗ ಮೈಲಾರಿ ಅವರು ತಮಗೆ ವಂಚನೆ ಆಗಿದೆ ಎಂದು ಆರೋಪಿಸಿ ಬೆಂಗಳೂರಿನ ಹೆಣ್ಣೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಮೈಲಾರಿ ನೀಡಿದ ದೂರಿನ ಅನ್ವಯ ನಿರ್ದೇಶಕ ರಮೇಶ್​ ವೆಂಕಟೇಶ್​ ಬಾಬು ಅವರು ‘ಸಿನಿಮಾ ಸೂಪರ್​ ಹಿಟ್​ ಆಗುತ್ತದೆ, ಹಣ ಬರುತ್ತದೆ’ ಎಂದು ಪ್ರಚೋದನೆ ನೀಡಿದ್ದರು. ಹಾಗಾಗಿ ಮಾತೃಶ್ರೀ ಎಂಟರ್​ಪ್ರೈಸಸ್​ ಬ್ಯಾನರ್​ ಅಡಿಯಲ್ಲಿ ಮೈಲಾರಿ ಹಣ ಹೂಡಿದ್ದರು. ಆದರೆ ಕೊವಿಡ್​ ಹಿನ್ನೆಲೆಯಲ್ಲಿ ಚಿತ್ರದ ಕೆಲಸಗಳು ತಡವಾದವು. ಚಿತ್ರೀಕರಣ ಸ್ಥಗಿತಗೊಂಡಿತ್ತು. ನಂತರ ರಮೇಶ್​ ವೆಂಕಟೇಶ್​ ಬಾಬು ಅವರು ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಚಿತ್ರದ ಮಾಲಿಕತ್ವ ಬದಲಿಸಿದ್ದಾರೆ ಎಂದು ಮೈಲಾರಿ ಆರೋಪಿಸಿದ್ದಾರೆ.

ನಿರ್ದೇಶಕ ರಮೇಶ್​ ವೆಂಕಟೇಶ್​ ಬಾಬು ಅವರು ನಿರ್ಮಾಪಕ ಮೈಲಾರಿ ಅವರಿಂದ 1 ಕೋಟಿ 10 ಲಕ್ಷ ರೂಪಾಯಿ ಪಡೆದು, ಅದನ್ನು ಕಲಾವಿದರಿಗೂ ನೀಡದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಎದುರಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಮೇಶ್​ ವೆಂಕಟೇಶ್​ ಬಾಬು ಮತ್ತು ಹೊಸ ನಿರ್ಮಾಪಕರಾದ ಸತ್ಯನಾರಾಯಣ ಹಾಗೂ ರಮಾದೇವಿ ವಿರುದ್ಧ ಕೇಸ್​ ದಾಖಲು ಮಾಡಲಾಗಿದೆ.

ಇದನ್ನೂ ಓದಿ
PAN Card Fraud: ಸನ್ನಿ ಲಿಯೋನ್​ಗೆ ಆಗಿದ್ದ ವಂಚನೆಯೇ ಈಗ ನಟ ರಾಜ್​ಕುಮಾರ್​ ರಾವ್​ಗೆ; ಪ್ಯಾನ್​ ಕಾರ್ಡ್ ದುರ್ಬಳಕೆ ದೂರು
200 ಕೋಟಿ ವಂಚನೆಯ ಕಿಂಗ್​ ಪಿನ್​ ಸುಕೇಶ್​ ಭೇಟಿಗೆ ಬಂದಿದ್ರು 12 ಖ್ಯಾತ ನಟಿಯರು
ನಟಿ ಸಂಜನಾ ಗಲ್ರಾನಿಗೆ ವಂಚನೆ ಪ್ರಕರಣ; ತಮಗಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಟಿ
ನಟ ಸೋನು ಸೂದ್​ ಮೇಲೆ ತೆರಿಗೆ ವಂಚನೆ ಆರೋಪ; ಕಡೆಗೂ ಮೌನ ಮುರಿದ ‘ರಿಯಲ್​ ಹೀರೋ’

ತಾವು ಹಾಕಿದ ಬಂಡವಾಳವನ್ನು ವಾಪಸ್ ನೀಡುವಂತೆ ಮೈಲಾರಿ ಅವರು ಕೇಳಿದ್ದಾರೆ. ಆದರೆ ತಮಗೆ ಪ್ರಾಣ ಬೆದರಿಕೆ ಮತ್ತು ಧಮ್ಕಿ ಹಾಕಲಾಗಿದೆ ಎಂದು ಮೈಲಾರಿ ಆರೋಪಿಸಿದ್ದಾರೆ. ಇದರಿಂದ ‘ಸೂಪರ್​ ಸ್ಟಾರ್​’ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

‘ಸೂಪರ್​ ಸ್ಟಾರ್​’ ಚಿತ್ರಕ್ಕಾಗಿ ನಿರಂಜನ್​ ಸುಧೀಂದ್ರ ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕೆಲವೇ ತಿಂಗಳ ಹಿಂದೆ ಈ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾದ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾದಿದ್ದಾರೆ. ಆದರೆ ವಿವಾದದ ಕಾರಣದಿಂದ ಈ ಚಿತ್ರ ಸುದ್ದಿ ಆಗುವಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:27 pm, Mon, 14 November 22