ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಭರ್ತಿಗಷ್ಟೇ ಅವಕಾಶ ನೀಡಿದ ವಿಚಾರ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸರ್ಕಾರ ಏಕಾಏಕಿ ಈ ನಿಯಮ ಜಾರಿಗೆ ತಂದಿರುವ ಬಗ್ಗೆ ಚಿತ್ರರಂಗದಿಂದ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗಷ್ಟೇ ತೆರೆಕಂಡಿರುವ ಯುವರತ್ನ ಸಿನಿಮಾ ಸರ್ಕಾರದ ಹೊಸ ನಿಯಮದಿಂದ ಸಾಕಷ್ಟು ತೊಂದರೆ ಅನುಭವಿಸಿದೆ. ಹೀಗಾಗಿ, ಅಪ್ಪು ಫ್ಯಾನ್ಸ್ ಈ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಮಧ್ಯೆ, ಪುಟ್ಟ ಮಕ್ಕಳು ಸರ್ಕಾರಕ್ಕೆ ಮನವಿ ಒಂದನ್ನು ಮಾಡಿದ್ದಾರೆ. ಸದ್ಯ, ಈ ವಿಡಯೋ ಸಾಕಷ್ಟು ವೈರಲ್ ಆಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಉಡುಪಿ, ಕಲಬುರಗಿ, ದಕ್ಷಿಣ ಕನ್ನಡ, ಬೀದರ್, ಧಾರವಾಡ ಜಿಲ್ಲೆಗಳಲ್ಲಿ ಚಿತ್ರಮಂದಿರವನ್ನು ಶೇ.50 ಭರ್ತಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಮಿತಿಮೀರಿ ಹೆಚ್ಚುತ್ತಿದ್ದು ಇದನ್ನು ನಿಯಂತ್ರಣ ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ.
ಈಗ ಚಿತ್ರಮಂದಿರದಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ನೀಡುವಂತೆ ಮಕ್ಕಳು ಬೇಡಿಕೆ ಇಟ್ಟಿದ್ದಾರೆ. ನಾವು ಭಾನುವಾರ ಯುವರತ್ನ ಸಿನಿಮಾ ನೋಡೋಕೆ ಹೋಗಬೇಕು. ಪ್ಲೀಸ್ ಸಿಎಂ ಸರ್ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ಶೇಕಡಾ 100ರಷ್ಟು ಅವಕಾಶ ಕೊಡಿ. ನಾವು ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಂಡು ಹೋಗ್ತೇವೆ. ಅಪ್ಪು ಅಂದ್ರೆ ತುಂಬಾನೇ ಇಷ್ಟ, ನಾವು ಸಿನಿಮಾ ನೋಡಬೇಕು. ಯಾವುದೇ ಕಾರಣಕ್ಕೂ ಟಿಕೆಟ್ ಕ್ಯಾನ್ಸಲ್ ಆಗಬಾರದು ಎಂದು ಮನವಿ ಮಾಡಿದ್ದಾರೆ.
ಕೊರೊನಾಗೆ ತತ್ತರಿಸಿದ್ದ ಕನ್ನಡ ಚಿತ್ರರಂಗ ಈಗತಾನೇ ಸುಧಾರಿಸಿಕೊಳ್ಳುತ್ತಿದೆ. ಸ್ಟಾರ್ ನಟರ ಚಿತ್ರಗಳು ಒಂದಾದಮೇಲೆ ಒಂದರಂತೆ ತೆರೆಗೆ ಬರುತ್ತಿದ್ದು, ಪ್ರೇಕ್ಷಕರು ಕೂಡ ಥಿಯೇಟರ್ನತ್ತ ಮುಖ ಮಾಡುತ್ತಿದ್ದಾರೆ. ಹೀಗಿರುವಾಗಲೇ ರಾಜ್ಯ ಸರ್ಕಾರ ಸಿನಿ ಪ್ರಿಯರಿಗೆ ಶಾಕ್ ನೀಡಿತ್ತು. ಸಿನಿಮಾ ಹಾಲ್ಗಳಲ್ಲಿ ಶೇ.50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ನೀಡುವ ಆದೇಶವನ್ನು ಸರ್ಕಾರ ಹೊರಡಿಸಿತ್ತು.
ಇದನ್ನೂ ಓದಿ: Lockdown: ಶೇ.50 ಆಸನ ಭರ್ತಿ ಆದೇಶಕ್ಕೆ ಸುದೀಪ್ ಪ್ರತಿಕ್ರಿಯೆ! ಯುವರತ್ನ ಸಂಕಷ್ಟದ ಬಗ್ಗೆ ಕಿಚ್ಚ ಹೇಳಿದ್ದೇನು?
ಯುವರತ್ನ ವಿರುದ್ಧ ಸರ್ಕಾರದ ವ್ಯವಸ್ಥಿತ ಸಂಚು; ಪುನೀತ್ ಫ್ಯಾನ್ಸ್ ಆರೋಪ! ವಾಣಿಜ್ಯ ಮಂಡಳಿಗೆ ಮುತ್ತಿಗೆ