ಮಾರ್ಚ್ 27ಕ್ಕೆ ಅಂಬರೀಶ್ ಸ್ಮಾರಕ ಉದ್ಘಾಟನೆ: ಸಿಎಂ ಬೊಮ್ಮಾಯಿ ಘೋಷಣೆ

ಮಂಜುನಾಥ ಸಿ.

|

Updated on: Mar 23, 2023 | 10:57 PM

ಇದೇ ಮಾರ್ಚ್ 27ಕ್ಕೆ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಇದೇ ಸಂದರ್ಭದಲ್ಲಿ ಪುನೀತ್ ರಾಜ್​ಕುಮಾರ್ ಸ್ಮಾರಕ ನಿರ್ಮಾಣದ ಬಗ್ಗೆಯೂ ಮಾತನಾಡಿದರು.

ಮಾರ್ಚ್ 27ಕ್ಕೆ ಅಂಬರೀಶ್ ಸ್ಮಾರಕ ಉದ್ಘಾಟನೆ: ಸಿಎಂ ಬೊಮ್ಮಾಯಿ ಘೋಷಣೆ
ಅಂಬರೀಶ್-ಬೊಮ್ಮಾಯಿ

Follow us on

ಅಂಬರೀಶ್ (Ambareesh) ಕಾಲವಾಗಿ ನಾಲ್ಕು ವರ್ಷಗಳ ಬಳಿಕ ಸ್ಮಾರಕ ನಿರ್ಮಾಣವಾಗಿದ್ದು ಮಾರ್ಚ್ 27 ರಂದು ಉದ್ಘಾಟನೆಗೊಳ್ಳಲಿದೆ. ಈ ವಿಷಯವನ್ನು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ (Basavaraj Bommai) ಮಾರ್ಚ್ 27ಕ್ಕೆ ನನ್ನ ಆತ್ಮೀಯ ಗೆಳೆಯ ಅಂಬರೀಶ್ ಸ್ಮಾರಕ ಉದ್ಘಾಟನೆ ಮಾಡಲಿದ್ದೇವೆ. ಅದೇ ದಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರನ್ನು ನಾಮಕರಣ ಮಾಡಲಿದ್ದೇವೆ ಎಂದರು.

”ಅಂಬರೀಶ್ ನನ್ನ ಅತ್ಯಂತ ಆತ್ಮೀಯ ಗೆಳೆಯ. ನಾವಿಬ್ಬರೂ ಒಟ್ಟಿಗೆ ಬಹಳ ಒಳ್ಳೆಯ ಸಮಯ ಕಳೆದಿದ್ದೇವೆ. ಪ್ರೀತಿಯನ್ನು ಅವನು ಧಾರೆ ಎರೆಯುತ್ತಿದ್ದ ಎಂದು ನೆನಪು ಮಾಡಿಕೊಂಡರು. ಮುಂದುವರೆದು, ಗೆಳೆಯನ ಬಗ್ಗೆ ತುಸು ತಮಾಷೆಯೂ ಮಾಡಿದ ಸಿಎಂ, ”ಅವನಿಗೆ ಕುದುರೆಗಳೆಂದರೆ ಬಹಳ ಇಷ್ಟ. ನಮ್ಮ ಹೆಸರು ಮರೆಯುತ್ತಿದ್ದನೇನೋ ಆದರೆ ಕುದುರೆಗಳಿಗೆ ಇಟ್ಟ ಹೆಸರು ಮರೆಯುತ್ತಿರಲಿಲ್ಲ. ಅವನು ವಿಂಡ್ಸ್​ರ್​ಮ್ಯಾನರ್​ನಲ್ಲಿ ಒಂದು ರೂಂ ತೆಗೆದುಕೊಂಡಿದ್ದ. ಆ ರೂಮ್​ ಅನ್ನು ಕೂಡ ಸ್ಮಾರಕ ಮಾಡಬಹುದು” ಎಂದು ತಮಾಷೆ ಮಾಡಿದರು.

ಕಾರ್ಯಕ್ರಮದಲ್ಲಿ ಪುನೀತ್ ರಾಜ್​ಕುಮಾರ್ ಬಗ್ಗೆಯೂ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ”ಇದೇ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪುನೀತ್ ರಾಜ್​ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿದ ಪ್ರದಾನ ಮಾಡಿದೆವು. ಅವರ ಸ್ಮಾರಕ ನಿರ್ಮಾಣವನ್ನೂ ಮಾಡುತ್ತೇವೆ. ನಟಸಾರ್ವಭೌಮ ಡಾ ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರ ಸ್ಮಾರಕವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತೇವೆ, ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಇದೇ ವರ್ಷ ಚಾಲನೆ ನೀಡಲಿದ್ದೇವೆ” ಎಂದರು.

ಇದೇ ಸಂದರ್ಭದಲ್ಲಿ ಚಿತ್ರರಂಗಕ್ಕೆ ತಮ್ಮ ಸರ್ಕಾರದ ಕೊಡುಗೆಗಳನ್ನು ನೆನಪಿಸಿದ ಬೊಮ್ಮಾಯಿ, ”ಚಿತ್ರರಂಗದವರು ಕೇಳಿದ ಸಹಾಯಗಳನ್ನು ನಾನು ಮಾಡಿದ್ದೇನೆ. ಪಬ್ಲಿಕ್-ಪ್ರೈವೇಟ್ ಸಹಭಾಗಿತ್ವದಲ್ಲಿ ಚಿತ್ರಮಂದಿರಗಳ ನಿರ್ಮಾಣ ಆಗಬೇಕು ಎಂದರು. ಅಂತೆಯೇ ಟಯರ್ 1 ಟಯರ್ 2 ನಗರಗಳಲ್ಲಿ ಮಿನಿ ಥಿಯೇಟರ್​ಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಸಿನಿಮಾ ಸಬ್ಸಿಡಿಯನ್ನು 125 ಸಿನಿಮಾಗಳಿಗೆ ನೀಡಲಾಗುತ್ತಿತ್ತು ಅದನ್ನು ನಾವು 200 ಸಿನಿಮಾಗಳಿಗೆ ಮಾಡಿದ್ದಲ್ಲದೆ ಸಿನಿಮಾ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಿದ್ದೇವೆ. ಫಿಲಂ ಸಿಟಿ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಇದೆ. ಖಂಡಿತ ಮಾಡುತ್ತೇವೆ, ಹಾಲಿವುಡ್ ಟೆಕ್ನಾಲಜಿಯುಳ್ಳ ಸ್ಟುಡಿಯೋ ಉಳ್ಳ ಫಿಲಂ ಸಿಟಿ ನಿರ್ಮಾಣ ಮಾಡುತ್ತೇವೆ” ಎಂದರು.

ಸಿನಿಮೋತ್ಸವದ ಬಗ್ಗೆ ಮಾತನಾಡುತ್ತಾ, ”ಇದೊಂದು ಮಾದರಿ ಚಲನಚಿತ್ರೋತ್ಸವ ಆಗಬೇಕು. ಬೆಂಗಳೂರಿನ ಎಲ್ಲರೂ ಇದರಲ್ಲಿ ಭಾಗವಹಿಸಬೇಕು. ಸಿನಿಮೋತ್ಸವಕ್ಕೆ ಆಯ್ಕೆ ಮಾಡಿರುವ ಸಿನಿಮಾಗಳ ಮೇಲೆ ಕಣ್ಣಾಡಿಸಿದೆ. ಒಳ್ಳೆಯ ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಈ ಸಮಯಕ್ಕೆ ಬೇಕಾದ, ಬಹಳ ಕ್ರಿಯಾಶೀಲವಾದ, ಪ್ರಸ್ತುತಕ್ಕೆ ಬೇಕಾದ, ಸಾಮಾಜಿಕ ಪರಿಸ್ಥಿತಿಗಳಿಗೆ ಹತ್ತಿರವಾದ, ಜನರ ಭಾವನೆಗೆ ಹತ್ತಿರವಾಗಿರುವ ಸಿನಿಮಾಗಳನ್ನು ಆಯ್ಕೆ ಮಾಡಿದ್ದೀರಿ. ಜನರ ಭಾವನೆಗೆ ಹತ್ತಿರವಾಗಿರುವುದೇ ಒಳ್ಳೆಯ ಸಿನಿಮಾ, ಜೀವನ-ಭಾವನೆಯ ಪ್ರತಿಬಿಂಬವೇ ಸಿನಿಮಾ. ಸಿನಿಮಾ ಸದಾ ಜೀವಂತ ಎಂದರು ಸಿಎಂ ಬೊಮ್ಮಾಯಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada