Tax Free: ‘ಡೇರ್ಡೆವಿಲ್ ಮುಸ್ತಫಾ’ ಚಿತ್ರಕ್ಕೆ ತೆರಿಗೆ ವಿನಾಯಿತಿ; ಆದೇಶ ಹೊರಡಿಸಿದ ಸಿಎಂ ಸಿದ್ದರಾಮಯ್ಯ
Daredevil Musthafa: ಇತ್ತೀಚೆಗೆ 25 ದಿನಗಳನ್ನು ಪೂರೈಸಿದ ‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾ ಈಗ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಸಿಕ್ಕಿದೆ.
ಸಾಹಿತ್ಯ ಆಸಕ್ತರು ಹಾಗೂ ಸಿನಿಪ್ರಿಯರ ಗಮನ ಸೆಳೆದ ‘ಡೇರ್ಡೆವಿಲ್ ಮುಸ್ತಫಾ’ (Daredevil Musthafa) ಸಿನಿಮಾಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಆದೇಶ ಹೊರಡಿಸಿದ್ದಾರೆ. ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಚಿತ್ರ ನೋಡಿದ ಅನೇಕರು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಇತ್ತೀಚೆಗೆ 25 ದಿನಗಳನ್ನು ಪೂರೈಸಿದ ‘ಡೇರ್ಡೆವಿಲ್ ಮುಸ್ತಫಾ’ ಚಿತ್ರ ಈಗ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯಿತಿ (Tax Free) ಸಿಗುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ. ಶಶಾಂಕ್ ಸೋಗಾಲ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶಿಶಿರ್ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್ ಭಾರದ್ವಾಜ್, ಆಶಿತ್ ಶ್ರೀವತ್ಸಾ, ಅಭಯ್, ಮಂಡ್ಯ ರಮೇಶ್, ಉಮೇಶ್, ಪ್ರೇರಣಾ ಮುಂತಾದ ಕಲಾವಿದರು ‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾದಲ್ಲಿ ನಟಿಸಿದ್ದಾರೆ.
ಧರ್ಮ ಸಹಿಷ್ಣುತೆ, ಸಹಬಾಳ್ವೆ, ಸಮಭಾವದ ಪಾಠ ಹೇಳುವ ‘ಡೇರ್ಡೆವಿಲ್ ಮುಸ್ತಫಾ’ ಸಿನಿಮಾವನ್ನು ಇನ್ನೂ ಹೆಚ್ಚಿನ ಮಂದಿಗೆ ತೋರಿಸುವ ಇಚ್ಛೆಯಿಂದ ತೆರಿಗೆ ವಿನಾಯಿತಿ ನೀಡಬೇಕೆಂದು ಸಿನಿಮಾದ ನಿರ್ದೇಶಕ ಶಶಾಂಕ್ ಸೋಗಾಲ್ ಹಾಗೂ ಸಿನಿಮಾವನ್ನು ವೀಕ್ಷಿಸಿ ಮೆಚ್ಚಿದ ಕೆಲ ಹಿರಿಯರು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಚಿಂತಕ ನಟರಾಜ್ ಹುಳಿಯಾರ್ ಹಾಗೂ ‘ಡೇರ್ಡೆವಿಲ್ ಮುಸ್ತಾಫಾ’ ಸಿನಿಮಾಗೆ ಚಿತ್ರಕತೆ ಬರೆದಿರುವ ಚಿಂತನ್ ಮುಂತಾದವರು ನಿರ್ದೇಶಕರ ಜೊತೆ ಸಿಎಂ ನಿವಾಸದ ಬಳಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೋಮು ಸಾಮರಸ್ಯ ಸಾರುವ ತಮ್ಮ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಕೋರಿಕೊಂಡಿದ್ದರೆ. ಈ ಮನವಿಗೆ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.
‘ತೇಜಸ್ವಿಯವರ ಓದುಗರು, ಅಭಿಮಾನಿಗಳು, ತೇಜಸ್ವಿಯವರ ಕುಟುಂಬ ವರ್ಗ ಈ ಸಿನಿಮಾವನ್ನು ನೋಡಿ ಪ್ರಶಂಸಿಸುತ್ತಿದ್ದಾರೆ. ಕರ್ನಾಟಕ ರಾಜ್ಯವು ಸರ್ವಜನಾಂಗದ ಶಾಂತಿಯ ತೋಟವಾಗಲು ಇಂತಹ ಸಿನಿಮಾಗಳು ಜನರಿಗೆ ಹೆಚ್ಚುಹೆಚ್ಚು ತಲುಪಬೇಕು ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ತಾವು ಸಾಧ್ಯವಾದಲ್ಲಿ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡಬೇಕೆಂದು ವಿನಂತಿಸಿಕೊಳ್ಳುತೇವೆ. ಇನ್ನಷ್ಟು ಜನರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಈ ಸಿನಿಮಾ ನೋಡಲು ಅನುಕೂಲವಾಗುವಂತೆ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಮನವಿ ಮಾಡುತ್ತೇವೆ’ ಎಂದು ಪತ್ರದಲ್ಲಿ ಬರೆಯಲಾಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.