ಸಿಎಂ ಸಿದ್ದರಾಮಯ್ಯ 2024-25ನೇ ಸಾಲಿನ ರಾಜ್ಯ ಬಜೆಟ್ (Karnataka Budget) ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆ ವೇಳೆ ಕೆಲವು ಸಿನಿಮಾ ಸಾಲುಗಳನ್ನು ಅವರು ಪ್ರಸ್ತಾಪಿಸಿದ್ದು ವಿಶೇಷವಾಗಿದೆ. ಡಾ. ರಾಜ್ಕುಮಾರ್ ನಟನೆಯ ‘ಬಂಗಾರದ ಮನುಷ್ಯ’ ಸಿನಿಮಾದ ‘ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲವು ಮುಂದೆ.. ಮನಸೊಂದಿದ್ದರೆ ಮಾರ್ಗವು ಉಂಟು, ಕೆಚ್ಚೆದೆ ಇರಬೇಕು ಎಂದೆಂದೂ..’ ಎಂಬ ಹಾಡಿನ ಸಾಲುಗಳನ್ನು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಬಜೆಟ್ ಓದಲು ಆರಂಭಿಸಿದರು. ಬಳಿಕ ‘ಡೇರ್ಡೆವಿಲ್ ಮುಸ್ತಾಫಾ’ ಸಿನಿಮಾದಲ್ಲಿ ಡಾಲಿ ಧನಂಜಯ್ (Daali Dhananjaya) ಬರೆದ ಸಾಲುಗಳನ್ನು ಸಿಎಂ ಓದಿದ್ದು ಕೂಡ ಗಮನ ಸೆಳೆಯಿತು. ಆ ಬಗ್ಗೆ ಇಲ್ಲಿದೆ ಮಾಹಿತಿ..
2023ರ ಮೇ 19ರಂದು ಬಿಡುಗಡೆಯಾದ ‘ಡೇರ್ಡೆವಿಲ್ ಮುಸ್ತಾಫಾ’ ಸಿನಿಮಾಗೆ ವಿಮರ್ಶಕರಿಂದ ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತ್ತು. ಕೋಮು ಸಾಮರಸ್ಯವನ್ನು ಸಾರುವ ಕಥೆ ಆ ಸಿನಿಮಾದಲ್ಲಿತ್ತು. ಆ ಸಿನಿಮಾದಲ್ಲಿನ ‘ಶಾಂತಿಯ ತೋಟ..’ ಹಾಡಿಗೆ ಸಾಹಿತ್ಯ ಬರೆದಿದ್ದು ನಟ, ನಿರ್ಮಾಪಕ ಡಾಲಿ ಧನಂಜಯ್. ಆ ಹಾಡಿನಲ್ಲಿ ಬರುವ ಒಂದು ಸಾಲು ಈಗ ಬಜೆಟ್ ಪುಸ್ತಕದಲ್ಲಿ ಸ್ಥಾನ ಪಡೆದಿದ್ದು ವಿಶೇಷ.
‘ಒಂದು ತೋಟದಲ್ಲಿ ನೂರು ಹೂವು ಅರಳಲಿ.. ಎಲ್ಲ ಕೂಡಿ ಆಡುವಂಥ ಗಾಳಿ ಬೀಸಲಿ..’ ಎಂಬ ಅರ್ಥಭರಿತ ಸಾಹಿತ್ಯವನ್ನು ಡಾಲಿ ಧನಂಜಯ್ ಬರೆದಿದ್ದಾರೆ. ಆದೇ ಸಾಲನ್ನು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಮಂಡನೆ ಸಮಯದಲ್ಲಿ ಓದಿದ್ದಾರೆ. ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಅನುದಾನಗಳನ್ನು ಮಂಡಿಸುವುದಕ್ಕೂ ಮುನ್ನ ಮುಖ್ಯಮಂತ್ರಿಗಳು ಈ ಸಾಲನ್ನು ಓದಿದರು. ಆ ಮೂಲಕ ‘ಡೇರ್ಡೆವಿಲ್ ಮುಸ್ತಫಾ’ ತಂಡಕ್ಕೆ ವಿಶೇಷವಾದ ಗೌರವ ಸಿಕ್ಕಂತೆ ಆಗಿದೆ.
ಇದನ್ನೂ ಓದಿ: Daredevil Musthafa Review: ಭರಪೂರ ನಗಿಸುತ್ತಾ ಮತಗಳ ಜಗಳ ಬಿಡಿಸುವ ‘ಡೇರ್ಡೆವಿಲ್ ಮುಸ್ತಫಾ’
ಡಾಲಿ ಧನಂಜಯ ಅವರು ನಟನೆ ಮಾತ್ರವಲ್ಲದೇ ಸಿನಿಮಾಗಳ ನಿರ್ಮಾಣದಲ್ಲೂ ಬ್ಯುಸಿ ಆಗಿದ್ದಾರೆ. ಶಶಾಂಕ್ ಸೋಗಲ್ ನಿರ್ದೇಶನ ಮಾಡಿದ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾವನ್ನು ಧನಂಜಯ್ ಪ್ರಸ್ತುತ ಪಡಿಸಿದ್ದರು. ಅಲ್ಲದೇ, ಸಾಹಿತ್ಯ ಬರೆಯುವ ಮೂಲಕ ಸಿನಿಮಾದ ಅಂದ ಹೆಚ್ಚಿಸಿದ್ದರು. ಡಾಲಿ ಧನಂಜಯ್ ಬರೆದ ಸಾಲುಗಳಿಗೆ ಬಜೆಟ್ಪುಸ್ತಕದಲ್ಲಿ ಸ್ಥಾನ ಸಿಕ್ಕಿದ್ದರಿಂದ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.
ಇದನ್ನೂ ಓದಿ: ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಬ್ರ್ಯಾಂಡ್ ರಾಯಭಾರಿಯಾಗಿ ಘೋಷಿಸಿದ ಸಿಎಂ ಸಿದ್ದರಾಮಯ್ಯ
ಕೆಲವೇ ದಿನಗಳ ಹಿಂದೆ ಡಾಲಿ ಧನಂಜಯ್ ಅವರಿಗೆ ಸರ್ಕಾರದ ಕಡೆಯಿಂದ ಹೊಸ ಜವಾಬ್ದಾರಿ ನೀಡಲಾಗಿದೆ. ‘ಲಿಡ್ಕರ್’ ಸಂಸ್ಥೆಗೆ ಅವರನ್ನು ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಇಂದು (ಫೆಬ್ರವರಿ 16) ಸಿದ್ದರಾಮಯ್ಯ ಅವರು ಸೂಟ್ಕೇಸ್ ಬದಲಿಗೆ ಲಿಡ್ಕರ್ ಬ್ಯಾಗ್ನಲ್ಲಿ ಬಜೆಟ್ ಪುಸ್ತಕವನ್ನು ಹಿಡಿದುಕೊಂಡು ಬಂದಿದ್ದು ಕೂಡ ವಿಶೇಷವಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ