AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂ.30ಕ್ಕೆ ಚಲನಚಿತ್ರ ನಿರ್ಮಾಪಕರ ಸಂಘದ ಕಟ್ಟಡ ಉದ್ಘಾಟನೆ ಮಾಡಲಿರುವ ಸಿಎಂ

ಸರ್ಕಾರದಿಂದ ಕನ್ನಡ ಚಿತ್ರರಂಗ ಸಾಕಷ್ಟು ನೆರವು ಬಯಸುತ್ತಿದೆ. ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ವಿನೂತನ ಕಟ್ಟಡ ನಿರ್ಮಾಣ ಆಗಿದೆ. ಅದರ ಉದ್ಘಾಟನೆಗೆ ಈಗ ಸಮಯ ನಿಗದಿ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ.30ರಂದು ಹೊಸ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ನಿರ್ಮಾಪಕರ ಸಂಘ ಮಾಹಿತಿ ನೀಡಿದೆ.

ಜೂ.30ಕ್ಕೆ ಚಲನಚಿತ್ರ ನಿರ್ಮಾಪಕರ ಸಂಘದ ಕಟ್ಟಡ ಉದ್ಘಾಟನೆ ಮಾಡಲಿರುವ ಸಿಎಂ
ಸುದ್ದಿಗೋಷ್ಠಿಯಲ್ಲಿ ಕನ್ನಡ ಸಿನಿಮಾ ನಿರ್ಮಾಪಕರು
ಮದನ್​ ಕುಮಾರ್​
|

Updated on: Jun 25, 2024 | 5:48 PM

Share

ಸ್ಯಾಂಡಲ್​ವುಡ್​ನ ನಿರ್ಮಾಪಕರ ಸಂಘದ ಹೊಸ ಕಟ್ಟಡದ ಕಾಮಗಾರಿ ಬಹುದಿನಗಳಿಂದ ನಡೆಯುತ್ತಿತ್ತು. ಅದೀಗ ಪೂರ್ಣಗೊಂಡಿದ್ದು ಉದ್ಘಾಟನೆಯ ಹಂತಕ್ಕೆ ಬಂದಿದೆ. ಚಂದನವನದ (Sandalwood) ನಿರ್ಮಾಪಕರ ಪಾಲಿಗೆ ಇದು ಹೆಮ್ಮೆಯ ಸಂಗತಿ. ಈ ಕುರಿತು ಮಾಹಿತಿ ನೀಡಲು ಸುದ್ದಿಗೋಷ್ಠಿ ನಡೆಸಲಾಯಿತು. ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ದ (Kannada Film Producers Association) ನೂತನ ಕಟ್ಟಡ ಶಿವಾನಂದ ಸರ್ಕಲ್ ಬಳಿ ಇದೆ. ಇದರ ಉದ್ಘಾಟನಾ ಸಮಾರಂಭ ಜೂನ್ 30ಕ್ಕೆ ನಡೆಯಲಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಈ ಹೊಸ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು ಮಾತನಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಹಲವು ಜನರ ಶ್ರಮದಿಂದ ಇಂದು ನಿರ್ಮಾಪಕರ ಸಂಘದ ಹೊಸ ಕಟ್ಟಡ ನಿರ್ಮಾಣವಾಗಿದೆ. ಅಲ್ಲದೇ, ಉದ್ಘಾಟನೆ ಆಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಮ್ಮ ಸಂಘದ ಹೊಸ ಕಟ್ಟಡದ ಉದ್ಘಾಟನೆ ಮಾಡಲಿದ್ದಾರೆ’ ಎಂದು ಉಮೇಶ್​ ಬಣಕಾರ್​ ಹೇಳಿದ್ದಾರೆ.

‘ಉದ್ಘಾಟನಾ ಸಮಾರಂಭದಲ್ಲಿ ‘ದಕ್ಷಿಣ ಭಾರತದ ಚಲನಚಿತ್ರ ವಾಣಿಜ್ಯ ಮಂಡಳಿ’ ಸದಸ್ಯರು, ‘ಫಿಲ್ಮ್​ ಫೆಡರೇಷನ್‌ ಆಫ್‌ ಇಂಡಿಯಾ’ ಪದಾಧಿಕಾರಿಗಳು, ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಸದಸ್ಯರು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದ್ದಾರೆ ಉಮೇಶ್ ಬಣಕಾರ್​. ಈ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕರ ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್, ರಮೇಶ್‍ ಯಾದವ್‍, ಎಂ.ಜಿ. ರಾಮಮೂರ್ತಿ, ಆರ್.ಎಸ್. ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.

ಇದನ್ನೂ ಓದಿ: ಚಿತ್ರರಂಗದಿಂದ ದರ್ಶನ್​ ಬ್ಯಾನ್​ ಆಗಬೇಕಾ? ಕಿಚ್ಚ ಸುದೀಪ್​ ಹೇಳಿದ್ದಿಷ್ಟು..

ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣದ ಸಮಿತಿಯ ಅಧ್ಯಕ್ಷರಾಗಿ ಸಾರಾ ಗೋವಿಂದು ಅವರು ಕೆಲಸ ಮಾಡಿದ್ದಾರೆ. ಕಟ್ಟಡದ ಬಗ್ಗೆ ಅವರು ಕೂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ಹೊಂಬಾಳೆ ಫಿಲ್ಮ್ಸ್​, ಆರ್‌.ಎಸ್‌. ಗೌಡ, ವಾಣಿಜ್ಯ ಮಂಡಳಿ ಸೇರಿದಂತೆ ಹಲವರಿಂದ ಈ ನೂತನ ಕಟ್ಟಡ ನಿರ್ಮಾಣಕ್ಕೆ ಸಹಾಯ ಆಗಿದೆ. ನಿರ್ಮಾಪಕ ರಮೇಶ್‌ ರೆಡ್ಡಿ ಅವರು ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ದಕ್ಷಿಣ ಭಾರತದಲ್ಲಿ ನಿರ್ಮಾಪಕರಿಗಾಗಿ ಸ್ವಂತ ಕಟ್ಟಡ ಇರುವುದು ಕರ್ನಾಟಕದಲ್ಲಿ ಮಾತ್ರ’ ಎಂದಿದ್ದಾರೆ ಸಾರಾ ಗೋವಿಂದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.