
‘ಕಾಮಿಡಿ ಕಿಲಾಡಿಗಳು ಸೀಸನ್ 3’ ಖ್ಯಾತಿಯ ರಾಕೇಶ್ ಪೂಜಾರಿ (Rakesh Poojary) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇದು ಅವರ ಆಪ್ತರಿಗೆ ಹಾಗೂ ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ. ರಾಕೇಶ್ ಪೂಜಾರಿ ಸಾಯುವುದಕ್ಕೂ ಮೊದಲು ಏನಾಗಿತ್ತು ಎಂಬುದನ್ನು ರಾಕೇಶ್ ಪೂಜಾರಿ ಅವರ ಆಪ್ತ ಬಳಗದಲ್ಲಿ ಒಬ್ಬರಾದ ನಟ ಗೋವಿಂದೇ ಗೌಡ (ಜಿಜಿ) ವಿವರಿಸಿದ್ದಾರೆ. ಮೇ 11ರ ಬೆಳಿಗ್ಗೆ ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ರ ಶೂಟ್ನಲ್ಲಿ ಅವರು ಇದ್ದರು. ಮಧ್ಯರಾತ್ರಿ ಅವರಿಗೆ ಸಾವು ಸಂಭವಿಸಿದೆ.
ಟಿವಿ9 ಕನ್ನಡದ ಜೊತೆ ಮಾತನಾಡಿರೋ ಜಿಜಿ, ‘ಒಳ್ಳೆಯ ಕಲಾವಿದ ಎನ್ನುವುದಕ್ಕಿಂತ ಒಳ್ಳೆಯ ಮನುಷ್ಯನಾಗಿದ್ದ. ನನಗೂ ಆತ ತುಂಬಾನೇ ಆಪ್ತ. ಎಲ್ಲರ ಪ್ರೀತಿ ಪಾತ್ರ ವ್ಯಕ್ತಿ ಆಗಿದ್ದ. ಪ್ಲೇಟ್ಲೆಟ್ಸ್ ಕಡಿಮೆ ಇತ್ತು. ಆ ಬಳಿ ಹಾರ್ಟ್ ಅಟ್ಯಾಕ್ ಆಗಿದೆ. ವಿಷಯ ಕೇಳಿ ತುಂಬಾನೇ ನೋವಾಗುತ್ತಿದೆ. ಇದನ್ನು ನಂಬೋಕೆ ಆಗುತ್ತಿಲ್ಲ’ ಎಂದು ಭಾವುಕರಾಗಿ ಮಾತನಾಡಿದ್ದಾರೆ. ಅವರಿಗೆ ಈ ವಿಚಾರವನ್ನು ಅರಗಿಸಿಕೊಳ್ಳೋಕೆ ಸಾಧ್ಯವೇ ಆಗುತ್ತಿಲ್ಲ.
‘ಬೆಳಿಗ್ಗೆ ಕಾಂತಾರ ಸಿನಿಮಾ ಶೂಟ್ನಲ್ಲಿ ಇದ್ದ. ಶೂಟ್ ಮುಗಿಸಿ ಸಂಜೆ ಗೆಳೆಯರ ಮದುವೆ ಫಂಕ್ಷನ್ಗೆ ಹೋಗಿದ್ದಾನೆ. ಸುಸ್ತು ಎನ್ನುತ್ತಿದ್ದ. ಮಧ್ಯರಾತ್ರಿ ಹಾರ್ಟ್ ಅಟ್ಯಾಕ್ ಆಯ್ತು. ಎಲ್ಲರೂ ನನಗೆ ಕಾಲ್ ಮಾಡಿದ್ದರು. ಆದರೆ ಮೊಬೈಲ್ ಸೈಲೆಂಟ್ನಲ್ಲಿ ಇದ್ದಿದ್ದರಿಂದ ವಿಷಯ ಗೊತ್ತಾಗಿರಲಿಲ್ಲ. ಬೆಳಿಗ್ಗೆ ಎದ್ದು ನೋಡಿದಾಗ ವಿಷಯ ತಿಳಿಯಿತು’ ಎಂದಿದ್ದಾರೆ ಅವರು ಜಿಜಿ.
‘ಇತ್ತೀಚೆಗೆ ರಾಕೇಶ್ಗೆ ಬೈಕ್ ಸ್ಕಿಡ್ ಆಗಿ ಅಪಘಾತ ಆಗಿತ್ತು. ಆದರೆ, ಬೇಗ ರಿಕವರಿ ಆದ. ಅದನ್ನು ಹೊರತುಪಡಿಸಿ ಅವನಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಆತ ತುಂಬಾನೇ ಆ್ಯಕ್ಟೀವ್ ಆಗಿದ್ದ. ಎಲ್ಲರಿಗೂ ಬೇಕಾಗಿದ್ದ ವ್ಯಕ್ತಿ. ತುಂಬಾನೇ ನೋವಾಗುತ್ತಿದೆ. ಮಾನವೀಯ ವ್ಯಕ್ತಿ. ಅದು ನನಗೆ ಅನುಭವಕ್ಕೆ ಬಂದಿತ್ತು. ನನ್ನ ಪಾಪು ಯಾರ ಜೊತೆಯೂ ಹೋಗುತ್ತಿರಲಿಲ್ಲ. ಆದರೆ, ಅವನ ಜೊತೆ ತುಂಬಾನೇ ಹೊತ್ತು ಆಟ ಆಡಿದ್ದ’ ಎಂದಿದ್ದಾರೆ ಜಿಜಿ.
ಇದನ್ನೂ ಓದಿ: ವಿಧಿ ಕ್ರೂರ; ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ
ರಾಕೇಶ್ ನಿಧನ ವಾರ್ತೆ ಇನ್ನೂ ತಾಯಿಗೆ ಸಿಕ್ಕಿಲ್ಲ. ರಾಕೇಶ್ಗೆ ತಂದೆಯೂ ಇಲ್ಲ. ಈಗ ಮಗನ ಸಾವಿನ ವಿಚಾರವನ್ನು ಅವರ ತಾಯಿ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಅನ್ನೊದು ಸದ್ಯದ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:54 am, Mon, 12 May 25