
ಸಿನಿಮಾ ತಂಡಗಳಿಗೆ ಪ್ರಚಾರ ಬಹಳ ಮುಖ್ಯ. ಅದಕ್ಕಾಗಿ ಹೊಸ ಹೊಸ ಮಾರ್ಗಗಳನ್ನು ಹುಡುಕಲಾಗುತ್ತಿದೆ. ಜನರನ್ನು ತಲುಪಲು ಅನೇಕ ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ‘ಕಂಗ್ರಾಜುಲೇಷನ್ಸ್ ಬ್ರದರ್’ (Congratulations Brother) ಸಿನಿಮಾ ತಂಡ. ಹೌದು, ಈ ಸಿನಿಮಾ ಈಗ ತೆರೆಕಾಣಲು ಸಿದ್ಧವಾಗಿದೆ. ನವೆಂಬರ್ 21ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ವಿಶೇಷ ಏನೆಂದರೆ, ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲೂ ಪ್ರಚಾರ ಮಾಡಲು ‘ಕಂಗ್ರಾಜುಲೇಷನ್ಸ್ ಬ್ರದರ್’ ಚಿತ್ರತಂಡ ಸಜ್ಜಾಗಿದೆ.
‘ಕಂಗ್ರಾಜುಲೇಷನ್ಸ್ ಬ್ರದರ್’ ಎಂಬುದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಜನಪ್ರಿಯವಾದ ಡೈಲಾಗ್. ಅದನ್ನೇ ಶೀರ್ಷಿಕೆಯಾಗಿಸಿಕೊಂಡು ಈ ಸಿನಿಮಾ ಮಾಡಲಾಗಿದೆ. ‘ಕಲ್ಲೂರ್ ಸಿನಿಮಾಸ್’, ‘ಪೆನ್ ಎನ್ ಪೇಪರ್ ಸ್ಟುಡಿಯೋಸ್’ ಮತ್ತು ‘ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್’ ಮೂಲಕ ಪ್ರಶಾಂತ್ ಕಲ್ಲೂರ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪ್ರತಾಪ್ ಗಂಧರ್ವ ಅವರು ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾಗೆ ಖ್ಯಾತ ನಿರ್ದೇಶಕ ಹರಿ ಸಂತೋಷ್ ಅವರು ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡಿದ್ದಾರೆ. ಹೊಸ ನಟ ರಕ್ಷಿತ್ ನಾಗ್ ಹೀರೋ ಆಗಿ ನಟಿಸಿದ್ದಾರೆ. ಸಂಜನಾ ದಾಸ್ ಅವರು ನಾಯಕಿಯಾಗಿದ್ದಾರೆ. ಹರೀಶ್ ರೆಡ್ಡಿ ಅವರು ಸಹ-ನಿರ್ಮಾಣ ಮಾಡಿದ್ದಾರೆ. ಬೀದರ್ನಿಂದ ಚಾಮರಾಜನಗರ ತನಕ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಿಗೂ ಚಿತ್ರತಂಡ ಭೇಟಿ ನೀಡಲಿದೆ.
ಇದಕ್ಕಾಗಿ ನೂತನ ಪ್ರಚಾರದ ವಾಹನ ಸಿದ್ಧವಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ಕೆ ಕನ್ನಡಪರ ಹೋರಾಟಗಾರ ಸಾ.ರಾ. ಗೋವಿಂದು ಅವರು ಇತ್ತೀಚೆಗೆ ಚಾಲನೆ ನೀಡಿದರು. ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಬಳಿ ಚಿತ್ರತಂಡದ ಸದಸ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ವೇಳೆ ಸಾರಾ ಗೋವಿಂದು ಮಾತನಾಡಿದರು. ‘ಸಂತು ಅವರು ಒಪ್ಪಿಕೊಂಡ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಚಿತ್ರತಂಡ ಎಲ್ಲ ಕಲಾವಿದರು ಭಾಗಿಯಾಗಿರುವುದು ನೋಡಿ ಖುಷಿಯಾಗಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಟ್ರೇಲರ್ ಮೂಲಕ ಗಮನ ಸೆಳೆದ ಪ್ರಣವ್ ಮೋಹನ್ಲಾಲ್ ನಟನೆಯ ಹಾರರ್ ಚಿತ್ರ ‘ಡೀಯಸ್ ಈರೇ’
‘ನವೆಂಬರ್ 21ಕ್ಕೆ ನಮ್ಮ ಚಿತ್ರ ಬಿಡುಗಡೆಯಾಗಲಿದೆ. ಅದರ ಪೂರ್ವಭಾವಿಯಾಗಿ ಕಲಾವಿದರು ಎಲ್ಲ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಜನರನ್ನು, ವಿಶೇಷವಾಗಿ ಯುವ ಜನತೆಯನ್ನು ಭೇಟಿ ಮಾಡಲಿದ್ದಾರೆ. ಈ ವಿನೂತನ ಪ್ರಚಾರ ಕಾರ್ಯಕ್ಕೆ ಇಂದು ಹಿರಿಯರಿಂದ ಚಾಲನೆ ಸಿಕ್ಕಿದೆ. ಮುನೀಂದ್ರ ಅವರು ನಮ್ಮ ಸಿನಿಮಾ ವಿತರಣೆ ಮಾಡುತ್ತಿದ್ದಾರೆ’ ಎಂದು ಹರಿ ಸಂತೋಷ್ ಮಾಹಿತಿ ನೀಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.