ನಟ ಡಾಲಿ ಧನಂಜಯ್ (Daali Dhananjay) ಅವರು ಪ್ರತಿ ಸಿನಿಮಾದಲ್ಲೂ ಬೇರೆ ಬೇರೆ ಪಾತ್ರಗಳನ್ನು ಪ್ರಯತ್ನಿಸುತ್ತಾರೆ. ಬಹುನಿರೀಕ್ಷಿತ ‘ಹೊಯ್ಸಳ’ (Hoysala Movie) ಸಿನಿಮಾದಲ್ಲಿ ಅವರಿಗೆ ಪೊಲೀಸ್ ಪಾತ್ರವಿದೆ. ಈ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರತಂಡದಿಂದ ಈಗೊಂದು ಅಪ್ಡೇಟ್ ಸಿಕ್ಕಿದೆ. ಪೋಸ್ಟರ್ಗಳ ಮೂಲಕ ಗಮನ ಸೆಳೆದಿರುವ ಈ ಸಿನಿಮಾದ ಟೀಸರ್ ಬಿಡುಗಡೆಗೆ ದಿನಾಂಕ ನಿಗದಿ ಆಗಿದೆ. ಫೆಬ್ರವರಿ 5ರಂದು ಬೆಳಗ್ಗೆ 9.27ಕ್ಕೆ ಟೀಸರ್ ಅನಾವರಣ ಮಾಡುವುದಾಗಿ ನಿರ್ಮಾಣ ಸಂಸ್ಥೆಯಾದ ‘ಕೆಆರ್ಜಿ ಸ್ಟುಡಿಯೋಸ್’ ಮಾಹಿತಿ ನೀಡಿದೆ. ‘ಹೊಯ್ಸಳ’ ಚಿತ್ರದಲ್ಲಿ ಡಾಲಿ ಧನಂಜಯ್ ಅವರಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ (Amrutha Iyengar) ನಟಿಸುತ್ತಿದ್ದಾರೆ. ಈ ಕಾರಣದಿಂದಲೂ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ಯಾವುದೇ ನಟರಿಗೆ ಮೈಲುಗಲ್ಲಿನ ಸಿನಿಮಾಗಳು ತುಂಬ ಮುಖ್ಯವಾಗುತ್ತವೆ. ಡಾಲಿ ಧನಂಜಯ್ ಅವರು ನಟಿಸುತ್ತಿರುವ 25ನೇ ಸಿನಿಮಾ ‘ಹೊಯ್ಸಳ’. ಹಾಗಾಗಿ ಅವರ ಅಭಿಮಾನಿಗಳು ಈ ಚಿತ್ರದ ಮೇಲೆ ವಿಶೇಷವಾದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲೂ ಅವರು ಪೊಲೀಸ್ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ ಕೌತುಕ ಜೋರಾಗಿದೆ. ಈ ಹಿಂದೆ ‘ಸಲಗ’ ಚಿತ್ರದಲ್ಲೂ ಧನಂಜಯ್ ಅವರು ಪೊಲೀಸ್ ಪಾತ್ರ ಮಾಡಿ ಗಮನ ಸೆಳೆದಿದ್ದರು.
ಇದನ್ನೂ ಓದಿ: ‘ಈ ಥರ ಮದುವೆ ಆದ್ರೆ ಖುಷಿ’: ಸಿಂಹಪ್ರಿಯಾ ವಿವಾಹಕ್ಕೆ ಡಾಲಿ ಜತೆ ಬಂದ ಅಮೃತಾ ಹೇಳಿಕೆ
ಡಾಲಿ ಧನಂಜಯ್, ಅಮೃತಾ ಅಯ್ಯಂಗಾರ್ ಮಾತ್ರವಲ್ಲದೇ ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ, ನಾಗಭೂಷಣ್ ಮುಂತಾದ ಪ್ರತಿಭಾವಂತ ಕಲಾವಿದರು ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಾಂತ್ರಿಕ ಬಳಗದಲ್ಲಿ ಅನುಭವಿಗಳು ಕೆಲಸ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಕಾರ್ತಿಕ್ ಎಸ್. ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಹಾಗೂ ಮಾಸ್ತಿ ಅವರು ಸಂಭಾಷಣೆಯ ಜವಾಬ್ದಾರಿ ನಿಭಾಯಿಸಿದ್ದಾರೆ.
ಕೆ.ಆರ್.ಜಿ. ಸ್ಟುಡಿಯೋಸ್ ನಿರ್ಮಾಣದ ‘ಹೊಯ್ಸಳ’ ಚಿತ್ರವನ್ನು ವಿಜಯ್ ಕಿರಗಂದೂರು ಅವರು ಅರ್ಪಿಸುತ್ತಿದ್ದಾರೆ. ಕಾರ್ತಿಕ್ ಹಾಗೂ ಯೋಗಿ ಜಿ. ರಾಜ್ ಅವರ ನಿರ್ಮಾಣದಲ್ಲಿ, ವಿಜಯ್ ಎನ್. ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಮಾರ್ಚ್ 30ರಂದು ‘ಹೊಯ್ಸಳ’ ಬಿಡುಗಡೆ ಆಗಲಿದೆ.
“A Glimpse of GURUDEV” on 5th Feb @ 9:27am?#EeSalaHoysala#Hoysala releasing on 30th March@Dhananjayaka @KRG_Studios @amrutha_iyengar @vijaycinephilia @Karthik1423 @yogigraj @AJANEESHB @S_Karthik @ItIsAdarsh @dhilipaction @dskcuts @aanandaaudio @HoysalaTheFilm @KRG_Connects pic.twitter.com/F0fPANQNQQ
— KRG Studios (@KRG_Studios) February 3, 2023
ಕನ್ನಡ ಚಿತ್ರರಂಗದಲ್ಲಿ ಡಾಲಿ ಧನಂಜಯ ಮತ್ತು ನಟಿ ಅಮೃತಾ ಅಯ್ಯಂಗಾರ್ ಉತ್ತಮ ಜೋಡಿ ಎನಿಸಿಕೊಂಡಿದ್ದಾರೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಮತ್ತು ‘ಬಡವ ರಾಸ್ಕಲ್’ ಸಿನಿಮಾಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡ ಈ ಜೋಡಿಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಇಬ್ಬರ ನಟನೆಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಈಗ ಅವರು ‘ಹೊಯ್ಸಳ’ ಸಿನಿಮಾದಲ್ಲಿ ಮೂರನೇ ಬಾರಿ ಜೊತೆಯಾಗಿ ನಟಿಸುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:30 pm, Fri, 3 February 23