ಖ್ಯಾತ ನಟ ಡಾಲಿ ಧನಂಜಯ್ (Daali Dhananjay) ಅವರು ನಿರ್ಮಾಪಕನಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಲವು ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅವರು ಅವಕಾಶ ನೀಡುತ್ತಿದ್ದಾರೆ. ಧನಂಜಯ ಅವರ ಒಡೆತನದ ‘ಡಾಲಿ ಪಿಕ್ಚರ್ಸ್’ ಮೂಲಕ ಈಗಾಗಲೇ 4 ಸಿನಿಮಾಗಳು ಮೂಡಿಬಂದಿವೆ. ಈಗ ಇದೇ ಬ್ಯಾನರ್ನಿಂದ ಐದನೇ ಸಿನಿಮಾ ಕೂಡ ಸೆಟ್ಟೇರಿದೆ. ‘ಟಗರು ಪಲ್ಯ’ ಸಿನಿಮಾದಿಂದ ಯಶಸ್ಸು ಕಂಡಿರುವ ‘ಡಾಲಿ ಪಿಕ್ಚರ್ಸ್’ ಸಂಸ್ಥೆ ಈಗ ಮತ್ತೊಂದು ವಿಭಿನ್ನ ಸಿನಿಮಾವನ್ನು ಕೈಗೆತ್ತಿಕೊಂಡಿದೆ. ಈ ಪ್ರಾಜೆಕ್ಟ್ಗೆ ಚಾಲನೆ ಸಿಕ್ಕಿದೆ. ಈ ಸಿನಿಮಾಗೆ ‘ಜೆಸಿ’ (JC) ಎಂದು ಶೀರ್ಷಿಕೆ ಇಡಲಾಗಿದೆ. ಇದರ ಪೋಸ್ಟರ್ ಗಮನ ಸೆಳೆಯುತ್ತಿದೆ. ‘ಜೆಸಿ’ ಸಿನಿಮಾದಲ್ಲಿ ಪ್ರಖ್ಯಾತ್ (Prakhyath) ಅವರು ಹೀರೋ ಆಗಿ ನಟಿಸುತ್ತಿದ್ದಾರೆ.
2018ರಲ್ಲಿ ಬಿಡುಗಡೆಯಾದ ‘ನಡುವೆ ಅಂತರವಿರಲಿ’ ಸಿನಿಮಾದಲ್ಲಿ ನಟ ಪ್ರಖ್ಯಾತ್ ಅವರು ಹೀರೋ ಆಗಿ ಅಭಿನಯಿಸಿದ್ದರು. ಆ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಈಗ ಅವರು ದೊಡ್ಡ ಗ್ಯಾಪ್ನ ನಂತರ ಮತ್ತೆ ಹೀರೋ ಆಗಿ ಬಣ್ಣ ಹಚ್ಚುತ್ತಿದ್ದಾರೆ. ‘ಜೆಸಿ’ ಸಿನಿಮಾದ ಟೈಟಲ್ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ‘ಜೆಸಿ’ ಎಂದರೆ ಏನು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅದಕ್ಕೆ ಚಿತ್ರತಂಡದ ಕಡೆಯಿಂದ ಉತ್ತರವೂ ಸಿಕ್ಕಿದೆ. ‘ಜೆಸಿ’ ಎಂದರೆ ಜುಡಿಷಿಯಲ್ ಕಸ್ಟಡಿ! ಜೈಲಿಂದ ಹೊರಗೆ ಬಂದಿರುವ ಯುವಕನ ಕಹಾನಿ ಈ ಸಿನಿಮಾದಲ್ಲಿ ಇರಲಿದೆ.
ಇದನ್ನೂ ಓದಿ: ‘ಕರಾವಳಿ’ ಸಿನಿಮಾಗೆ ಸಂಪದಾ ನಾಯಕಿ; ಪ್ರಜ್ವಲ್ ನಟನೆಯ ಚಿತ್ರದಲ್ಲಿ ಕನ್ನಡತಿಗೆ ಅವಕಾಶ
ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಇಂದು (ಫೆಬ್ರವರಿ 14) ‘ಜೆಸಿ’ ಚಿತ್ರದ ಮುಹೂರ್ತ ನೆರವೇರಿದೆ. ಪೂಜೆ ಸಲ್ಲಿಸುವ ಮೂಲಕ ಈ ಸಿನಿಮಾದ ಕೆಲಸಗಳಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಮುಹೂರ್ತದ ಸಮಯದಲ್ಲಿ ಇಡೀ ಚಿತ್ರತಂಡ ಹಾಜರಿ ಹಾಕಿತ್ತು. ಡಾಲಿ ಧನಂಜಯ ಕೂಡ ಭಾಗಿಯಾಗಿ ತಮ್ಮ ತಂಡದವರಿಗೆ ಶುಭ ಕೋರಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ.
ಇದನ್ನೂ ಓದಿ: ‘ಯುಐ’ ಚಿತ್ರದಲ್ಲಿ ಚೀಪ್ ಸಾಂಗ್; ಉಪ್ಪಿ ಸಾಹಿತ್ಯ ಕೇಳಿ ತಲೆ ಕೆಡಿಸಿಕೊಂಡ ಫ್ಯಾನ್ಸ್
ಈ ಸಿನಿಮಾಗೆ ಚೇತನ್ ಅವರು ಆಕ್ಷನ್-ಕಟ್ ಹೇಳಲಿದ್ದಾರೆ. ಅವರಿಗೆ ಇದು ಮೊದಲ ಸಿನಿಮಾ. ‘ಕಾಟೇರ’ ಸಿನಿಮಾಗೆ ಡೈಲಾಗ್ ಬರೆದು ಜನಮೆಚ್ಚುಗೆ ಗಳಿಸಿರುವ ಮಾಸ್ತಿ ಅವರು ‘ಜೆಸಿ’ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಇದು ಪಕ್ಕಾ ಮಾಸ್ ಕಥಾಹಂದರ ಇರುವ ಸಿನಿಮಾ ಆಗಿರಲಿದೆ. ಕಾರ್ತಿಕ್ ಛಾಯಾಗ್ರಾಹಣ, ರೋಹಿತ್ ಸೋವರ್ ಸಂಗೀತ ನಿರ್ದೇಶನದಲ್ಲಿ ‘ಜೆಸಿ’ ಸಿನಿಮಾ ಮೂಡಿಬರಲಿದೆ. ಫಸ್ಟ್ ಪೋಸ್ಟರ್ನಲ್ಲಿ ಬೆಂಗಳೂರು ಕಾರಾಗೃಹ ಮತ್ತು ಜೈಲಿನ ಕಂಬಿಗಳನ್ನು ಕಾಣಬಹುದು. ಈ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಚಿತ್ರದ ಬಗ್ಗೆ ಅಪ್ಡೇಟ್ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ