‘ಬಡವರ ಮನೆ ಮಕ್ಳು ಬೆಳೀಬೇಕು ಕಣ್ರಯ್ಯ’ ಎಂಬ ಧ್ಯೇಯ ವಾಕ್ಯದೊಡನೆ, ಆಸಕ್ತ, ಪ್ರತಿಭಾವಂತ ನವ ಸಿನಿಕರ್ಮಿಗಳಿಗೆ, ನಟ-ನಟಿಯರಿಗೆ ಬೆಂಬಲ ನೀಡುತ್ತಿರುವ ನಟ ಧನಂಜಯ್ (Daali Dhananjay) ಇದೀಗ, ಬಡವರ ಮನೆ ಮಕ್ಳ ಕಿಡ್ನಿ ಉಳಿಸಿದ್ದಾರೆ! ಹಾಗೆಂದು ಡಾಲಿ ಆಸ್ಪತ್ರೆಯನ್ನೇನೂ ಕಟ್ಟಿಸಿಲ್ಲ, ಬದಲಿಗೆ ಹೊಸಬರ ಸಿನಿಮಾ ಒಂದಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ಕತೆಗಾರ ಪೂರ್ಣಚಂದ್ರ ತೇಜಸ್ವಿಯರ (Poornchandra Tejaswi) ಅಭಿಮಾನಿಗಳೇ ಸೇರಿ ನಿರ್ಮಾಣ ಮಾಡಿರುವ ‘ಡೇರ್ ಡೆವಿಲ್ ಮುಸ್ತಾಫಾ’ ಹೆಸರಿನ ಕನ್ನಡ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಹಲವು ಅಡ್ಡಿ-ಆತಂಕಗಳ ನಡುವೆ ನಿರ್ಮಾಣವಾದ ಈ ಸಿನಿಮಾವನ್ನು ಡಾಲಿ ಧನಂಜಯ್ ಪ್ರೆಸೆಂಟ್ ಮಾಡುತ್ತಿದ್ದಾರೆ. ರಾಜ್ಯದಾದ್ಯಂತ ಸಿನಿಮಾದ ವಿತರಣೆ ಜವಾಬ್ದಾರಿಯನ್ನು ಧನಂಜಯ್ ಒಡೆತನದ ಡಾಲಿ ಪಿಕ್ಚರ್ಸ್ ವಹಿಸಿಕೊಂಡಿದೆ.
ಡಾಲಿ ತಮ್ಮ ಸಿನಿಮಾಕ್ಕೆ ಬೆಂಬಲ ಸೂಚಿಸಿರುವ ಕುರಿತಾಗಿ ಪ್ರೊಮೋಷನಲ್ ವಿಡಿಯೋ ಒಂದನ್ನು ಚಿತ್ರತಂಡ ಹಂಚಿಕೊಂಡಿದ್ದು, ತಮಾಷೆಯಾಗಿರುವ ಈ ವಿಡಿಯೋದಲ್ಲಿ ನಿರ್ದೇಶಕ ಶಶಾಂಕ್ ಸೋಗಲ್, ಸಿನಿಮಾ ನಿರ್ಮಾಣಕ್ಕೆ ತನ್ನ ಒಂದು ಕಿಡ್ನಿ ಮಾರಿರುವುದಾಗಿ ಹೇಳುತ್ತಾರೆ. ಪ್ರಚಾರಕ್ಕೆ, ವಿತರಣೆಗೆ ಇನ್ನೊಂದು ಕಿಡ್ನಿ ಮಾರುವಂತಾಗಬಹುದು ಎನ್ನುತ್ತಾರೆ. ಆಗ ಸೂಟ್ಕೇಸ್ ಹಿಡಿದುಕೊಂಡು ಸ್ಟೈಲ್ ಆಗಿ ಎಂಟ್ರಿ ಕೊಡುವ ಡಾಲಿ ಧನಂಜಯ್ ಸೂಟ್ಕೇಸ್ ಅನ್ನು ಶಶಾಂಕ್ ಕೈಗೆ ಕೊಡುತ್ತಾರೆ. ಹಣ ಕೊಟ್ಟರೇನೋ ಎಂದು ಎಲ್ಲರೂ ಸೂಟ್ಕೇಸ್ ತೆಗೆದು ನೋಡಿದರೆ, ಅದರಲ್ಲಿ ಕಿಡ್ನಿ ಇರುತ್ತದೆ. ಕಿಡ್ನಿ ಕಂಡು ಶಾಕ್ ಆದ ಚಿತ್ರತಂಡಕ್ಕೆ, ‘ಬಡವರ ಮನೆ ಮಕ್ಳ ಕಿಡ್ನಿ ಉಳೀಬೇಕು ಕಣ್ರಯ್ಯ’ ಎಂದು ಡೈಲಾಗ್ ಹೊಡೆಯುತ್ತಾರೆ ಧನಂಜಯ್.
‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾವೂ ತೇಜಸ್ವಿಯವರ ಅದೇ ಹೆಸರಿನ ಕತೆ ಆಧರಿಸಿದ ಸಿನಿಮಾ. ಸಿನಿಮಾವನ್ನು ಹೊಸಬರೇ ಸೇರಿ ಮಾಡಿದ್ದಾರೆ. ತೇಜಸ್ವಿಯ ಅಭಿಮಾನಿಗಳೇ ಸೇರಿ ಸಿನಿಮಾಕ್ಕೆ ಬಂಡವಾಳವನ್ನೂ ಹೂಡಿರುವುದು ವಿಶೇಷ. ಕತೆಗಾರನ ಅಭಿಮಾನಿಗಳೇ ಸೇರಿ ಸಿನಿಮಾ ಮಾಡಿರುವುದು ಭಾರತದಲ್ಲಿ ಇದೇ ಮೊದಲು ಎನ್ನಲಾಗಿದೆ. ಸುಮಾರು ನೂರು ಮಂದಿ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಸಿನಿಮಾದ ಎರಡು ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಸಖತ್ ವೈರಲ್ ಆಗಿವೆ. ಒಂದು ಪ್ರೊಮೋಷನಲ್ ಟೀಸರ್ ಅನ್ನು ಸಹ ಚಿತ್ರತಂಡ ಬಿಡುಗಡೆ ಮಾಡಿದ್ದು, ಕ್ರಿಯೇಟಿವ್ ಆಗಿ ಸಿನಿಮಾದ ಪ್ರಚಾರ ಆರಂಭಿಸಿದೆ. ಸಿನಿಮಾದ ಬಿಡುಗಡೆ ಶೀಘ್ರದಲ್ಲಿಯೇ ಘೋಷಿಸುವ ಸಾಧ್ಯತೆ ಇದೆ.
ಇನ್ನು ನಟ ಡಾಲಿ ಧನಂಜಯ್ ಸಾಹಿತ್ಯದ ಅಭ್ಯಾಸಿಯಾಗಿದ್ದು, ಕನ್ನಡ ಸಾಹಿತ್ಯದಲ್ಲಿ ಆಸಕ್ತಿಹೊಂದಿರುವವರಾಗಿದ್ದಾರೆ. ಪ್ರೊಮೋಷನಲ್ ವಿಡಿಯೋದಲ್ಲಿ ಅವರೇ ಹೇಳಿಕೊಂಡಿರುವಂತೆ, ಅವರೂ ಸಹ ಪೂರ್ಣಚಂದ್ರ ತೇಜಸ್ವಿಯವರ ಅಭಿಮಾನಿಯಾಗಿದ್ದು, ಹಾಗಾಗಿಯೇ ಈ ಸಿನಿಮಾದ ಜೊತೆಗೆ ನಿಂತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ