ಕೊರೊನಾತಂಕ ಕಡಿಮೆಯಾಗುತ್ತಿರುವಂತೆಯೇ ಹಲವು ಚಿತ್ರಗಳು ರಿಲೀಸ್ ದಿನಾಂಕವನ್ನು ಘೋಷಿಸುತ್ತಿವೆ. ಈಗಾಗಲೇ ಹಾಡುಗಳು ಹಾಗೂ ಟ್ರೈಲರ್ ಮೂಲಕ ಜನರ ಕುತೂಹಲ ಹೆಚ್ಚಿಸಿರುವ ‘ಲವ್ ಮಾಕ್ಟೇಲ್ 2’ (Love Mocktail 2) ಕೂಡ ರಿಲೀಸ್ ದಿನಾಂಕವನ್ನು ಘೋಷಿಸಿದೆ. ಇತ್ತೀಚೆಗೆಷ್ಟೇ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿತ್ತು. ಇದೀಗ ನಾಯಕ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ (Darling Krishna), ‘ಲವ್ ಮಾಕ್ಟೇಲ್ 2’ ರಿಲೀಸ್ ದಿನಾಂಕವನ್ನು ಖಚಿತಪಡಿಸಿದ್ದಾರೆ. ಪ್ರೇಮಿಗಳ ದಿನಕ್ಕೆ ಕೆಲವೇ ದಿನಗಳ ಮೊದಲು ಚಿತ್ರ ತೆರೆಕಾಣಲಿದೆ. ಕೃಷ್ಣ ಅವರು ತಿಳಿಸಿರುವಂತೆ ‘ಲವ್ ಮಾಕ್ಟೇಲ್ 2’ ಫೆಬ್ರವರಿ 11ರಂದು ರಿಲೀಸ್ ಆಗಲಿದೆ. ಅರ್ಥಾತ್ ಬಿಡುಗಡೆಗೆ ಕೇವಲ ಒಂದು ವಾರವಿದ್ದು, ದಿನಗಣನೆ ಆರಂಭವಾಗಿದೆ. ಚಿತ್ರವನ್ನು ಕೆಆರ್ಜಿ ಕನೆಕ್ಟ್ಸ್ (KRG Connects) ರಿಲೀಸ್ ಮಾಡಲಿದೆ.
‘ಲವ್ ಮಾಕ್ಟೇಲ್ 2’ ರಿಲೀಸ್ ಬಗ್ಗೆ ಡಾರ್ಲಿಂಗ್ ಕೃಷ್ಣ ಹಂಚಿಕೊಂಡ ಟ್ವೀಟ್:
#LoveMocktail2 #Feb11th pic.twitter.com/qBeco9U1do
— darling krishna (@darlingkrishnaa) February 3, 2022
‘ಲವ್ ಮಾಕ್ಟೇಲ್ 2’ನಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ಕಾಣಿಸಿಕೊಂಡಿರುವುದಲ್ಲದೇ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿಜ ಜೀವನದ ಜೋಡಿಯಾದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್ಟೇಲ್’ ಈ ಹಿಂದೆ ಮೋಡಿ ಮಾಡಿತ್ತು. ಆದ್ದರಿಂದಲೇ ಚಿತ್ರದ ಎರಡನೇ ಭಾಗದ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. ಈಗಾಗಲೇ ‘ಲವ್ ಮಾಕ್ಟೇಲ್ 2’ ಹಾಡುಗಳು, ಟ್ರೈಲರ್ ಜನರಿಗೆ ಮೋಡಿ ಮಾಡಿದ್ದು, ಚಿತ್ರದ ಕುರಿತ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ.
‘ಲವ್ ಮಾಕ್ಟೇಲ್ 2’ ಈಗಾಗಲೇ ಸೆನ್ಸಾರ್ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಪಡೆದಿದೆ. ಚಿತ್ರಕ್ಕೆ ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದು,ರಾಘವೇಂದ್ರ ಕಾಮತ್ ಸಾಹಿತ್ಯ ರಚಿಸಿದ್ದಾರೆ. ಕೃಷ್ಣ ಟಾಕೀಸ್ ಬ್ಯಾನರ್ನಲ್ಲಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಚಿತ್ರವನ್ನು ನಿರ್ಮಿಸಿದ್ದಾರೆ.
ಫೆಬ್ರವರಿ 25ಕ್ಕೆ ಮುಂದೂಡಲ್ಪಟ್ಟ ‘ಓಲ್ಡ್ ಮಾಂಕ್’
ಶ್ರೀನಿ ನಟನೆಯ ‘ಓಲ್ಡ್ ಮಾಂಕ್’ ಕೂಡ ವೀಕ್ಷಕರಲ್ಲಿ ಕುತೂಹಲ ಹುಟ್ಟುಹಾಕಿದೆ. ಈ ಹಿಂದೆ ಫೆಬ್ರವರಿ 11ರಂದೇ ‘ಓಲ್ಡ್ ಮಾಂಕ್’ ಕೂಡ ತೆರೆಗೆ ಬರಲಿದೆ ಎನ್ನಲಾಗಿತ್ತು. ಆದರೆ ಇದೀಗ ಶ್ರೀನಿ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ. ಫೆಬ್ರವರಿ 25ರಂದು ಚಿತ್ರ ರಿಲೀಸ್ ಆಗಲಿದೆ. ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ರಾಜೇಶ್, ಸಿಹಿಕಹಿ ಚಂದ್ರು, ಎಸ್. ನಾರಾಯಣ್ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ರದೀಪ್ ಶರ್ಮಾ ಚಿತ್ರ ನಿರ್ಮಿಸಿದ್ದು, ಸೌರಭ್ ವೈಭವ್ ಸಂಗೀತ ನೀಡಿದ್ದಾರೆ. ಫೆಬ್ರವರಿ 5ಂದು ‘ಓಲ್ಡ್ ಮಾಂಕ್’ನ ರಿವೆಂಜರ್ಸ್ ಹಾಡು ತೆರೆಕಾಣಲಿದೆ.
ಇದನ್ನೂ ಓದಿ:
ನಿಧಿ ನೆನಪಲ್ಲೇ ಸಾಗಿದ ‘ಲವ್ ಮಾಕ್ಟೇಲ್ 2’ ಟ್ರೇಲರ್; ನೀವಂದುಕೊಂಡಷ್ಟು ಸುಲಭವಿಲ್ಲ ಈ ಕೇಸ್
Love Mocktail 2: ಒಂದೇ ದಿನ ತೆರೆಗೆ ಬರಲಿವೆ ‘ಲವ್ ಮಾಕ್ಟೇಲ್ 2’ ಮತ್ತು ‘ಓಲ್ಡ್ ಮಾಂಕ್’; ಸಂಪೂರ್ಣ ಮಾಹಿತಿ ಇಲ್ಲಿದೆ
Published On - 2:17 pm, Thu, 3 February 22