ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್, ನಟಿ ಪವಿತ್ರಾ ಗೌಡ ಹಾಗೂ ಇನ್ನುಳಿದ ಸಹಚರರಿಗೆ ಯಾವಾಗ ಜಾಮೀನು ಸಿಗುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇದೆ. ವಕೀಲ ನಾರಾಯಣಸ್ವಾಮಿ ಅವರು ಇಂದು (ಜುಲೈ 10) ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಇದು ಹೈಪ್ರೊಫೈಲ್ ಕೇಸ್ ಆದ್ದರಿಂದ ಎಲ್ಲರೂ ಇದರ ಮೇಲೆ ಕಣ್ಣಿಟ್ಟಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ. ದರ್ಶನ್ ಜೊತೆ ಅರೆಸ್ಟ್ ಆಗಿರುವ ಇನ್ನುಳಿದವರ ಬಗ್ಗೆ ವಕೀಲ ನಾರಾಯಣಸ್ವಾಮಿ ಅವರು ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮ ವೃತ್ತಿಯ ಬಗ್ಗೆ ಕೆಲವು ವಿಷಯ ಹಂಚಿಕೊಂಡಿದ್ದಾರೆ.
ದರ್ಶನ್, ಪವಿತ್ರಾ ಗೌಡ ಜೊತೆ ಅರೆಸ್ಟ್ ಆಗಿರುವವರಲ್ಲಿ ಅನೇಕರು ಬಡವರು ಇದ್ದಾರೆ. ಅವರಿಗೂ ನಾರಾಯಣಸ್ವಾಮಿ ಅವರಿಂದ ಕಾನೂನಿನ ನೆರವು ಸಿಗುತ್ತಾ ಎಂಬ ಪ್ರಶ್ನೆ ಎಲ್ಲರಿಗೂ ಇದೆ. ಈ ಬಗ್ಗೆ ವಕೀಲರು ಉತ್ತರಿಸಿದ್ದಾರೆ. ‘ಐದು ಜನರಿಗೆ ನಾವೇ ವಕಾಲತ್ತು ವಹಿಸಿದ್ದೇವೆ. ಅವರೆಲ್ಲ ಬಡವರು. ಇಲ್ಲಿ ಏನು ನಡೆಯುತ್ತಿದೆ ಎಂಬುದೇ ಅವರಿಗೆ ತಿಳಿದಿಲ್ಲ. ಕಾವೇರಿ ಗಲಾಟೆ ಆದಾಗ ಅನೇಕರ ಮೇಲೆ ಪೊಲೀಸರು ಸುಳ್ಳು ಕೇಸ್ ಹಾಕಿದ್ದರು. 180 ಜನರನ್ನು ನಾವು ದುಡ್ಡು ತೆಗೆದುಕೊಳ್ಳದೇ ಉಚಿತವಾಗಿ ಬಿಡಿಸಿದ್ದೇವೆ’ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ: ಜೈಲಿಂದಲೇ ಫ್ಯಾನ್ಸ್ ಬಗ್ಗೆ ವಿಚಾರಿಸಿದ ನಟ ದರ್ಶನ್; ಎಲ್ಲರಿಗೂ ಒಂದು ಮನವಿ
‘ಜೈಲಿನಲ್ಲಿ ಬಹಳ ಜನ ನಿರಪರಾಧಿಗಳು ಇದ್ದಾರೆ. ನಮ್ಮಂತವರ ಸೇವೆ ಅವರಿಗೆ ಅಗತ್ಯ ಇದ್ದರೆ ಖಂಡಿತಾ ಮಾಡುತ್ತೇವೆ. ದರ್ಶನ್ ಕೇಸ್ ಮಾತ್ರವಲ್ಲ. ಬೇರೆ ಯಾವುದೇ ಪ್ರಕರಣದಲ್ಲಿ ನಿರಪರಾಧಿಗಳು ಇದ್ದು, ಅವರಿಗೆ ಆರ್ಥಿಕ ಸಂಕಷ್ಟ ಇದೆ ಎಂದರೆ ನನ್ನಂತಹ ಲಾಯರ್ಗಳು ಸಹಾಯ ಮಾಡುತ್ತಾರೆ. ನಮ್ಮದು ಸೇವೆಯ ವೃತ್ತಿ. ದರ್ಶನ್ ಅವರು ಕೋಟಿಗಟ್ಟಲೆ ಹಣ ಕೊಟ್ಟರು, ಪವಿತ್ರಾ ಗೌಡ ಕೋಟಿ ರೂಪಾಯಿ ಕೊಟ್ಟರು, ಬಡವರಿಗೆಲ್ಲ ಲಾಯರ್ ಸಹಾಯ ಮಾಡಲ್ಲ ಅಂತ ಜನರು ಹೇಳುತ್ತಾರೆ. ಅದೆಲ್ಲವೂ ಸುಳ್ಳು’ ಎಂದಿದ್ದಾರೆ ನಾರಾಯಣಸ್ವಾಮಿ.
‘ನಮ್ಮ ಸೇವೆಯನ್ನು ಯಾರೇ ಬಯಸಿದರೂ ನಾವು ಸಹಾಯ ಮಾಡುತ್ತೇವೆ. ನಾಳೆ ದರ್ಶನ್ ಮತ್ತು ಪವಿತ್ರಾ ಗೌಡ ಅವರು ಬೇರೆ ಲಾಯರ್ನ ಇಡಬಹುದು. ಇನ್ನುಳಿದ ಹುಡುಗರಿಗೂ ಬೇರೆ ಲಾಯರ್ ಬರುತ್ತಾರೆ ಎಂದೇನೂ ಇಲ್ಲ. ಆಗ ನಾವು ಮುಂದುವರಿಯಬಹುದು. ಏನು ಬೇಕಾದರೂ ಆಗಬಹುದು. ಇಂದು ನಾನು ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನುಳಿದ ಆರೋಪಿಗಳನ್ನೂ ಭೇಟಿ ಮಾಡಿ ಬಂದಿದ್ದೇನೆ’ ಎಂದು ನಾರಾಯಣಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.