‘ಪೌಡರ್ ಹಾಕ್ಕೊಳಿ, ತಲೆ ಬಾಚ್ಕೊಳಿ’: ದರ್ಶನ್ ಪರ ವಕೀಲರ ತರಾಟೆಗೆ ತೆಗೆದುಕೊಂಡ ಎಸ್ಪಿಪಿ
Darshan Bail Application: ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ ಹಾಗೂ ಇತರರ ಜಾಮೀನು ಅರ್ಜಿ ವಿಚಾರಣೆ ಇಂದು ಹೈಕೋರ್ಟ್ನಲ್ಲಿ ನಡೆಯಿತು. ವಾದದ ವೇಳೆ ಎಸ್ಪಿಪಿ ಪ್ರಸನ್ನ ಕುಮಾರ್ ಅವರು, ದರ್ಶನ್ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡರು.
ರೇಣುಕಾ ಸ್ವಾಮಿ ಕೊಲೆ ಆರೋಪಿಗಳ ಅರ್ಜಿ ವಿಚಾರಣೆ ಇಂದು (ಡಿಸೆಂಬರ್ 06) ರಾಜ್ಯ ಹೈಕೋರ್ಟ್ನಲ್ಲಿ ನಡೆಯಿತು. ಕಳೆದ ಕೆಲ ದಿನಗಳಲ್ಲಿ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ, ದರ್ಶನ್ ಕಾರು ಚಾಲಕ ಲಕ್ಷ್ಮಣ್, ಗೆಳೆಯ ಪ್ರದೋಶ್ ಪರ ವಕೀಲರುಗಳು ತಮ್ಮ ತಮ್ಮ ಕಕ್ಷೀದಾರರ ಪರವಾಗಿ ವಾದ ಮಂಡನೆ ಮಾಡಿದ್ದರು. ಎಲ್ಲರ ವಾದಗಳಿಗೂ ಇಂದು ಸರ್ಕಾರಿ ನಿಯೋಜಿತ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಅವರು ಪ್ರತಿ ವಾದ ಮಂಡಿಸಿದರು. ತಮ್ಮ ವಾದದಲ್ಲಿ ವಿಶೇಷವಾಗಿ ದರ್ಶನ್ ಪರ ವಕೀಲರ ವಾದದ ಬಗ್ಗೆ ಕಟುವಾಗಿ ಟೀಕೆ ಮಾಡಿದರು.
ಮೊದಲಿಗೆ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶ ಹಾಗೂ ಅದಾದ ಬಳಿಕ ನಿಯಮದಂತೆ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ ದರ್ಶನ್ ವೈದ್ಯಕೀಯ ವರದಿ ಬಗ್ಗೆ ವಾದಿಸಿದ ಎಸ್ಪಿಪಿ ಪ್ರಸನ್ನ ಕುಮಾರ್, ‘ಈ ಕೂಡಲೇ ಚಿಕಿತ್ಸೆ ಕೊಡಿಸದಿದ್ದರೆ ಲಕ್ವ ಹೊಡೆಯುತ್ತದೆ ಎಂದೆಲ್ಲ ದರ್ಶನ ಪರ ವಕೀಲರು ವಾದ ಮಂಡಿಸಿದರು. ಆದರೆ ಮಧ್ಯಂತರ ಜಾಮೀನು ಪಡೆದು ಇಷ್ಟು ವಾರವಾದರೂ ಇನ್ನೂ ಶಸ್ತ್ರಚಿಕಿತ್ಸೆ ಮಾಡಿಸಿಲ್ಲ. ಈ ವರೆಗೆ ಎರಡು ವೈದ್ಯಕೀಯ ವರದಿಯನ್ನು ನೀಡಿದ್ದಾರೆ. ನವೆಂಬರ್ 6ಕ್ಕೆ ಒಂದು ಹಾಗೂ 21 ಕ್ಕೆ ಒಂದು. ಎರಡೂ ವರದಿಯಲ್ಲಿ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಲಾಗುತ್ತಿದೆ ಎಂದಿದ್ದಾರೆ’ ಎಂದು ಸಮಸ್ಯೆಯನ್ನು ಎತ್ತಿ ತೋರಿಸಿದರು ಎಸ್ಪಿಪಿ.
ನವೆಂಬರ್ ತಿಂಗಳ ಒಂದನೇ ತಾರೀಖಿನಿಂದ ಬಿಪಿ ಮಾನಿಟರ್ ಮಾಡಲಾಗುತ್ತಿದೆ. ಆರನೇ ತಾರೀಖಿನ ವರೆಗೆ ಬಿಪಿ ನಾರ್ಮಲ್ ಇದೆ. 10ನೇ ತಾರೀಖಿನ ಬಳಿಕ ಬಿಪಿಯಲ್ಲಿ ವ್ಯತ್ಯಾಸ ಆಗಿದೆ. ನಾನು ಸಂಪರ್ಕ ಮಾಡಿರುವ ವೈದ್ಯರು ಹೇಳುವಂತೆ 2 ರೂಪಾಯಿ 25 ಪೈಸೆಯ ಮಾತ್ರೆಯೊಂದನ್ನು ನೀಡಿದರೆ ಬಿಪಿ ನಿಯಂತ್ರಣಕ್ಕೆ ಬರುತ್ತದೆ. ಆದರೆ ಇವರು ಐದು ವಾರವಾದರೂ ಇನ್ನೂ ದರ್ಶನ್ ಅನ್ನು ಶಸ್ತ್ರಚಿಕಿತ್ಸೆಗೆ ಸಿದ್ಧಪಡಿಸುತ್ತಿದ್ದಾರೆ. ‘ಸೋಪ್ ಹಾಕ್ಕೊಳ್ಳಿ, ಪೌಟರ್ ಹಾಕ್ಕೊಳ್ಳಿ, ತಲೆ ಬಾಚ್ಕೊಳ್ಳಿ’ ಎಂಬ ಸಿನಿಮಾ ಗೀತೆಯಂತೆ ಇವರು ವರದಿ ಸಲ್ಲಿಸಿದ್ದಾರೆ’ ಎಂದು ವ್ಯಂಗ್ಯ ಮಾಡಿದರು ಎಸ್ಪಿಪಿ.
ಇದನ್ನೂ ಓದಿ:ದರ್ಶನ್ ಜಾಮೀನು ಅರ್ಜಿ, ವಿಚಾರಣೆ ಮತ್ತೆ ಮುಂದೂಡಿಕೆ
ಪವಿತ್ರಾ ಗೌಡ ವಿಚಾರಕ್ಕೆ ಬಂದ ಎಸ್ಪಿಪಿ ಪ್ರಸನ್ನ ಕುಮಾರ್, ಅಪಹರಣದಲ್ಲಿ ಪವಿತ್ರಾ ಪಾತ್ರವಿದೆ ಎಂದು ವಾದಿಸುತ್ತಾ ‘ರೇಣುಕಾ ಸ್ವಾಮಿ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದಾಗ ಆತನನ್ನು ಅಲ್ಲಿಯೇ ಬ್ಲಾಕ್ ಮಾಡಲು ಅವಕಾಶ ಇತ್ತು, ಅದನ್ನು ಮಾಡದೆ, ನಿನ್ನ ನಂಬರ್ ಕಳಿಸು (ಡ್ರಾಪ್ ಮಿ ಯುವರ್ ನಂಬರ್) ಎಂದು ಪವಿತ್ರಾ ಮೆಸೇಜ್ ಮಾಡಿದ್ದಾರೆ. ಫೆಬ್ರವರಿಯಲ್ಲಿಯೇ ರೇಣುಕಾ ಸ್ವಾಮಿ ಮೆಸೇಜ್ ಕಳಿಸಿದ್ದರೂ ಸಹ ಬ್ಲಾಕ್ ಮಾಡಿಲ್ಲ. ಆತನಿಂದ ನಂಬರ್ ಪಡೆದು ಅದನ್ನು ಮೂರನೇ ಆರೋಪಿ ಪವನ್ಗೆ ನೀಡಿದ್ದಾರೆ. ಇದರ ಉದ್ದೇಶವೇನು?’ ಎಂದು ಎಸ್ಪಿಪಿ ಪ್ರಶ್ನೆ ಮಾಡಿದ್ದಾರೆ.
ಪವಿತ್ರಾ ಇಂದ ನಂಬರ್ ಪಡೆದ ಪವನ್ ಪವನ್, ರೇಣುಕಾ ಸ್ವಾಮಿ ಬಳಿ ಮಾತನಾಡಿ, ಮನೆ ವಿಳಾಸ ಕೇಳುತ್ತಾನೆ, ಜೂನ್ 6ರಂದು ಮೊಬೈಲ್‌ನಲ್ಲಿ ವಾಟ್ಸಾಪ್ ಚಾಟ್ ಮಾಡುತ್ತಾರೆ, ಜೂನ್ 7ರಂದು ಚಿತ್ರದುರ್ಗ ಕೋರ್ಟ್ ಬಳಿ ಇದ್ದೇನೆಂದು ಹೇಳ್ತಾನೆ, 4,5,6ನೇ ಆರೋಪಿಗಳನ್ನು ಎ3 ಪವನ್ ಕಳಿಸುತ್ತಾನೆ, ರೇಣುಕಾಸ್ವಾಮಿ ಕೋರ್ಟ್ಗೆ ಬಂದಿದ್ದೀನಿ ಎಂದಾಗ ಆತನನ್ನು ಹುಡುಕಲು ಕಳುಹಿಸುತ್ತಾನೆ. ಆರೋಪಿಗಳು ಕೋರ್ಟ್ ಬಳಿ ಹೋಗಿ ರೇಣುಕಾ ಸ್ವಾಮಿಗಾಗಿ ಹುಡುಕಾಟ ಮಾಡುತ್ತಾರೆ. ಆ ನಂತರ ಆಟೋದಲ್ಲಿ ಫಾಲೋ ಮಾಡಿ ಫೋಟೊ ತೆಗೆದು ಕಳಿಸಿದ್ದಾರೆ. ಪೆಟ್ರೋಲ್ ಬಂಕ್ ಬಳಿ ಇಟಿಯೋಸ್ ಕಾರಿಗೆ ರೇಣುಕಾ ಸ್ವಾಮಿಯನ್ನು ಶಿಫ್ಟ್ ಮಾಡುತ್ತಾರೆ, ಇದಕ್ಕೆ ಪೂರಕವಾಗಿ ಸಿಸಿಟಿವಿ ದೃಶ್ಯವಿದೆ, ಕಾರಿನಲ್ಲಿ ರೇಣುಕಾ ಸ್ವಾಮಿಯ ಅಕ್ಕಪಕ್ಕ ಇಬ್ಬರು ಆರೋಪಿಗಳು ಕೂರುತ್ತಾರೆ, ’ದರ್ಶನ್ ಫ್ರೆಂಡ್‌ಗೆ ಮೆಸೇಜ್ ಕಳುಹಿಸಿದ್ದೀಯಾ, ಬಾಸ್ ನಿನ್ನನ್ನು ಕರೆಯುತ್ತಿದ್ದಾರೆ ಬಾ, ಸಾರಿ ಹೇಳು ವಾಪಸ್ ಕರೆತರುತ್ತೇವೆಂದು ಎಂದು ಹೇಳಿ ಆರೋಪಿಗಳು ವಂಚಿಸಿ ರೇಣುಕಾ ಸ್ವಾಮಿಯನ್ನು ಅಪಹರಿಸಿದ್ದಾರೆ’ ಎಂದು ಎಸ್ಪಿಪಿ ವಿವರಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:10 pm, Fri, 6 December 24