ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ನಟ ದರ್ಶನ್ಗೆ ಸದ್ಯಕ್ಕಂತೂ ಜಾಮೀನು ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಇಂದು (ಜುಲೈ 18) ಅವರ ನ್ಯಾಯಾಂಗ ಬಂಧನವನ್ನು ಮತ್ತೆ 14 ದಿನಗಳ ಕಾಲ ವಿಸ್ತರಣೆ ಮಾಡಲಾಗಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನುಳಿದ ಆರೋಪಿಗಳು ಹಾಜರಾಗಿದ್ದರು. ಎಲ್ಲರಿಗೂ ಆಗಸ್ಟ್ 1ರ ತನಕ ನ್ಯಾಯಾಂಗ ಬಂಧನ ಮುಂದುವರಿಯಲಿದೆ.
ರೇಣುಕಾ ಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆದುಕೊಂಡು ಬಂದು, ಕೊಲೆ ಮಾಡಿದ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ 17 ಜನರು ಜೈಲು ಪಾಲಾಗಿದ್ದಾರೆ. ಆದಷ್ಟು ಬೇಗ ಜಾಮೀನು ಪಡೆಯಬೇಕು ಎಂದು ದರ್ಶನ್ ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಕೊಲೆ ಪ್ರಕರಣ ಆದ್ದರಿಂದ ಅವರಿಗೆ ಜಾಮೀನು ಪಡೆಯುವುದು ಕಷ್ಟವಾಗಿದೆ. ಇನ್ನೂ 14 ದಿನಗಳ ಕಾಲ ಅವರು ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯ ಆಗಿದೆ.
ಇದನ್ನೂ ಓದಿ: ಜೈಲು ಊಟದಿಂದ ದರ್ಶನ್ಗೆ ಆಗಿದೆ ಹಲವು ಆರೋಗ್ಯ ಸಮಸ್ಯೆ; ಇಲ್ಲಿದೆ ವಿವರ
ಪರಪ್ಪನ ಅಗ್ರಹಾರದಿಂದ 13 ಆರೋಪಿಗಳು ಹಾಗೂ ತುಮಕೂರಿನಿಂದ 4 ಆರೋಪಿಗಳು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಎದುರು ಹಾಜರಾದರು. ನ್ಯಾಯಾಧೀಶ ವಿಶ್ವನಾಥ ಸಿ. ಗೌಡರ್ ಅವರು ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಕಾಲ ವಿಸ್ತರಿಸುವಂತೆ ಅದೇಶಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.