
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ (Renukaswamy Case) ಸಂಬಂಧಿಸಿದಂತೆ ಇಂದು (ನವೆಂಬರ್ 3) ನ್ಯಾಯಾಲಯಕ್ಕೆ ಹಾಜರಾಗಿದ್ದರು. ಬೆಂಗಳೂರಿನ 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದೋಷಾರೋಪಣೆ ನಿಗದಿ ಪ್ರಕ್ರಿಯೆ ಮಾಡಲಾಗಿದೆ. ಎಲ್ಲ 17 ಆರೋಪಿಗಳ ಎದುರು ನ್ಯಾಯಾಧೀಶರು ದೋಷಾರೋಪಗಳನ್ನು ಓದಿ ಹೇಳಿದರು. ದರ್ಶನ್, ಪವಿತ್ರಾ ಗೌಡ (Pavithra Gowda) ಸೇರಿದಂತೆ ಎಲ್ಲ ಆರೋಪಿಗಳು ಹಾಜರಾಗಿದ್ದರು. ವಿಚಾರಣೆ ಮುಗಿದ ಬಳಿಕ ದರ್ಶನ್ (Darshan) ಪರ ವಕೀಲರು ಮಾಧ್ಯಮಗಳ ಜೊತೆ ಮಾತನಾಡಿದರು. ಇಂದು ನ್ಯಾಯಾಲಯದಲ್ಲಿ ನಡೆದಿದ್ದು ಏನು? ಮುಂದಿನ ಕೋರ್ಟ್ ಪ್ರಕ್ರಿಯೆ ಯಾವ ರೀತಿ ಇರಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
‘ಕ್ರಿಮಿನಲ್ ಪ್ರಕರಣದಲ್ಲಿ ಇದೊಂದು ಪ್ರಕ್ರಿಯೆ. ಜೈಲಿನಲ್ಲಿ ಇರುವ ಆರೋಪಿಗಳು ಹಾಗೂ ಜಾಮೀನು ಪಡೆದಿರುವ ಆರೋಪಿಗಳು ನ್ಯಾಯಾಧೀಶರ ಎದುರು ಹಾಜರಾಗಿದ್ದರು. ಪೊಲೀಸರು ಇದುವರೆಗೂ ತನಿಖೆ ನಡೆಸಿ ಚಾರ್ಜ್ಶೀಟ್ ಹಾಕಿದ್ದರು. ಅದು ಎವಿಡೆನ್ಸ್ ಅಲ್ಲ. ಇಂದು ಕೋರ್ಟ್ ದೋಷಾರೋಪಣೆ ಹೊರಿಸಿದೆ. ಈ ಆರೋಪಗಳ ಮೇಲೆ ಇನ್ಮುಂದೆ ವಿಚಾರಣೆ ಆರಂಭ ಆಗುತ್ತದೆ’ ಎಂದು ದರ್ಶನ್ ಪರ ವಕೀಲರು ಹೇಳಿದ್ದಾರೆ.
‘ನಿಮ್ಮ ಮೇಲೆ ಇರುವ ಇಂಥ ಪ್ರಕರಣ, ಸೆಕ್ಷನ್ಗಳು ಹಾಕಲಾಗಿದೆ ಎಂಬುದನ್ನು ಜಡ್ಜ್ ಸಾಹೇಬರು ಎಲ್ಲ ಆರೋಪಿಗಳ ಎದುರು ಓದಿದ್ದಾರೆ. ಆದರೆ ಎಲ್ಲ ಆರೋಪಿಗಳು ಅದನ್ನು ನಿರಾಕರಿಸಿದ್ದಾರೆ. ಈ ಪ್ರಕರಣಕ್ಕೂ ತಮಗೂ ಸಂಬಂಧ ಇಲ್ಲ, ವಿಚಾರಣೆ ನಡೆಯಲಿ. ವಿಚಾರಣೆ ಎದುರಿಸಲು ನಾವು ಸಿದ್ಧರಿದ್ದೇವೆ ಅಂತ ಆರೋಪಿಗಳು ಉತ್ತರ ಕೊಟ್ಟಿದ್ದಾರೆ’ ಎಂದಿದ್ದಾರೆ ವಕೀಲರು.
‘ಇನ್ಮುಂದೆ ಸಾಕ್ಷಿಗಳ ವಿಚಾರಣೆಗೆ ಒಂದು ದಿನಾಂಕ ನಿಗದಿ ಆಗುತ್ತದೆ. ಅದಕ್ಕೂ ಮುನ್ನ ಪ್ರಾಸಿಕ್ಯೂಷನ್ನವರು ಸಾಕ್ಷಿಗಳ ಪಟ್ಟಿಯನ್ನು ನೀಡಬೇಕು. ಈ ಪ್ರಕರಣದಲ್ಲಿ ಯಾರೆಲ್ಲ ಸಾಕ್ಷಿಗಳು ಇದ್ದಾರೆ? ಮೊದಲು ಯಾರ ವಿಚಾರಣೆ ನಡೆಸಬೇಕು ಎಂಬ ಮಾಹಿತಿಯನ್ನು ನ್ಯಾಯಾಲಯಕ್ಕೆ ಮತ್ತು ನಮಗೆ ಪ್ರಾಸಿಕ್ಯೂಷನ್ನವರು ನೀಡಬೇಕು. ಅದರ ಆಧಾರದ ಮೇಲೆ ಸಾಕ್ಷಿಗಳನ್ನು ಕರೆಯಲು ದಿನಾಂಕವನ್ನು ಕೋರ್ಟ್ ನಿಗದಿ ಮಾಡುತ್ತದೆ’ ಎಂದು ದರ್ಶನ್ ಪರ ವಕೀಲರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಣೆಗೆ ಕುಂಕುಮ ಇಟ್ಟುಕೊಂಡು ಕೋರ್ಟ್ ವಿಚಾರಣೆಗೆ ದರ್ಶನ್ ಹಾಜರು; ಕಿಕ್ಕಿರಿದ ವಕೀಲರು
‘ಆರೋಪಿಗಳ ಸಮ್ಮುಖದಲ್ಲೇ ವಿಚಾರಣೆ ನಡೆಯಬೇಕಿರುವುದು. ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಬೇಕೋ ಅಥವಾ ಖುದ್ದಾಗಿ ಹಾಜರಾಗಬೇಕೋ ಎಂಬುದನ್ನು ಕೋರ್ಟ್ ನಿರ್ಧರಿಸುತ್ತದೆ. ನವೆಂಬರ್ 10ರಂದು ರೆಗ್ಯುಲರ್ ವಿಚಾರಣೆ ಇರುವುದರಿಂದ ಆರೋಪಿಗಳು ಅಂದು ಹಾಜರಾಗಬೇಕಾಗುತ್ತದೆ’ ಎಂದಿದ್ದಾರೆ ದರ್ಶನ ಪರ ವಕೀಲರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.