‘ನನ್ನ ಐರನ್ ಲೆಗ್ ಎನ್ನುತ್ತಿದ್ದರು’; ಸುದೀಪ್ ಆರಂಭದಲ್ಲಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ
ಕಿಚ್ಚ ಸುದೀಪ್ ಅವರ ಸೂಪರ್‌ಸ್ಟಾರ್ ಪಯಣ ಸುಲಭವಲ್ಲ. ಆರಂಭದಲ್ಲಿ 'ಐರನ್ ಲೆಗ್' ಮತ್ತು 'ಲತ್ತೆ' ಎಂಬ ಟೀಕೆಗಳನ್ನು ಎದುರಿಸಿದರು. ಹಲವು ಸಿನಿಮಾಗಳು ಯಶಸ್ಸು ಕಾಣಲಿಲ್ಲ. ಧಾರಾವಾಹಿಗಳಲ್ಲಿ ನಟಿಸಿ, ಸಪೋರ್ಟಿಂಗ್ ಪಾತ್ರಗಳ ಮೂಲಕ ಪುಟಿದೆದ್ದರು. 'ಹುಚ್ಚ' ಸಿನಿಮಾ ಯಶಸ್ಸಿನೊಂದಿಗೆ 'ಕಿಚ್ಚ' ಎಂಬ ಬಿರುದು ಪಡೆದು, ತಮ್ಮ ಕಠಿಣ ಪರಿಶ್ರಮದಿಂದ ಸ್ಟಾರ್ ಸ್ಥಾನಕ್ಕೇರಿದರು.

ಸೂಪರ್ ಸ್ಟಾರ್ ಆದ ಪ್ರತಿ ಹೀರೋಗಳ ಹಿಂದೆ ಒಂದು ಶ್ರಮ ಇರುತ್ತದೆ. ಆ ಶ್ರಮ ಎಲ್ಲರಿಗೂ ಕಾಣಿಸಿರೋದಿಲ್ಲ. ಕೆಲವರು ಇದನ್ನು ಹೇಳಿಕೊಂಡರೆ, ಇನ್ನೂ ಕೆಲವರು ಮೌನ ವಹಿಸುತ್ತಾರೆ. ಕಿಚ್ಚ ಸುದೀಪ್ ಅವರು ಇಂದು ಸ್ಟಾರ್ ಹೀರೋ. ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ಆದರೆ, ಮೊದಲು ಅವರು ಈ ರೀತಿ ಇರಲಿಲ್ಲ. ಅವರು ತುಂಬಾನೇ ಕಷ್ಟಪಟ್ಟಿದ್ದರು. ಈ ಬಗ್ಗೆ ಸುದೀಪ್ ಅವರೇ ಮೊದಲು ಹೇಳಿಕೊಂಡಿದ್ದರು. ಅವರನ್ನು ಅನೇಕರು ಲತ್ತೆ ಎಂದು ಕರೆಯುತ್ತಿದ್ದರಂತೆ.
ತಮಿಳಿನ ಸಂದರ್ಶನ ಒಂದರಲ್ಲಿ ಸುದೀಪ್ ಮಾತನಾಡಿದ್ದರು. ‘ಎರಡು ಸಿನಿಮಾ ಒಪ್ಪಿಕೊಂಡೆ ಎರಡೂ ಸೆಟ್ಟೇರಿಲ್ಲ. ಮೂರನೇ ಸಿನಿಮಾ ಮಾಡಿದೆ, ಯಶಸ್ಸು ಕಾಣಲಿಲ್ಲ. ಆ ಸಮಯದಲ್ಲಿ ಐರನ್ ಲೆಗ್ ಎಂದರು. ನನಗೆ ಅದರ ಅರ್ಥವೇ ಗೊತ್ತಿರಲಿಲ್ಲ. ಆಮೇಲೆ ಯಾರೋ ಬಂದು ಲತ್ತೆ ಎಂಬ ಅರ್ಥ ಇದೆ ಎಂದರು. ಐರನ್ ಎಂದರೆ ಸ್ಟ್ರಾಂಗ್ ಅಲ್ಲವೇ ಎಂದು ಕೇಳಿದೆ. ಆಗ ಅವರು ಹಾಗಲ್ಲ ಎಂದರು. ಆಗ ಏನು ಮಾಡಬೇಕು ಎಂಬ ಪ್ರಶ್ನೆ ಮೂಡಿತು’ ಎಂದಿದ್ದರು ಸುದೀಪ್.
‘ಆಗ ನಾನು ಧಾರಾವಾಹಿ ಮಾಡಿದೆ. ಮರಳಿ ಬಂದು ಸಪೋರ್ಟಿಂಗ್ ಪಾತ್ರ ಮಾಡಿದೆ. ಆಗ ಸುನಿಲ್ ದೇಸಾಯಿ ಅವರು ಸಿಕ್ಕರು. ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಿದೆ. ಸಿನಿಮಾ ಒಳ್ಳೆಯ ಹಿಟ್ ಆಯಿತು. ಆದರೆ, ಕೆಲವೇ ದಿನಗಳಲ್ಲಿ ರಾಜ್ಕುಮಾರ್ ಅಪಹರಣ ಆದರು. ಥಿಯೇಟರ್ ಕ್ಲೋಸ್ ಆಯಿತು. ಮತ್ತೆ ಬಂತು ಐರನ್ ಲೆಗ್’ ಎಂದಿದ್ದರು ಕಿಚ್ಚ.
ಇದನ್ನೂ ಓದಿ: ಗಿಲ್ಲಿಯಷ್ಟು ಅಮಾಯಕ ಯಾರೂ ಇಲ್ಲ: ಕಾವ್ಯ ವಿಚಾರಕ್ಕೆ ಕಾಲೆಳೆದ ಕಿಚ್ಚ ಸುದೀಪ್
‘ಹುಚ್ಚ ಸಿನಿಮಾ ರಿಲೀಸ್ ಆಯಿತು. ಥಿಯೇಟರ್ಗೆ ಹೋದೆ ಕೆಲವೇ ಮಂದಿ ಇದ್ದರು. ಆಲ್ ದಿ ಬೆಸ್ಟ್ ಎಂದರು. ನಾನು ಅಲ್ಲಿಂದ ಹೋದೆ. ಬೇಸರ ಆಗ್ತಾ ಇತ್ತು. ಆ ಬಳಿಕ ಸಿನಿಮಾ ಹೌಸ್ಫುಲ್ ಆಗೋಕೆ ಪ್ರಾರಂಭ ಆಯ್ತು. ನಾನು ಥಿಯೇಟರ್ನಲ್ಲಿ ಬಂದಾಗ ಕಿಚ್ಚ ಎಂದು ಕೂಗಿದರು. ನನ್ನ ಹೆಸರು ಆಗ ಯಾರಿಗೂ ಗೊತ್ತಿರಲಿಲ್ಲ. ಅಲ್ಲಿಂದ ಕಿಚ್ಚ ಬಿರುದು ಬಂತು’ ಎಂದು ಸುದೀಪ್ ಅವರು ವಿವರಣೆ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:57 am, Tue, 4 November 25



