ಡಿ.13ಕ್ಕೆ ದರ್ಶನ್ ಭವಿಷ್ಯ ನಿರ್ಧಾರ; ಪ್ರಕಟ ಆಗಲಿದೆ ಜಾಮೀನು ಅರ್ಜಿಯ ತೀರ್ಪು

|

Updated on: Dec 12, 2024 | 9:33 PM

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ದರ್ಶನ್​, ಪವಿತ್ರಾ ಗೌಡ ಮುಂತಾದವರ ಭವಿಷ್ಯ ಶುಕ್ರವಾರ (ಡಿಸೆಂಬರ್​ 13) ನಿರ್ಧಾರ ಆಗಲಿದೆ. ಈಗಾಗಲೇ ಇವರೆಲ್ಲರ ಜಾಮೀನು ಅರ್ಜಿಯ ವಿಚಾರಣೆ ನಡೆದಿದೆ. ಅದರ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ. ಶುಕ್ರವಾರ ಮಧ್ಯಾಹ್ನ 2.30ಕ್ಕೆ ಜಾಮೀನು ಅರ್ಜಿಯ ತೀರ್ಪು ಪ್ರಕಟ ಆಗಲಿದೆ.

ಡಿ.13ಕ್ಕೆ ದರ್ಶನ್ ಭವಿಷ್ಯ ನಿರ್ಧಾರ; ಪ್ರಕಟ ಆಗಲಿದೆ ಜಾಮೀನು ಅರ್ಜಿಯ ತೀರ್ಪು
ದರ್ಶನ್, ಪವಿತ್ರಾ ಗೌಡ, ರೇಣುಕಾಸ್ವಾಮಿ
Follow us on

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮರ್ಡರ್​ ಕೇಸ್​ನಲ್ಲಿ ಪ್ರಮುಖ ಆರೋಪಿಗಳಾದ ಪವಿತ್ರಾ ಗೌಡ, ದರ್ಶನ್​, ನಾಗರಾಜ್​ ಮುಂತಾದವರಿಗೆ ಶುಕ್ರವಾರ (ಡಿ.13) ಮಹತ್ವದ ದಿನ. ಯಾಕೆಂದರೆ, ಈ ಎಲ್ಲ ಆರೋಪಿಗಳ ಜಾಮೀನು ಅರ್ಜಿಯ ತೀರ್ಪು ಹೊರಬರಲಿದೆ. ಆರೋಪಿಗಳಿಗೆ ಜಾಮೀನು ಕೊಡಿಸಲು ಅವರ ಪರ ವಕೀಲರು ಪ್ರಯತ್ನಿಸಿದ್ದಾರೆ. ಜಾಮೀನು ನೀಡಬಾರದು ಎಂದು ಎಸ್​ಪಿಪಿ ಪ್ರಸನ್ನ ಕುಮಾರ್​ ವಾದ ಮಂಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿರುವ ಹೈಕೋರ್ಟ್​ ತೀರ್ಪು ಕಾಯ್ದಿರಿಸಿದ್ದು, ಶುಕ್ರವಾರ ಮಧ್ಯಾಹ್ನ ತೀರ್ಪು ಪ್ರಕಟವಾಗಲಿದೆ. ಅದಕ್ಕಾಗಿ ಎಲ್ಲರೂ ಕಾದಿದ್ದಾರೆ.

ಜೂನ್​ ತಿಂಗಳಲ್ಲಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು, ಚಿತ್ರಹಿಂಸೆ ನೀಡಿ ಸಾಯಿಸಲಾಗಿತ್ತು. ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಗೆ ದರ್ಶನ್​, ಪವಿತ್ರಾ ಗೌಡ ಹಾಗೂ ಗ್ಯಾಂಗ್​ನವರು ಥಳಿಸಿದ್ದರು. ಬಳಿಕ ಆತ ಕೊನೆಯುಸಿರು ಎಳೆದಿದ್ದ. ಆತನ ಶವವನ್ನು ರಾಜಕಾಲುವೆಗೆ ಎಸೆಯಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಪ್ರಮುಖರು ಜಾಮೀನಿನ ನಿರೀಕ್ಷೆಯಲ್ಲಿ ಇದ್ದಾರೆ.

ಶುಕ್ರವಾರ ಮಧ್ಯಾಹ್ನ 2.30ಕ್ಕೆ ದರ್ಶನ್​, ನಾಗರಾಜ್​, ಪವಿತ್ರಾ ಗೌಡ, ಲಕ್ಷ್ಮಣ್ ಎಂ, ಜಗದೀಶ್, ಪ್ರದೋಶ್‌ ರಾವ್, ಅನುಕುಮಾರ್ ಅವರ ಜಾಮೀನು ಅರ್ಜಿಯ ತೀರ್ಪು ಪ್ರಕಟ ಆಗಲಿದ್ದು, ಎಲ್ಲರ ಗಮನ ಈ ತೀರ್ಪಿನ ಕಡೆಗಿದೆ. ಹೈಪ್ರೊಫೈಲ್ ಕೇಸ್​ ಆದ್ದರಿಂದ ಹೆಚ್ಚು ಸುದ್ದಿಯಾಗಿದೆ. ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿರುವ ಏಕಸದಸ್ಯ ಪೀಠದಲ್ಲಿ ತೀರ್ಪು ಬರಲಿದೆ.

ಈ ಕೇಸ್​ನಲ್ಲಿ ಎ1 ಆಗಿರುವ ಪವಿತ್ರಾ ಗೌಡ ಸದ್ಯಕ್ಕೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಎ2 ದರ್ಶನ್​ಗೆ ಬೆನ್ನು ನೋವು ಇರುವ ಕಾರಣಕ್ಕೆ ಮಧ್ಯಂತರ ಜಾಮೀನು ನೀಡಿ, ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೆ ಅವರ ಶಸ್ತ್ರಚಿಕಿತ್ಸೆ ವಿಳಂಬ ಆಗುತ್ತಿದೆ. ಮುಂದಿನ ಆದೇಶದ ತನಕ ಮಧ್ಯಂತರ ಜಾಮೀನು ಅವಧಿಯನ್ನು ಹೈಕೋರ್ಟ್​ ವಿಸ್ತರಿಸಿದೆ. ಶುಕ್ರವಾರ ಪ್ರಕಟ ಆಗಲಿರುವ ತೀರ್ಪಿನ ಮೇಲೆ ದರ್ಶನ್, ಪವಿತ್ರಾ ಗೌಡ ಮುಂತಾದವರು ಭವಿಷ್ಯ ನಿರ್ಧಾರ ಆಗಲಿದೆ.

ಇದನ್ನೂ ಓದಿ: ದರ್ಶನ್​ ಗೆ 45 ದಿನ ಕಳೆದರೂ ಇಲ್ಲ ಶಸ್ತ್ರಚಿಕಿತ್ಸೆ; ಮುಂದಕ್ಕೆ ಹೋಗುತ್ತಿದೆ ಸರ್ಜರಿ ದಿನಾಂಕ 

ದರ್ಶನ್ ಪರವಾಗಿ ಸಿ.ವಿ. ನಾಗೇಶ್ ವಾದ ಮಾಡಿದ್ದಾರೆ. ಪೊಲೀಸರ ತನಿಖೆಯಲ್ಲಿ ಲೋಪಗಳಿವೆ ಎಂದು ನಾಗೇಶ್ ವಾದಿಸಿದ್ದಾರೆ. ಆದರೆ ಅವರ ಪ್ರಶ್ನೆಗಳಿಗೆ ಎಸ್​ಪಿಪಿ ಪ್ರಸನ್ನ ಕುಮಾರ್​ ಸ್ಪಷ್ಟನೆ ನೀಡಿದ್ದಾರೆ. ಆರೋಪಿಗಳ ವಿರುದ್ಧದ ಅನೇಕ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಇರಿಸಲಾಗಿದೆ. ಹೈಕೋರ್ಟ್​ ನೀಡಲಿರುವ ತೀರ್ಪಿಗಾಗಿ ಎಲ್ಲರೂ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.