Roberrt Collection: ಅಬ್ಬಬ್ಬಾ…! ರಾಬರ್ಟ್ 3ನೇ ದಿನದ ಕಲೆಕ್ಷನ್ ಇಷ್ಟೊಂದಾ? 50 ಕೋಟಿಗೆ ಕೆಲವೇ ನಂಬರ್ ಬಾಕಿ!
ದರ್ಶನ್ ನಟನೆಯ ರಾಬರ್ಟ್ ಸಿನಿಮಾ ಭಾರಿ ಯಶಸ್ಸು ಗಳಿಸಿದೆ. ಮೊದಲ ದಿನ ಮಾತ್ರವಲ್ಲದೇ, ಮೂರನೇ ದಿನವೂ ನಿರ್ಮಾಪಕರ ಬೊಕ್ಕಸಕ್ಕೆ ದೊಡ್ಡ ಮೊತ್ತದ ಹಣ ಹರಿದುಬಂದಿದೆ.
ರಾಬರ್ಟ್ ಸಿನಿಮಾ ಸೂಪರ್ ಹಿಟ್ ಆಗಿದೆ. ದರ್ಶನ್ ಅವರು ಬಾಕ್ಸ್ ಆಫೀಸ್ ಸುಲ್ತಾನ ಎಂಬುದಕ್ಕೆ ಹೊಸ ಉದಾಹರಣೆ ಸಿಕ್ಕಿದೆ. ‘ಚಾಲೆಂಜಿಂಗ್ ಸ್ಟಾರ್’ ನಟನೆಯ ಈ ಹಿಂದಿನ ಎಲ್ಲ ಸಿನಿಮಾಗಳಿಗಿಂತಲೂ ‘ರಾಬರ್ಟ್’ ದೊಡ್ಡ ಮಟ್ಟದಲ್ಲಿ ಧೂಳೆಬ್ಬಿಸುತ್ತಿದೆ. ಸತತ ಮೂರು ದಿನ ಹೌಸ್ ಫುಲ್ ಆಗಿದ್ದು, ಶನಿವಾರದವರೆಗೂ ಒಟ್ಟು 47.33 ಕೋಟಿ ರೂ. ಕಮಾಯಿ ಆಗಿದೆ.
ನಿರ್ದೇಶಕ ತರುಣ್ ಸುಧೀರ್ ಮತ್ತು ನಟ ದರ್ಶನ್ ಕಾಂಬಿನೇಷನ್ನ ಈ ಚಿತ್ರದ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಅವರ ನಿರೀಕ್ಷೆಗೆ ತಕ್ಕಂತೆಯೇ ಸಿನಿಮಾ ಮೂಡಿಬಂದಿದ್ದು, ಫ್ಯಾನ್ಸ್ ಖುಷಿ ಆಗಿದ್ದಾರೆ. ಮೊದಲ ದಿನ (ಮಾ.11) ಈ ಚಿತ್ರಕ್ಕೆ 17.24 ಕೋಟಿ ರೂ. ಕಲೆಕ್ಷನ್ ಆಗಿತ್ತು. ತೆಲುಗು ವರ್ಷನ್ನಿಂದ 3.21 ಕೋಟಿ ರೂ. ಸಿಕ್ಕಿತ್ತು.
ಎರಡನೇ ದಿನ (ಮಾ.12) ಕೂಡ ಬರೋಬ್ಬರಿ 12.78 ಕೋಟಿ ರೂ. ಕಮಾಯಿ ಮಾಡುವಲ್ಲಿ ‘ರಾಬರ್ಟ್’ ಯಶಸ್ಸಿ ಆಯಿತು. ಅಷ್ಟಕ್ಕೇ ರಾಬರ್ಟ್ ನಾಗಾಲೋಟ ನಿಂತಿಲ್ಲ. ವೀಕೆಂಡ್ನಲ್ಲೂ ಈ ಸಿನಿಮಾ ಅಬ್ಬರಿಸುತ್ತಿದೆ. ಶನಿವಾರ (ಮಾ.13) ಕೂಡ ರಾಜ್ಯಾದ್ಯಂತ ಹೌಸ್ಫುಲ್ ಪ್ರದರ್ಶನ ಆಗಿದೆ. ಹಾಗಾಗಿ 14.10 ರೂ. ಸಂಗ್ರಹ ಆಗಿದೆ ಎಂದು ಚಿತ್ರತಂಡದ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ಈ ಮೂರು ದಿನಗಳ ಕಲೆಕ್ಷನ್ ಸೇರಿಸಿದರೆ ಒಟ್ಟು 47.33 ಕೋಟಿ ರೂ. ಆಗಲಿದೆ. ಅಂದರೆ ರಾಬರ್ಟ್ ಹಾಫ್ ಸೆಂಚುರಿ ಬಾರಿಸಲು ಇನ್ನು ಎರಡು ಮುಕ್ಕಾಲು ಕೋಟಿ ರೂ. ಮಾತ್ರ ಬಾಕಿ. ಭಾನುವಾರದ ಮೊದಲ ಶೋನಲ್ಲಿ ಈ ಗಡಿಯನ್ನು ರಾಬರ್ಟ್ ಮುಟ್ಟಲಿದ್ದಾನೆ. ಚಿತ್ರದ ಬಗ್ಗೆ ಎಲ್ಲೆಡೆ ಉತ್ತಮ ಅಭಿಪ್ರಾಯ ಕೇಳಿಬಂದಿದೆ. ಫ್ಯಾಮಿಲಿ ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಹಾಗಾಗಿ ಭಾನುವಾರ (ಮಾ.14) ಕೂಡ ಬಹುತೇಕ ಟಿಕೆಟ್ಗಳು ಸೋಲ್ಡ್ ಔಟ್ ಆಗುತ್ತಿವೆ. ಎರಡು ಮತ್ತು ಮೂರನೇ ದಿನ ತೆಲುಗು ವರ್ಷನ್ನಿಂದ ಎಷ್ಟು ಕೆಲಕ್ಷನ್ ಆಗಿದೆ ಎಂಬ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ಇದನ್ನೂ ಓದಿ: Roberrt Piracy : ‘ರಾಬರ್ಟ್’ ಚಿತ್ರದ 3 ಸಾವಿರ ಪೈರಸಿ ಲಿಂಕ್ ಪತ್ತೆ! ದರ್ಶನ್ ಸಿನಿಮಾ ಮೇಲೆ ಕಿಡಿಗೇಡಿಗಳ ಕಣ್ಣು