
‘ಡಿ ಬಾಸ್’ ದರ್ಶನ್ ಅವರ ’ರಾಬರ್ಟ್’ ಸಿನಿಮಾ ಬಿಡುಗಡೆಗೂ ಮೊದಲೇ ಧೂಳೆಬ್ಬಿಸುತ್ತಿದೆ. ಟ್ರೇಲರ್ ಸೂಪರ್ ಹಿಟ್ ಆಗಿದೆ. ಹಾಡುಗಳು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿವೆ. ಇನ್ನೇನಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಗೆದ್ದು ಬೀಗುವುದೊಂದೇ ಬಾಕಿ. ಮಾ.11ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಆದರೆ ಅದಕ್ಕೂ ಮೊದಲೇ ಅಭಿಮಾನಿಗಳನ್ನು ಖುಷಿಪಡಿಸಲು ಚಿತ್ರತಂಡ ನಿರ್ಧರಿಸಿದೆ. ಮಾ.8ರಿಂದ ಮಾ.10ರವರೆಗೆ ವಿಶೇಷ ಮೇಕಿಂಗ್ ವಿಡಿಯೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ರಾಬರ್ಟ್’ ಕೂಡ ಮುಂಚೂಣಿಯಲ್ಲಿದೆ. ದೊಡ್ಡ ಕ್ಯಾನ್ವಾಸ್ನಲ್ಲಿ ಚಿತ್ರ ತಯಾರಾಗಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ತುಂಬ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಕಾಶಿಯಂತಹ ಲೊಕೇಷನ್ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಟ್ಟಾರೆಯಾಗಿ ಚಿತ್ರದ ತೆರೆಹಿಂದಿನ ಕೆಲಸ ಹೇಗಿತ್ತು ಎಂಬುದನ್ನು ಅಭಿಮಾನಿಗಳಿಗೆ ತಿಳಿಸುವ ಉದ್ದೇಶದಿಂದ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಹಂಚಿಕೊಳ್ಳಲಿದೆ. ಮಾ.8ರಿಂದ ಚಿತ್ರ ಬಿಡುಗಡೆ ಆಗುವವರೆಗೆ ಪ್ರತಿದಿನ ಬೆಳಗ್ಗೆ 10.05ಕ್ಕೆ ಒಂದೊಂದು ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ.
ಬಹುದಿನಗಳ ಬಳಿಕ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಗುರುವಾರವೇ (ಮಾ.11) ‘ರಾಬರ್ಟ್’ ತೆರೆಕಾಣಲಿದೆ. ಅಂದು ರಜಾ ದಿನ ಇರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಲಿದ್ದಾರೆ. ಅದರ ಬೆನ್ನಲ್ಲೇ ವೀಕೆಂಡ್ ದಿನಗಳು ಇರುವುದರಿಂದ ಚಿತ್ರಕ್ಕೆ ಹೆಚ್ಚಿನ ಲಾಭ ಆಗಲಿದೆ. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ.
ತರುಣ್ ಸುಧೀರ್ ನಿರ್ದೇಶನದ ‘ರಾಬರ್ಟ್’ನಲ್ಲಿ ದರ್ಶನ್ಗೆ ಹಲವು ಗೆಟಪ್ಗಳಿವೆ. ಅವರಿಗೆ ಜೋಡಿಯಾಗಿ ಭದ್ರಾವತಿ ಬೆಡಗಿ ಆಶಾ ಭಟ್ ನಟಿಸಿದ್ದಾರೆ. ಇನ್ನುಳಿದ ಮುಖ್ಯಪಾತ್ರಗಳಲ್ಲಿ ಜಗಪತಿ ಬಾಬು, ಅಶೋಕ್, ರವಿಶಂಕರ್, ರವಿ ಕಿಶನ್, ದೇವರಾಜ್, ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ ಮುಂತಾದವರು ಅಭಿನಯಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಹಾಡುಗಳ ಮೂಲಕ ಈಗಾಗಲೇ ಅವರು ಚಿತ್ರದ ಗೆಲುವಿಗೆ ಬುನಾದಿ ಹಾಕಿಕೊಟ್ಟಿದ್ದಾರೆ.
Darshan: ರಾಬರ್ಟ್ ಬಿಡುಗಡೆಗೂ ಮುನ್ನ ಮತ್ತೊಂದು ಮುಖ್ಯ ವಿಚಾರದ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಸ್ತಾಪ!