ದರ್ಶನ್, ಪವಿತ್ರಾ ಗೌಡ, ವಿನಯ್, ಪ್ರದೋಶ್ ಮುಂತಾದವರು ಕೊಲೆ ಆರೋಪ ಎದುರಿಸುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ನಡೆದ ದಿನ ನಟ ಚಿಕ್ಕಣ್ಣ ಅವರನ್ನೂ ದರ್ಶನ್ ಭೇಟಿ ಆಗಿದ್ದರು. ಆ ಕಾರಣದಿಂದಲೇ ಚಿಕ್ಕಣ್ಣನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಜೂನ್ 8ರಂದು ಏನೆಲ್ಲ ನಡೆಯಿತು ಎಂಬುದನ್ನು ಪೊಲೀಸರ ವಿಚಾರಣೆ ವೇಳೆ ದರ್ಶನ್ ಬಾಯಿ ಬಿಟ್ಟಿದ್ದಾರೆ. ಟಿವಿ9ಗೆ ಈ ಕೇಸ್ನ ಚಾರ್ಜ್ಶೀಟ್ ಪ್ರತಿ ಸಿಕ್ಕಿದೆ. ದರ್ಶನ್ ಸ್ವಇಚ್ಛಾ ಹೇಳಿಕೆಯಲ್ಲಿ ಏನೆಲ್ಲ ಇದೆ ಎಂಬುದು ತಿಳಿದುಬಂದಿದೆ. ದರ್ಶನ್ ಹೇಳಿಕೆಯ ಒಂದು ಭಾಗ ಇಲ್ಲಿದೆ..
‘ಚಿಕ್ಕಣ್ಣ ಸಹ ಚಿತ್ರನಟನಾಗಿದ್ದು ಆಗಾಗ ನನ್ನನ್ನು ಭೇಟಿಯಾಗುತ್ತಿದ್ದ. ಜೂನ್ 8ರ ಬೆಳಗ್ಗೆ ಕತ್ರಿಗುಪ್ಪೆ ಫ್ಲ್ಯಾಟ್ನಿಂದ ಮನೆಗೆ ಬಂದಿದ್ದೆ. ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ನ ಮನೆಗೆ ಬಂದಿದ್ದೆ. ಮಧ್ಯಾಹ್ನ 3.30ರ ಸುಮಾರಿಗೆ ಪ್ರದೋಶ್ ನಮ್ಮ ಮನೆಗೆ ಬಂದಿದ್ದ. ನಂತರ ಸ್ಟೋನಿಬ್ರೂಕ್ಸ್ನ ರೆಸ್ಟೋರೆಂಟ್ಗೆ ಮೂವರು ಹೋಗಿದ್ದೆವು.
ಸ್ಟೋನಿಬ್ರೂಕ್ಸ್ ರೆಸ್ಟೋರೆಂಟ್ಗೆ ಚಿತ್ರ ನಟ ಚಿಕ್ಕಣ್ಣ ಸಹ ಬಂದಿದ್ದರು.’
‘ನಾವು ಅಲ್ಲೇ ಮಧ್ಯಾಹ್ನ ಊಟ ಮುಗಿಸಿ ಟೇಬಲ್ನಲ್ಲಿ ಕುಳಿತು ಚರ್ಚೆ ಮಾಡಿದೆವು. ಅಲ್ಲಿಗೆ ಪವನ್ ಬಂದಿದ್ದ, ತನ್ನ ಮೊಬೈಲ್ನಲ್ಲಿ ಫೋಟೋ ತೋರಿಸಿದ್ದ. ಗೌತಮ್ ಹೆಸರಿನ ಇನ್ಸ್ಟಾಗ್ರಾಂ ಖಾತೆಯಿಂದ ರೇಣುಕಾ ಸ್ವಾಮಿಯು ಫೋಟೋ ಕಳಿಸಿದ್ದ. ಪವಿತ್ರಾ ಅಕ್ಕನಿಗೆ ದಿನ ಖಾಸಗಿ ಅಂಗಾಂಗ ಫೋಟೋ ಕಳಿಸುತ್ತಿದ್ದಲ್ಲದೇ, ಪವಿತ್ರಾ ಅಕ್ಕನಿಗೆ ನಿನ್ನ ರೇಟ್ ಎಷ್ಟು, ನಾನೇ ರೂಮ್ ಮಾಡುವೆ ಬಾ, ನೀನು ರೂಮ್ಗೆ ಬಾ, ನಾನು ದರ್ಶನ್ಗಿಂತ ಚೆನ್ನಾಗಿದ್ದೇನೆಂದು ಮೆಸೇಜ್ ಮಾಡುತ್ತಿದ್ದ ಎಂದು ಮಾಹಿತಿ ನೀಡಿದ. ಆತನನ್ನು ಚಿತ್ರದುರ್ಗದ ರೇಣುಕಾಸ್ವಾಮಿ ಕರೆತಂದಿದ್ದರು.’
‘ರಾಘವೇಂದ್ರ ಮತ್ತು ಸ್ನೇಹಿತರು ಅಪಹರಿಸಿ ತಂದು ಶೆಡ್ನಲ್ಲಿದ್ದಾಗಿ ಮಾಹಿತಿ ಬಂತು. ಆಗ ಪವಿತ್ರಾಗೆ ಕರೆ ಮಾಡಿ ಸ್ಟೋನಿ ಬ್ರೂಕ್ಸ್ನಿಂದ ಊಟ ಕಳುಹಿಸಿರುತ್ತೇನೆ. ಪವಿತ್ರಾಗೌಡ ಊಟ ಮಾಡುತ್ತಿದ್ದ ವೇಳೆ ವಿಡಿಯೋ ಕಾಲ್ ಮಾಡಿದ್ದೆ. ಊಟದ ನಂತರ ಶೆಡ್ಗೆ ಹೋಗೋಣ ಎಂದು ಪವಿತ್ರಾ ಗೌಡಗೆ ಹೇಳಿದ್ದೆ. ಅವನನ್ನು ವಿಚಾರಿಸಿಕೊಂಡು ಬರೋಣ ಎಂದು ಪವಿತ್ರಾಗೌಡಗೆ ತಿಳಿಸಿದ್ದೆ. ನನ್ನ ಜೊತೆಗಿದ್ದ ಚಿಕ್ಕಣ್ಣ ಮತ್ತಿತರರನ್ನು ಮನೆಗೆ ಹೋಗಿ ಎಂದು ಹೇಳಿದ್ದೆ.’
‘ನಾನು, ವಿನಯ್, ಪ್ರದೋಶ್ ಜೊತೆ ಸ್ಕಾರ್ಪಿಯೊ ಕಾರಿನಲ್ಲಿ ತೆರಳಿದ್ದೆವು. ಪವಿತ್ರಾ ಮನೆ ಬಳಿಗೆ ಹೋಗಿ ಕರೆದುಕೊಂಡು ಒಟ್ಟಿಗೆ ಕಾರಿನಲ್ಲಿ ಹೊರಟೆವು. ಸಂಜೆ 4.30ರ ಸುಮಾರಿಗೆ ನಾವು ವಿನಯ್ಗೆ ಸೇರಿದ ಶೆಡ್ ತಲುಪಿದೆವು. ವಾಹನದಿಂದ ಇಳಿದು ನೋಡಿದಾಗ ವಾಹನಕ್ಕೆ ಒರಗಿ ಓರ್ವ ಕೂತಿದ್ದ. ಆತನನ್ನು ತೋರಿಸಿದ ಪವನ್ ಇವನೇ ಮೆಸೇಜ್ ಮಾಡುತ್ತಿದ್ದವನು ಎಂದಿದ್ದ. ಪವಿತ್ರಾ ಅಕ್ಕನಿಗೆ ಖಾಸಗಿ ಅಂಗಾಂಗ ಫೋಟೋ ಕಳುಹಿಸುತ್ತಿದ್ದ ಎಂದಿದ್ದ.’
ಇದನ್ನೂ ಓದಿ: ಪವಿತ್ರಾ ಗೌಡ ಜತೆ ನನ್ನದು ಲಿವ್ಇನ್ ರಿಲೇಷನ್ಶಿಪ್; ದರ್ಶನ್ ಒಪ್ಪಿಕೊಂಡ ಹಲವು ಸತ್ಯಗಳು
‘ರಾಘವೇಂದ್ರ, ದೀಪಕ್, ನಂದೀಶ್ ಕೂಡ ಪಟ್ಟಣಗೆರೆ ಶೆಡ್ನಲ್ಲೇ ಇದ್ದರು. ತೀವ್ರ ಆಯಾಸಗೊಂಡಿದ್ದ ವ್ಯಕ್ತಿ ಬ್ಲೂಜೀನ್ಸ್ ಪ್ಯಾಂಟ್, ಶರ್ಟ್ ಧರಿಸಿದ್ದ. ನಾನು ಅಲ್ಲಿಗೆ ಹೋಗುವ ಮೊದಲೇ ಹೊಡೆದಿರುವಂತೆ ಕಂಡು ಬಂತು. ಆತನ ಬಳಿಗೆ ಹೋಗಿ ನೀನೇನಾ ಈ ತರ ಮೆಸೇಜ್ ಮಾಡಿದ್ದ ಎಂದಿದ್ದೆ. ಹೌದು ನಾನೇ ಮೆಸೇಜ್ ಕಳಿಸಿದ್ದು ಎಂದು ಆತ ಒಪ್ಪಿಕೊಂಡಿದ್ದ. ನಿನಗೆ ಎಷ್ಟು ಸಂಬಳ ಎಂದಾಗ 20 ಸಾವಿರ ರೂ. ಬರುತ್ತೆ ಎಂದು ಹೇಳಿದ್ದ. 20 ಸಾವಿರ ರೂ. ಸಂಬಳದಲ್ಲಿ ಇವಳನ್ನು ಮೇಂಟೇನ್ ಮಾಡಲಾಗುತ್ತಾ? ನನ್ ಮಗನೇ.. ನೀನು ಇವಳನ್ನು ಮೇಂಟೇನ್ ಮಾಡಲು ಆಗುತ್ತಾ ಎಂದಿದ್ದೆ. ಕೆಟ್ಟದಾಗಿ ಮೆಸೇಜ್ ಮಾಡಿದ್ಯಲ್ಲ ಎಂದು ಪ್ರಶ್ನಿಸಿದಾಗ ಮಾತನಾಡಲಿಲ್ಲ’ ಎಂದು ಹೇಳಿಕೆಯಲ್ಲಿ ದರ್ಶನ್ ವಿವರಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 4:10 pm, Mon, 9 September 24