ಮತ್ತೆ ಬೆನ್ನುನೋವು ಶುರು ಆಗಿದೆ: ಜಡ್ಜ್ ಎದುರು ಸಮಸ್ಯೆ ಹೇಳಿಕೊಂಡ ದರ್ಶನ್

ಕೋರ್ಟ್ ಸೂಚನೆ ಇದ್ದರೂ ಕೂಡ ತಮಗೆ ಕಂಬಳಿ ನೀಡಿಲ್ಲ ಎಂದು ದರ್ಶನ್ ಅವರು ಹೇಳಿದ್ದಾರೆ. ಯಾಕೆ ಕಂಬಳಿ ನೀಡಿಲ್ಲ ಎಂದು ಜೈಲಾಧಿಕಾರಿಗಳನ್ನು ಪ್ರಶ್ನಿಸಿ ನ್ಯಾಯಾಲಯ ಗರಂ ಆಗಿದೆ. ಈ ವಿಚಾರಣೆ ವೇಳೆ ದರ್ಶನ್ ಅವರು ತಮ್ಮ ಬೆನ್ನು ನೋವಿನ ಸಮಸ್ಯೆಯನ್ನೂ ಹೇಳಿಕೊಂಡಿದ್ದಾರೆ.

ಮತ್ತೆ ಬೆನ್ನುನೋವು ಶುರು ಆಗಿದೆ: ಜಡ್ಜ್ ಎದುರು ಸಮಸ್ಯೆ ಹೇಳಿಕೊಂಡ ದರ್ಶನ್
Darshan Thoogudeepa
Edited By:

Updated on: Nov 20, 2025 | 6:28 PM

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್ ಅವರು ಈಗ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ಇದ್ದಾರೆ. ಈ ಮೊದಲು ಬಳ್ಳಾರಿ ಜೈಲಿನಲ್ಲಿ ಇದ್ದಾಗ ಅವರಿಗೆ ತೀವ್ರ ಬೆನ್ನು ನೋವು (Backpain) ಕಾಣಿಸಿಕೊಂಡಿತ್ತು. ಹಾಗಾಗಿ ಅವರಿಗೆ ಮಧ್ಯಂತರ ಜಾಮೀನು ನೀಡಲಾಯಿತ್ತು. ಬಳಿಕ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರಲಿಲ್ಲ. ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರುವ ದರ್ಶನ್ ಅವರಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದೆ. ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಜಡ್ಜ್ ಎದುರು ದರ್ಶನ್ (Darshan) ಅವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

ಚಳಿಗಾಲ ಆರಂಭ ಆಗಿದ್ದು, ರಾತ್ರಿ ವೇಳೆ ವಿಪರೀತಿ ಶೀತದ ವಾತಾವರಣ ಇದೆ. ಆದರೆ ದರ್ಶನ್ ಅವರಿಗೆ ಜೈಲಿನಲ್ಲಿ ಕಂಬಳಿ ನೀಡಿಲ್ಲ. ಕಂಬಳಿ ಕೊಟ್ಟಿಲ್ಲವೆಂದು ಆರೋಪಿಗಳಾದ ದರ್ಶನ್, ನಾಗರಾಜ್ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಇಂದು (ನವೆಂಬರ್ 20) ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆ ನಡೆಸಿದೆ. ಈ ವೇಳೆ ದರ್ಶನ್ ಅವರು ಆರೋಗ್ಯ ಸಮಸ್ಯೆ ಬಗ್ಗೆ ತಿಳಿಸಿದರು.

‘ನಿನ್ನೆಯೇ ಕೋರ್ಟ್ ಸೂಚಿಸಿದ್ದರೂ ಇಂದು ಬೆಳಗ್ಗೆ ಕಂಬಳಿ ನೀಡಿದ್ದಾರೆ’ ಎಂದು ಕೋರ್ಟ್​ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಮಾಹಿತಿ ನೀಡಿದರು. ‘ಈ ಹಿಂದೆ ಕೋರ್ಟ್ ಸೂಚನೆ ಬಳಿಕ 2 ಬಾರಿ ಫಿಸಿಯೋಥೆರಪಿ ಮಾಡಿದ್ದರು. ಎಲ್ 5 ಸಮಸ್ಯೆ ಇದ್ದರೂ ಈಗ ಫಿಸಿಯೋಥೆರಪಿ ನಿಲ್ಲಿಸಿದ್ದಾರೆ. ಹೀಗಾಗಿ ಮತ್ತೆ ಬೆನ್ನುನೋವಿನ ಸಮಸ್ಯೆ ಕಾಣಿಸಿಕೊಂಡಿದೆ’ ಎಂದು ದರ್ಶನ್ ಹೇಳಿದರು.

ದರ್ಶನ್ ಹೇಳಿದ್ದನ್ನು ಆಲಿಸಿದ ಬಳಿಕ ಕೋರ್ಟ್ ಗರಂ ಆಗಿದೆ. ನಿನ್ನೆಯೇ ಹೇಳಿದ್ದರೂ ಕಂಬಳಿ ಏಕೆ ನೀಡಲಿಲ್ಲವೆಂದು ಕೋರ್ಟ್ ಗರಂ ಆಗಿ ಪ್ರಶ್ನಿಸಿದೆ. ಅಲ್ಲದೇ ದರ್ಶನ್ ಅವರಿಗೆ ಫಿಸಿಯೋಥೆರಪಿ ಮುಂದುವರಿಸುವಂತೆ ಜೈಲು ಅಧಿಕಾರಿಗಳಿಗೆ ಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ: ದರ್ಶನ್ ರಾಜಾತಿಥ್ಯ ಕೇಸ್: ವರ್ಷ ಕಳೆದರೂ ಸಲ್ಲಿಕೆ ಆಗಿಲ್ಲ ಅಂತಿಮ ವರದಿ

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ ಆರೋಪ ದರ್ಶನ್ ಮತ್ತು ಅವರ ಗ್ಯಾಂಗ್ ಮೇಲೆ ಇದೆ. ಈಗಾಗಲೇ ದೋಷಾರೋಪಣೆ ನಿಗದಿ ಆಗಿದೆ. ಪ್ರಕರಣದಲ್ಲಿನ ಯಾವ ಆರೋಪಿ ಕೂಡ ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿಲ್ಲ. ಹಾಗಾಗಿ ಸಾಕ್ಷಿಗಳ ವಿಚಾರಣೆ ಆರಂಭ ಆಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.