ದರ್ಶನ್ ರಾಜಾತಿಥ್ಯ ಕೇಸ್: ವರ್ಷ ಕಳೆದರೂ ಸಲ್ಲಿಕೆ ಆಗಿಲ್ಲ ಅಂತಿಮ ವರದಿ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರೋ ದರ್ಶನ್ ಅವರಿಗೆ ಈ ಹಿಂದೆ ರಾಜಾತಿಥ್ಯ ಸಿಕ್ಕಿತ್ತು. ಅದೇ ರಾಜಾತಿಥ್ಯ ಬಗ್ಗೆ ಒಂದು ಕೇಸ್ ಕೂಡ ಆಗಿತ್ತು. ಆದರೆ ಆ ಪ್ರಕರಣದ ಚಾರ್ಜ್ ಶೀಟ್ ಮಾತ್ರ ಇನ್ನೂ ಕೋರ್ಟ್ಗೆ ಸಲ್ಲಿಕೆಯಾಗಿಲ್ಲ. ಕೇವಲ ದರ್ಶನ್ ಕೇಸ್ ಅಲ್ಲ ಇನ್ನೂ ಹತ್ತಾರು ಕೇಸ್ಗಳ ಕಥೆಯೂ ಹೀಗೆ ಆಗಿದೆ..

ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿ ನಟ ದರ್ಶನ್ (Darshan) ಜೈಲಿನಲ್ಲಿದ್ದಾಗ ಸಿಗರೇಟ್ ಹಿಡಿದು ಟೀ ಕುಡಿಯುತ್ತಾ ಕೂತಿದ್ದ ಫೋಟೋ ವೈರಲ್ ಆಗಿತ್ತು. ಈ ಒಂದು ಕೇಸ್ ಸಂಬಂಧಿಸಿದಂತೆ ಒಟ್ಟು ಮೂರು FIR ದಾಖಲಾಗಿತ್ತು. ಆದರೆ ಆ ವಿಚಾರಗಳನ್ನು ಇದೀಗ ಪೊಲೀಸರು ಮರೆತಿದ್ದಾರಾ ಎಂಬಾ ಪ್ರಶ್ನೆ ಮೂಡುತ್ತಿದೆ. ಯಾಕಂದ್ರೆ ಕೇಸ್ ದಾಖಲಾಗಿ ವರ್ಷ ಕಳೆದರೂ ಇನ್ನು ಯಾವುದಕ್ಕು ಸಹ ಚಾರ್ಜ್ ಶೀಟ್ ಮಾತ್ರ ಸಲ್ಲಿಕೆಯಾಗಿಲ್ಲ.
ಹೌದು, 2024ರ ಸೆಪ್ಟೆಂಬರ್ನಲ್ಲಿ ಪರಪ್ಪನ ಜೈಲಿನಲ್ಲಿ ದರ್ಶನ್ ರಾಜಾತಿಥ್ಯ ಪ್ರಕರಣ ಸಾಕಷ್ಟು ಸುದ್ದಿಯಾಗಿತ್ತು. ಇದರಿಂದ ದರ್ಶನ್ಗೆ ಬೇರೆ ಜೈಲಿಗೆ ಸಹ ಶಿಫ್ಟ್ ಮಾಡಲಾಗಿ ಮೂರು ಕೇಸ್ ದಾಖಲು ಮಾಡಲಾಗಿ ಒಂದೊಂದು ಕೇಸ್ಗಳನ್ನ ತನಿಖೆ ಹೊಣೆಯನ್ನ ಮೂವರು ಎಸಿಪಿಗಳಿಗೆ ನೀಡಲಾಗಿತ್ತು. ಈ ತನಿಖೆ ಆರಂಭಿಸಿದ 6 ತಿಂಗಳ ಬಳಿಕ ಜೈಲಾಧಿಕಾರಿಗಳ ವಿಚಾರಣೆ ಕೂಡ ನಡೆಸಲಾಯ್ತು. ಆದರೆ ಯಾವುದೇ ಪ್ರಕರಣದ ಅಂತಿಮ ವರದಿ ಕೂಡ ಕೋರ್ಟ್ಗೆ ಸಲ್ಲಿಕೆಯಾಗದೆ ಇನ್ನೂ ಪರಿಶೀಲನೆ ಹಂತದಲ್ಲಿದೆ.
ದರ್ಶನ್ ರಾಜಾತಿಥ್ಯ ಕೇಸ್ ಬಳಿಕವೂ ಜೈಲಿನಲ್ಲಿ ಎಲ್ಲವೂ ಹಾಗೆ ಇದೆ. ದರ್ಶನ್ ಕೇಸ್ ಆದ ನಂತರ ಇದುವರೆಗೆ ಜೈಲಿನಲ್ಲಿ ಮೊಬೈಲ್ ಬಳಕೆ, ಡ್ರಗ್ಸ್, ಮಾರಾಕಸ್ತ್ರ ಪತ್ತೆ ಸೇರಿದಂತೆ 30ಕ್ಕೂ ಹೆಚ್ಚು ಕೇಸ್ ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾಗಿದ್ದವು. ಆದರೆ ಇದರಲ್ಲಿ ಇನ್ನೂ 27 ಕೇಸ್ಗಳ ಅಂತಿಮ ವರದಿ ಕೋರ್ಟ್ಗೆ ಸಲ್ಲಿಸುವುದು ಬಾಕಿ ಇದೆ. ಅಂತಿಮ ಪರಿಶೀಲನೆ, CDR ಡಿಟೇಲ್ಸ್ ಬಾಕಿ ಅಂತ ಅನೇಕ ನೆಪಗಳಿಂದ ಕೇಸ್ಗಳ ಸ್ಥಿತಿ ಹೀಗಾಗಿದೆ. ಇಷ್ಟರ ಮಧ್ಯೆ ವಾರದಿಂದ ಮತ್ತೆ ನಾಲ್ಕು ಕೇಸ್ ದಾಖಲಾಗಿದೆ. ಆದರೆ ಹಳೇ ಕೇಸ್ ಸ್ಥಿತಿಯೇ ಹೀಗಾಗಿರುವಾಗ ಹೊಸ ಕೇಸ್ ಸ್ಥಿತಿ ಏನಾಗುತ್ತೋ ಕಾದು ನೋಡಬೇಕು.
ಇದನ್ನೂ ಓದಿ: ದರ್ಶನ್ ಆಪ್ತ ಧನ್ವೀರ್ ಮೇಲೆ ಅನುಮಾನ; ಕರೆದು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು
ರೇಣುಕಾಸ್ವಾಮಿ ಕೇಸ್ ಅಪ್ಡೇಟ್:
ರೇಣುಕಾಸ್ವಾಮಿ ಕೊಲೆ ಪ್ರಕರಣ ಈಗ ಪ್ರಮುಖ ಘಟ್ಟಕ್ಕೆ ಬಂದಿದೆ. ಈಗಾಗಲೇ ದೋಷಾರೋಪಣೆ ನಿಗದಿ ಆಗಿದೆ. ಆದರೆ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡಿಲ್ಲ. ಸಾಕ್ಷಿಗಳ ವಿಚಾರಣೆ ಆರಂಭಕ್ಕೆ ದಿನಾಂಕ ನಿಗದಿ ಆಗಬೇಕಿದೆ. ಬಳಿಕ ಸಾಕ್ಷಿಗಳಿಗೆ ಸಮನ್ಸ್ ನೀಡಲಾಗುತ್ತದೆ. ಪೂರ್ತಿ ವಿಚಾರಣೆ ಬಳಿಕ ಅಂತಿಮ ತೀರ್ಪು ಪ್ರಕಟ ಆಗಲಿದೆ.
ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




