ಪ್ಯಾನ್ ಇಂಡಿಯಾ ಅಲ್ಲ, ಯಾರಿಗೂ ಹೆದ್ರಲ್ಲ, ಅಪ್ಪಟ ಕನ್ನಡದ ಸಿನಿಮಾ ‘ಕಾಟೇರ’: ದರ್ಶನ್

|

Updated on: Dec 14, 2023 | 10:29 PM

Katera Movie: ‘ಕಾಟೇರ’ ಸಿನಿಮಾ ‘ಸಲಾರ್’, ‘ಡಂಕಿ’ ಸಿನಿಮಾ ಬಿಡುಗಡೆ ಆಗುವ ಸಮಯದಲ್ಲಿಯೇ ಬಿಡುಗಡೆ ಆಗುತ್ತಿರುವ ಬಗ್ಗೆ ಮಾತನಾಡಿರುವ ನಟ ದರ್ಶನ್, ‘ನಾವೇಕೆ ಹೆದರಬೇಕು’ ಎಂದಿದ್ದಾರೆ.

ಪ್ಯಾನ್ ಇಂಡಿಯಾ ಅಲ್ಲ, ಯಾರಿಗೂ ಹೆದ್ರಲ್ಲ, ಅಪ್ಪಟ ಕನ್ನಡದ ಸಿನಿಮಾ ‘ಕಾಟೇರ’: ದರ್ಶನ್
ಕಾಟೇರ
Follow us on

ದರ್ಶನ್ (Darshan) ನಟನೆಯ ‘ಕಾಟೇರ’ (Katera) ಡಿಸೆಂಬರ್ ಕೊನೆಯ ವಾರದಲ್ಲಿ ಬಿಡುಗಡೆ ಆಗಲಿದೆ. ಡಿಸೆಂಬರ್ ಅಂತ್ಯದಲ್ಲಿ ಈಗಾಗಲೇ ಪ್ರಭಾಸ್ ಹಾಗೂ ಶಾರುಖ್ ಖಾನ್ ಅಂಥಹಾ ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್​ಗಳ ಭಾರಿ ಬಜೆಟ್ ಸಿನಿಮಾಗಳು ಬರಲು ಸಜ್ಜಾಗಿ ನಿಂತಿವೆ. ಇದರ ನಡುವೆ ದರ್ಶನ್​ರ ‘ಕಾಟೇರ’ ಸಹ ಬಿಡುಗಡೆ ಆಗುತ್ತಿದೆ. ದರ್ಶನ್, ಇನ್ನೊಂದು ವಾರ ಕಾಯಬಹುದಿತ್ತು ಎಂಬ ಮಾತುಗಳು ಕೇಳಿ ಬಂದಿತ್ತು ಸಹ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ದರ್ಶನ್, ‘ಯಾರಿಗೂ ಹೆದರಲ್ಲ’ ಎಂದಿದ್ದಾರೆ.

ಯಾರಿಗೋ ಹೆದರಿಕೊಂಡು ನಾವ್ಯಾಕೆ ಹಿಂದೆ ಹೋಗಬೇಕು, ಇದು ನಮ್ಮ ಜಾಗ, ಬೇರೆಯವರು ಇಲ್ಲಿಗೆ ಬರಲು ಹೆದರಿಕೊಳ್ಳಬೇಕು, ನಾವು ಯಾಕೆ ಹೆದರಿಕೊಳ್ಳಬೇಕು? ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಎಷ್ಟೇ ದೊಡ್ಡ ಸಿನಿಮಾಗಳು ಬಂದರೂ ಸಹ ಕನ್ನಡಿಗರು ಕೈ ಹಿಡಿದಿದ್ದಾರೆ, ಅದೇ ಭರವಸೆ ನಮಗೆ ಇದೆ. ನಮ್ಮದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಕನ್ನಡಿಗರಿಗಾಗಿ ಮಾಡಿದ ಅಪ್ಪಟ ಕನ್ನಡದ ಸಿನಿಮಾ ಎಂದರು ನಟ ದರ್ಶನ್.

ಸಿನಿಮಾದಲ್ಲಿ ನಟಿಸಿರುವ ಶ್ರುತಿ, ಕುಮಾರ್ ಗೋವಿಂದ್, ಬಿರಾದರ ಇನ್ನೂ ಹಲವು ನಟರನ್ನು ಹೊಗಳಿದ ದರ್ಶನ್, ನಾಯಕಿ ರಾಧನಾ ಅವರ ಬಗ್ಗೆ ಮಾತನಾಡುತ್ತಾ, ಕಲಾವಿದರ ಮಕ್ಕಳಾಗಿ ಹುಟ್ಟುವುದು ಶಾಪ, ಮಕ್ಕಳನ್ನು ಅವರ ಪೋಷಕರ ಸಾಧನೆಯೊಟ್ಟಿಗೆ ಹೋಲಿಸಿ ನೋಡಲಾಗುತ್ತದೆ. ಮಾಲಾಶ್ರೀ ಅವರು 280 ಸಿನಿಮಾಗಳಲ್ಲಿ ನಟಿಸಿದ್ದರೆ, ರಾಧನಾ ಅವರ ಮೊದಲ ಸಿನಿಮಾವನ್ನು 281ನೇ ಸಿನಿಮಾ ಎಂಬಂತೆ ನೋಡುತ್ತಾರೆ. ಆದರೆ ರಾಧನಾ, ಮೊದಲ ಸಿನಿಮಾದಲ್ಲೇ ಒಳ್ಳೆಯ ತಯಾರಿ ಮಾಡಿಕೊಂಡು ಬಂದು ನಟಿಸಿದರು, ಅವರೊಬ್ಬ ‘ಒನ್ ಟೇಕ್ ಆರ್ಟಿಸ್ಟ್’ ಎಂದು ಕೊಂಡಾಡಿದರು.

ಇದನ್ನೂ ಓದಿ:ನಾಯಿ ಕಚ್ಚಿದ ಪ್ರಕರಣದಲ್ಲಿ ದರ್ಶನ್​ಗೆ ರಿಲೀಫ್​; ಚಾರ್ಜ್​ಶೀಟ್​ನಲ್ಲಿ ಇರಲ್ಲ ನಟನ ಹೆಸರು 

ಹಿರಿಯ ನಟಿ ಶ್ರುತಿ ಅವರನ್ನು ಕೊಂಡಾಡಿದ ದರ್ಶನ್, ‘ಶ್ರುತಿ ಅಂಥಹಾ ಅದ್ಭುತ ಕಲಾವಿದರು ನಮ್ಮ ನಡುವೆ ಇರುವುದು ನಮ್ಮ ಪುಣ್ಯ, ನಾವು ಅವರ ಪಕ್ಕ ನಿಲ್ಲಲು ಸಹ ಯೋಗ್ಯತೆ ಇಲ್ಲದವರು. ಸಿನಿಮಾದ ದೃಶ್ಯವೊಂದರಲ್ಲಿ ಅವರ ಅಭಿನಯ ನೋಡಿ ದಂಗಾಗಿ ಹೋದೆ. ಬಿರಾದರ ಅವರ ಪಾತ್ರವೂ ಅದ್ಭುತವಾಗಿದೆ. ಅವರ ಪಾತ್ರ ನನಗಾದರೂ ಸಿಗಬಾರದ ಅಂದುಕೊಂಡಿದ್ದೂ ಇದೆ’’ ಎಂದರು.

ಇದೇ ಸಮಯದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವನ್ನೂ ಘೋಷಿಸಿದ ದರ್ಶನ್, ಡಿಸೆಂಬರ್ 16ರಂದು ಹುಬ್ಬಳ್ಳಿಯಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಿದ್ದೇವೆ. ಸಿನಿಮಾ ಡಿಸೆಂಬರ್ 29ಕ್ಕೆ ಬಿಡುಗಡೆ ಆಗಲಿದೆ. ನಾವೂ ಸಹ ಅಂದು ಸಿನಿಮಾ ನೋಡುತ್ತೇವೆ, ನೀವು ಸಹ ಬಂದು ಸಿನಿಮಾ ನೋಡಿ, ಭಿನ್ನವಾದ ಕತೆ, ರೈತರನ್ನು ಕೇಂದ್ರವನ್ನಾಗಿ ಇಟ್ಟು ಮಾಡಿರುವ ಸಿನಿಮಾ, ನೋಡಿ ಹರಸಿ ಎಂದು ಮನವಿ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ