ಖ್ಯಾತ ನಟ ದರ್ಶನ್ ಅವರು ಆರ್ಆರ್ ನಗರ ಪೊಲೀಸ್ ಠಾಣೆಗೆ (RR Nagar Police Station) ಬಂದಿದ್ದಾರೆ. ಕೆಲವೇ ದಿನಗಳ ಹಿಂದೆ ಮಹಿಳೆ ಮೇಲೆ ನಾಯಿ ದಾಳಿ (Dog Attack Case) ಮಾಡಿದ ಪ್ರಕರಣದಲ್ಲಿ ದರ್ಶನ್ ವಿರುದ್ಧವೂ ದೂರು ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ದರ್ಶನ್ಗೆ ಪೊಲೀಸರು ನೋಟಿಸ್ ನೀಡಿದ್ದರು. ಪ್ರಕರಣದಲ್ಲಿ ಎ2 ಆಗಿರುವ ಅವರು ಇಂದು (ನವೆಂಬರ್ 15) ಪೊಲೀಸ್ ಠಾಣೆಗೆ ಬಂದು ವಿಚಾರಣೆಯಲ್ಲಿ ಭಾಗಿ ಆಗಿದ್ದಾರೆ. ಅವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಳ್ಳುತ್ತಿದ್ದಾರೆ. ಅಮಿತಾ ಜಿಂದಾಲ್ ಎಂಬುವವರಿಗೆ ದರ್ಶನ್ (Darshan) ಮನೆಯ ನಾಯಿ ಕಚ್ಚಿದ ಬಳಿಕ ಐಪಿಸಿ ಸೆಕ್ಷನ್ 289ರ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಆ ಪ್ರಕರಣದ ವಿಚಾರಣೆ ಚುರುಕುಗೊಂಡಿದೆ.
ತನಿಖಾಧಿಕಾರಿ ಇನ್ಸ್ಪೆಕ್ಟರ್ ಶಿವಕುಮಾರ್ ಅವರ ಮುಂದೆ ದರ್ಶನ್ ವಿಚಾರಣೆಗೆ ಹಾಜರಾಗಿದ್ದಾರೆ. ಕೇವಲ 15 ನಿಮಿಷ ಮಾತ್ರ ಅವರು ಪೊಲೀಸ್ ಠಾಣೆಯಲ್ಲಿ ಇದ್ದರು. ಅಷ್ಟರಲ್ಲೇ ಹೇಳಿಕೆ ನೀಡಿ ಅವರು ವಾಪಸ್ ತೆರಳಿದ್ದಾರೆ. ಮಹಿಳೆ ದೂರು ನೀಡಿದ ಬಳಿಕ ಪೊಲೀಸರು ಇತ್ತೀಚೆಗೆ ಸ್ಥಳಕ್ಕೆ ಬಂದು ಮಹಜರು ಮಾಡಿದ್ದರು. ಈ ಮೊದಲೇ ದರ್ಶನ್ ಅವರಿಗೆ ನೋಟಿಸ್ ನೀಡಲಾಗಿತ್ತು. ಕಡೆಗೂ ಅವರು ಇಂದು ವಿಚಾರಣೆಗೆ ಬಂದಿದ್ದಾರೆ.
ಇದನ್ನೂ ಓದಿ: ಮಹಿಳೆ ಮೇಲೆ ದರ್ಶನ್ ಮನೆಯ ನಾಯಿ ದಾಳಿ ಮಾಡಿದ್ದು ಹೇಗೆ? ಸ್ಥಳ ಮಹಜರು ವಿಡಿಯೋ ಇಲ್ಲಿದೆ..
ಆರ್ಆರ್ ನಗರ ಪೊಲೀಸ್ ಠಾಣೆಗೆ ಬಂದ ದರ್ಶನ್ ಅವರನ್ನು ನೋಡಲು ಅಪಾರ ಸಂಖ್ಯೆ ಅಭಿಮಾನಿಗಳು ಜಮಾಯಿಸಿದ್ದರು. ಸ್ವತಃ ದರ್ಶನ್ ಅವರೇ ಕಾರು ಚಲಾಯಿಸಿಕೊಂಡು ಬಂದಿದ್ದರು. ಅವರು ಕಾರು ಇಳಿಯುತ್ತಿದ್ದಂತಯೇ ಅಭಿಮಾನಿಗಳು ಜೈಕಾರ ಕೂಗಿದರು. ಪೊಲೀಸ್ ಠಾಣೆಯಿಂದ ವಾಪಸ್ ಹೊರಡುವಾಗ ದರ್ಶನ್ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇತ್ತೀಚೆಗೆ ಹುಲಿ ಉಗುರು ಹೊಂದಿದ ಆರೋಪದಲ್ಲೂ ದರ್ಶನ್ ಅವರಿಗೆ ಸಂಕಷ್ಟ ಎದುರಾಗಿತ್ತು. ಹುಲಿ ಉಗುರಿನ ಲಾಕೆಟ್ ಧರಿಸಿ ಕಾಣಿಸಿಕೊಂಡಿದ್ದ ಅವರ ಹಳೆಯ ಫೋಟೋ ವೈರಲ್ ಆಗಿತ್ತು. ಆ ಬಳಿಕ ಅವರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಅರಣ್ಯಾಧಿಕಾರಿಗಳು ದರ್ಶನ್ ನಿವಾಸಕ್ಕೆ ತೆರಳಿ ತಪಾಸಣೆ ನಡೆಸಿದ್ದರು. ಆ ಪ್ರಕರಣ ತಣ್ಣಗಾಯಿತು ಎನ್ನುವಾಗಲೇ ನಾಯಿ ದಾಳಿ ಘಟನೆ ನಡೆಯಿತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:28 pm, Wed, 15 November 23