AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸ್ಯ ನಟ ಧರ್ಮಣ್ಣ ಹೀರೋ ಆಗಿ ನಟಿಸಿದ ‘ರಾಜಯೋಗ’ ಸಿನಿಮಾ ಈ ವಾರ ಬಿಡುಗಡೆ

ಮೊದಲ ಬಾರಿ ಹೀರೋ ಆಗಿ ನಟಿಸಿದ ಸಿನಿಮಾ ಎಂಬ ಕಾರಣಕ್ಕೆ ಹಾಸ್ಯ ನಟ ಧರ್ಮಣ್ಣ ಅವರ ಪಾಲಿಗೆ ‘ರಾಜಯೋಗ’ ಚಿತ್ರ ಸ್ಪೆಷಲ್​ ಆಗಿದೆ. ನವೆಂಬರ್​ 17ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ತಿಳಿಯಲು ಧರ್ಮಣ್ಣ ಕಾದಿದ್ದಾರೆ. ಅವರಿಗೆ ಜೋಡಿಯಾಗಿ ನಟಿ ನಿರೀಕ್ಷಾ ರಾವ್ ಅಭಿನಯಿಸಿದ್ದಾರೆ.

ಹಾಸ್ಯ ನಟ ಧರ್ಮಣ್ಣ ಹೀರೋ ಆಗಿ ನಟಿಸಿದ ‘ರಾಜಯೋಗ’ ಸಿನಿಮಾ ಈ ವಾರ ಬಿಡುಗಡೆ
‘ರಾಜಯೋಗ’ ಚಿತ್ರದ ಪೋಸ್ಟರ್​
ಮದನ್​ ಕುಮಾರ್​
|

Updated on: Nov 16, 2023 | 12:25 PM

Share

ಅನೇಕ ಹಾಸ್ಯ ನಟರು (Comedy Actors) ಈಗಾಗಲೇ ಹೀರೋ ಆಗಿ ಯಶಸ್ಸು ಕಂಡಿದ್ದಾರೆ. ಅಂಥವರ ಸಾಲಿಗೆ ನಟ ಧರ್ಮಣ್ಣ ಕೂಡ ಸೇರ್ಪಡೆ ಆಗುತ್ತಿದ್ದಾರೆ. ‘ರಾಮಾ ರಾಮಾ ರೇ’ ಸಿನಿಮಾ ಮೂಲಕ ಪ್ರೇಕ್ಷಕರ ಮನಗೆದ್ದ ಧರ್ಮಣ್ಣ (Dharmanna) ಅವರು ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಸ್ಟಾರ್​ ಹೀರೋಗಳ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಅವರಿಗೆ ಒದಗಿಬಂತು. ಈಗ ‘ರಾಜಯೋಗ’ (Rajayoga) ಸಿನಿಮಾ ಮೂಲಕ ಅವರು ಹೀರೋ ಆಗಿದ್ದಾರೆ. ಇದೇ ಶುಕ್ರವಾರ (ನವೆಂಬರ್​ 17) ಈ ಸಿನಿಮಾ ರಿಲೀಸ್​ ಆಗುತ್ತಿದೆ. ಪ್ರೇಕ್ಷಕರು ಮೆಚ್ಚಿಕೊಂಡರೆ ನಿಜವಾಗಿಯೂ ಚಿತ್ರತಂಡಕ್ಕೆ ರಾಜಯೋಗ ಸಿಕ್ಕಂತಾಗುತ್ತದೆ.

‘ರಾಜಯೋಗ’ ಸಿನಿಮಾಗೆ ಲಿಂಗರಾಜ ಉಚ್ಚಂಗಿದುರ್ಗ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು, ನಿರ್ದೇಶನ ಕೂಡ ಮಾಡಿದ್ದಾರೆ. ‘ಶ್ರೀರಾಮರತ್ನ ಪ್ರೊಡಕ್ಷನ್ಸ್’ ಬ್ಯಾನರ್​ ಮೂಲಕ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಲಿಂಗರಾಜು ಕೆ.ಎನ್., ಪ್ರಭು ಚಿಕ್ಕನಾಯ್ಕನಹಳ್ಳಿ, ನೀರಜ್ ಗೌಡ ಹಾಗೂ ಧರ್ಮಣ್ಣ ಕಡೂರು ಅವರು ಒಟ್ಟಾಗಿ ಸೇರಿ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಒಂದಷ್ಟು ಕಾರಣಗಳಿಂದಾಗಿ ಧರ್ಮಣ್ಣ ಅವರ ಅಭಿಮಾನಿಗಳ ಬಳಗದಲ್ಲಿ ಈ ಚಿತ್ರದ ಮೇಲೆ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ: ಧರ್ಮಣ್ಣನ ಡ್ಯುಯೆಟ್ ನೋಡಿ ನವಜೋಡಿಗಳು ನೋಡಲೇ ಬೇಕೆಂದ ಅಭಿಷೇಕ್ ಅಂಬರೀಷ್

ಮೊದಲ ಬಾರಿ ಹೀರೋ ಆಗಿ ನಟಿಸಿದ ಸಿನಿಮಾ ಎಂಬ ಕಾರಣಕ್ಕೆ ಧರ್ಮಣ್ಣ ಅವರ ಪಾಲಿಗೆ ‘ರಾಜಯೋಗ’ ಚಿತ್ರ ಸ್ಪೆಷಲ್​ ಆಗಿದೆ. ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದ್ದು, ಪ್ರೇಕ್ಷಕರ ಪ್ರತಿಕ್ರಿಯೆ ತಿಳಿಯಲು ಅವರು ಕಾದಿದ್ದಾರೆ. ಅಕ್ಷಯ್ ರಿಷಭ್ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುಪ್ರಸಾದ್ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಬಿ.ಎಸ್. ಕೆಂಪರಾಜು ಅವರು ಸಂಕಲನ ಮಾಡಿದ್ದಾರೆ. ಕೃಷ್ಣ ಮೂರ್ತಿ ಕವುತಾರ್, ನಾಗೇಂದ್ರ ಶಾ, ಶ್ರೀನಿವಾಸ ಗೌಡ, ಮಹಾಂತೇಶ ಹಿರೇಮಠ್, ಉಷಾ ರವಿಶಂಕರ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ’ರಾಜಯೋಗ’ ಸಿನಿಮಾದಲ್ಲಿ ಧರ್ಮಣ್ಣನ ಮಾತ್ರವಲ್ಲ ಇದ್ದಾರೆ ಇನ್ನೂ ಇಬ್ಬರು ನಾಯಕರು

‘ರಾಜಯೋಗ’ ಚಿತ್ರದಲ್ಲಿ ಧರ್ಮಣ್ಣ ಅವರಿಗೆ ಜೋಡಿಯಾಗಿ ನಟಿ ನಿರೀಕ್ಷಾ ರಾವ್ ಅವರು ಅಭಿನಯಿಸಿದ್ದಾರೆ. ಈ ಹಿಂದೆ ಬಿಡುಗಡೆ ಆಗಿದ್ದ ಟ್ರೇಲರ್​ನಲ್ಲಿ ಕಥೆಯ ಬಗ್ಗೆ ಸುಳಿವು ಬಿಟ್ಟುಕೊಡಲಾಗಿತ್ತು. ಕೆ.ಎ.ಎಸ್. ಎಕ್ಸಾಂ ಬರೆಯಲು ಹೊರಟ ಕಥಾನಾಯಕ ಕಡೆಗೂ ಪರೀಕ್ಷೆ ಬರೆಯುತ್ತಾನೋ ಅಥವಾ ಇಲ್ಲವೋ ಎಂಬುದು ಈ ಸಿನಿಮಾದ ಕಹಾನಿ. ‘ನಿನ್ನೆ ಮತ್ತು ನಾಳೆಯ ಬಗ್ಗೆ ಯೋಚನೆ ಮಾಡದೇ, ಇಂದಿನ ಬದುಕಿನ ಮೇಲೆ ಗಮನ ಹರಿಸಬೇಕು. ಆಗ ಜೀವನ ಚೆನ್ನಾಗಿ ಇರುತ್ತದೆ’ ಎಂಬ ಸಂದೇಶವನ್ನು ಈ ಚಿತ್ರ ಒಳಗೊಂಡಿದೆ. 3 ಹಂತದಲ್ಲಿ 45 ದಿನಗಳ ಕಾಲ ಸಿನಿಮಾಗೆ ಶೂಟಿಂಗ್​ ಮಾಡಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.