ಒಟ್ಟಿಗೆ 6 ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ‘ಡೆಕ್ಕನ್​ ಕಿಂಗ್​’ ಸಂಸ್ಥೆ; ಕನ್ನಡ ಸೇರಿ ಬಹುಭಾಷೆಯಲ್ಲಿ ಬಂಡವಾಳ​

| Updated By: ಮದನ್​ ಕುಮಾರ್​

Updated on: Nov 27, 2021 | 1:21 PM

‘ಡೆಕ್ಕನ್ ಕಿಂಗ್​’ ಸಂಸ್ಥೆ ನಿರ್ಮಿಸುವ 6 ಸಿನಿಮಾಗಳಲ್ಲಿ ಒಂದಾದ ‘ಸ್ತಂಭಂ’ ಚಿತ್ರದಲ್ಲಿ ‘ಕೆಜಿಎಫ್​’ ಖ್ಯಾತಿಯ ನಟ ಗರುಡ ರಾಮ್​ ಬಣ್ಣ ಹಚ್ಚಲಿದ್ದಾರೆ. ಬಿಜು ಶಿವಾನಂದ್ ನಿರ್ಮಾಣ ಮಾಡುತ್ತಿದ್ದಾರೆ.

ಒಟ್ಟಿಗೆ 6 ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ ‘ಡೆಕ್ಕನ್​ ಕಿಂಗ್​’ ಸಂಸ್ಥೆ; ಕನ್ನಡ ಸೇರಿ ಬಹುಭಾಷೆಯಲ್ಲಿ ಬಂಡವಾಳ​
ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡ
Follow us on

ಚಿತ್ರರಂಗದಲ್ಲಿ ಒಂದು ಸಿನಿಮಾ ನಿರ್ಮಾಣ ಮಾಡುವುದೇ ಕಷ್ಟದ ಕೆಲಸ. ಅದರಲ್ಲೂ ಕೊವಿಡ್​ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಹೀಗಿರುವಾಗ ಏಕಕಾಲಕ್ಕೆ 6 ಸಿನಿಮಾಗಳನ್ನು ನಿರ್ಮಾಣ ಮಾಡುವುದು ಒಂದು ಸಾಹಸವೇ ಸರಿ. ಆ ರೀತಿಯ ಸಾಹಸಕ್ಕೆ ‘ಡೆಕ್ಕನ್​ ಕಿಂಗ್​’ ಸಂಸ್ಥೆ ಕೈ ಹಾಕಿದೆ. ಈ ಸಂಸ್ಥೆಯ ಬಿಜು ಶಿವಾನಂದ್​ ಅವರು ಈ ಎಲ್ಲ ಸಿನಿಮಾಗಳ ನಿರ್ಮಾಣದ ಹೊಣೆಯನ್ನು ಹೊತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು, ಮಲಯಾಳಂ, ತುಳು, ಕೊಂಕಣಿ ಭಾಷೆಗಳಲ್ಲಿ ಈ ಸಿನಿಮಾಗಳು ಮೂಡಿಬರಲಿವೆ. ಅನೇಕ ಹೊಸ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ. ‘ಡೆಕ್ಕನ್​ ಕಿಂಗ್​’ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ‘ಸ್ಥಂಭಂ’, ‘ಸಮರ್ಥ್​’, ‘ಮಂಗಳೂರು’ ಮತ್ತು ‘ಫೆಬ್ರವರಿ 29 ಸೂರ್ಯಗಿರಿ’ ಚಿತ್ರಗಳ ಶೀರ್ಷಿಕೆ ಅನಾವರಣ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ.

‘ಡೆಕ್ಕನ್ ಕಿಂಗ್​’ ಸಂಸ್ಥೆಯ ಬೆನ್ನು ತಟ್ಟಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹಲವು ಗಣ್ಯರು ಆಗಮಿಸಿದ್ದರು. ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್​ ಅವರು ಶುಭಕೋರಿದರು. ಈ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವ ಅನೇಕ ತಂತ್ರಜ್ಞರು ಪರಭಾಷೆಯವರು. ವೇದಿಕೆ ಮೇಲೆ ತಮಿಳಿನಲ್ಲಿ ಮಾತನಾಡಿದ ಅವರಿಗೆ ಉಮೇಶ್​ ಬಣಕಾರ್​ ಒಂದು ಕಿವಿಮಾತು ಹೇಳಿದರು. ಕನ್ನಡವನ್ನು ಕಲಿತು ಮಾತನಾಡುವಂತೆ ಸೂಚನೆ ನೀಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್​ ಶೆಟ್ಟಿ ಈ ಮಾತನ್ನು ಪುನರುಚ್ಚರಿಸಿದರು. ಮುಂದಿನ ಸುದ್ದಿಗೋಷ್ಠಿ ವೇಳೆಗೆ ಖಂಡಿತವಾಗಿಯೂ ಕನ್ನಡದಲ್ಲೇ ಮಾತನಾಡುವುದಾಗಿ ಎಲ್ಲ ತಂತ್ರಜ್ಞರು ಭರವಸೆ ನೀಡಿದ್ದಾರೆ.

‘ಡೆಕ್ಕನ್ ಕಿಂಗ್​’ ಬ್ಯಾನರ್​ ಮೂಲಕ ನಿರ್ಮಾಣ ಆಗುತ್ತಿರುವ ‘ಸಮರ್ಥ್’ ಚಿತ್ರಕ್ಕೆ ತಮಿಳಿನಲ್ಲಿ ‘ವೇದಾದ್ರಿ’ ಎಂದು ಹೆಸರು ಇಡಲಾಗಿದೆ. ಈ ಚಿತ್ರಕ್ಕೆ ರಾಜಾ ವೆಂಕಯ್ಯ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಕನ್ನಡದಲ್ಲಿ ಪ್ರವೀರ್​ ಶೆಟ್ಟಿ ಮತ್ತು ಸೋನಲ್​ ಮೊಂತೆರೋ ಅಭಿನಯಿಸುತ್ತಿದ್ದಾರೆ. ತಮಿಳಿನಲ್ಲಿ ಕಿಶೋರ್​ ಮತ್ತು ಏಸ್ತರ್​ ನರೋನಾ ನಟಿಸುತ್ತಿದ್ದಾರೆ. ಪ್ರತಾಪ್​ ಪೋತನ್​, ಅವಿನಾಶ್​, ಪವಿತ್ರಾ ಲೋಕೇಶ್​, ಸಂದೀಪ್​ ಮಲಾನಿ ಕನ್ನಡ ಮತ್ತು ತಮಿಳು ಎರಡೂ ವರ್ಷನ್ ​ಗಳಲ್ಲಿ ನಟಿಸಲಿದ್ದಾರೆ. ಕಾರ್ತಿಕ್​ ಸುಬ್ರಹ್ಮಣ್ಯಂ ಛಾಯಾಗ್ರಹಣ, ಭಾರದ್ವಾಜ್​ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸುದ್ದಿಗೋಷ್ಠಿಗೆ ಹಿರಿಯ ನಟ ಅವಿನಾಶ್​ ಕೂಡ ಆಗಮಿಸಿದ್ದರು.

ಇನ್ನೊಂದು ಚಿತ್ರ ‘ಸ್ತಂಭಂ’ನಲ್ಲಿ ‘ಕೆಜಿಎಫ್​’ ಖ್ಯಾತಿಯ ನಟ ಗರುಡ ರಾಮ್​ ಅವರು ಬಣ್ಣ ಹಚ್ಚಲಿದ್ದಾರೆ. ಸಂದೀಪ್​ ಶೆರಾವತ್​ ನಾಯಕನಾಗಿ ನಟಿಸಲಿದ್ದಾರೆ. ಹೊಸ ಕಲಾವಿರಾದ ಆಲಿಯಾ ಮತ್ತು ರಕ್ಷಿತ್​ ಅವರಿಗೆ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ. ಅವರೆಲ್ಲರೂ ‘ಡೆಕ್ಕನ್ ಕಿಂಗ್​’ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು.

ಸಂದೀಪ್​ ಮಲಾನಿ ನಿರ್ದೇಶಿಸಲಿರುವ ‘ಮಂಗಳೂರು’ ಚಿತ್ರಕ್ಕೂ ‘ಡೆಕ್ಕನ್​ ಕಿಂಗ್​’ ಬ್ಯಾನರ್​ ಮೂಲಕ ಬಂಡವಾಳ ಹೂಡಲಾಗುತ್ತಿದೆ. ಈ ಚಿತ್ರಕ್ಕೆ ಇನ್ನಷ್ಟೇ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆ. ಈ ಚಿತ್ರ ಕನ್ನಡದ ಜೊತೆಗೆ ಕೊಂಕಣಿ, ತುಳು ಮತ್ತು ಬ್ಯಾರಿ ಭಾಷೆಗಳಲ್ಲಿ ಮೂಡಿಬರಲಿದೆ. ಕರಾವಳಿ ಪ್ರತಿಭೆಗಳಿಗೆ ಅವಕಾಶ ನೀಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಮತ್ತೊಂದು ಸಿನಿಮಾಗೆ ‘ಫೆಬ್ರವರಿ 29 ಸೂರ್ಯಗಿರಿ’ ಎಂದು ಡಿಫರೆಂಟ್​ ಆಗಿ ಹೆಸರು ಇಡಲಾಗಿದೆ. ಇದು ಕೂಡ ದ್ವಿಭಾಷಾ ಚಿತ್ರವಾಗಿದ್ದು, ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣ ಆಗಲಿದೆ. ಇದರಲ್ಲೂ ಪ್ರವೀರ್​ ಶೆಟ್ಟಿ, ಏಸ್ತರ್​ ನೊರಾನಾ, ಪ್ರಗತಿ, ಗೋಕುಲ್​ ಶಿವಾನಂದ್​ ಮತ್ತು ಸಂದೀಪ್​ ಮಲಾನಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:

ಪುನೀತ್​ ಹೊಸ ಚಿತ್ರ ‘ಲಕ್ಕಿ ಮ್ಯಾನ್​’ ಶೀಘ್ರವೇ ರಿಲೀಸ್​; ಅಪ್ಪು ಅಭಿಮಾನಿಗಳಿಗೆ ಗುಡ್​ ನ್ಯೂಸ್​

‘ದೃಶ್ಯ 2’ ಟ್ರೇಲರ್​ ರಿಲೀಸ್​ ಕಾರ್ಯಕ್ರಮಕ್ಕೆ ಬಂದ ಕಿಚ್ಚ ಸುದೀಪ್​; ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ