ದೀಕ್ಷಿತ್ ಶೆಟ್ಟಿಯ ‘ಕೆಟಿಎಂ’ ಸಿನಿಮಾದ ಹೊಸ ಹಾಡು ಬಿಡುಗಡೆ
KTM Movie: ಬಹುಭಾಷಾ ನಟ ಎನಿಸಿಕೊಂಡಿರುವ ದೀಕ್ಷಿತ್ ಶೆಟ್ಟಿ ನಟಿಸಿರುವ ಹೊಸ ಕನ್ನಡ ಸಿನಿಮಾ ‘ಕೆಟಿಎಂ’ನ ಹೊಸ ಹಾಡೊಂದು ಬಿಡುಗಡೆ ಆಗಿದೆ.
‘ದಿಯಾ‘ (Dia) ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಈಗ ಬಹುಭಾಷಾ ನಟ. ತೆಲುಗಿನಲ್ಲಿ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿ ತಮ್ಮ ಪ್ರತಿಭೆ ಸಾಬೀತು ಮಾಡಿದ್ದಾರೆ. ದೀಕ್ಷಿತ್ ಅಭಿನಯದ ‘ಕೆಟಿಎಂ’ ಕನ್ನಡ ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು ಗಮನ ಸೆಳೆದಿದೆ. ಇದೀಗ ಈ ಸಿನಿಮಾದ ಮೆಲೋಡಿ ಹಾಡೊಂದು ಬಿಡುಗಡೆ ಆಗಿದೆ. ‘ಸೋಜಿಗ’ ಎಂಬ ಮೆಲೋಡಿ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದ್ದು ಹಾಡಿಗೆ ಅರಸು ಅಂತಾರೆ ಸಾಹಿತ್ಯ ಬರೆದಿದ್ದು, ಸಂಚಿತ್ ಹೆಗ್ಡೆ ಮಧುರ ದ್ವನಿಯಲ್ಲಿ ಹಾಡು ಮೂಡಿಬಂದಿದೆ. ಚೇತನ್ ರಾವ್ ಸಂಗೀತ ನೀಡಿದ್ದಾರೆ. ದೀಕ್ಷಿತ್ ಹಾಗೂ ಕಾಜಲ್ ಕುಂದರ್ ಸೋಜಿಗ ಸಹ ದನಿಗೂಡಿಸಿದ್ದಾರೆ.
‘ಅಥರ್ವ’ ಸಿನಿಮಾ ನಿರ್ದೇಶಿಸಿದ್ದ ಅರುಣ್, ಈ ‘ಕೆಟಿಎಂ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದು ಅರುಣ್ ಅವರ ಎರಡನೇ ಸಿನಿಮಾ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ನಿರತವಾಗಿರುವ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯವನ್ನು ಆರಂಭ ಮಾಡಿದೆ. ಪ್ರಚಾರದ ಮೊದಲ ಹಂತವಾಗಿ ಕುತೂಹಲ ಮೂಡಿಸುವ ಟೀಸರ್ ಬಿಡುಗಡೆ ಮಾಡಿತ್ತು. ಸ್ಯಾಂಡಲ್ವುಡ್ನ 50 ಮಂದಿ ಸೆಲೆಬ್ರಿಟಿಗಳು ‘ಕೆಟಿಎಂ’ ಟೀಸರ್ ರಿಲೀಸ್ ಮಾಡಿ ಶುಭ ಕೋರಿದ್ದು ವಿಶೇಷವಾಗಿತ್ತು. ಈಗ ಹಾಡನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ:ತೆಲುಗು, ತಮಿಳು ಬಳಿಕ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟ ಕನ್ನಡದ ನಟ ದೀಕ್ಷಿತ್ ಶೆಟ್ಟಿ
ನವಿರಾದ ಪ್ರೇಮ ಕತೆಯನ್ನು ಒಳಗೊಂಡಿರುವ ‘ಕೆಟಿಎಂ’ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ದೀಕ್ಷಿತ್, ನಾಲ್ಕು ಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ದೀಕ್ಷಿತ್ಗೆ ಜೋಡಿಯಾಗಿ ಕಾಜಲ್ ಕುಂದರ್ ಹಾಗೂ ಸಂಜನಾ ನಟಿಸಿದ್ದಾರೆ. ಇವರನ್ನು ಹೊರತುಪಡಿಸಿ ಚಿತ್ರದಲ್ಲಿ ಉಷಾ ಭಂಡಾರಿ, ಪ್ರಕಾಶ್ ತುಮ್ಮಿನಾಡು, ರಘು ರಮಣಕೊಪ್ಪ, ಶಾನಿಲ್ ಗುರು, ಬಾಬು ಹಿರಣಯ್ಯ, ದೇವ್ ದೇವಯ್ಯ, ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
‘ಕೆಟಿಎಂ’ ಚಿತ್ರವನ್ನು ಮಹಾಸಿಂಹ ಮೂವೀಸ್ ಬ್ಯಾನರ್ ಅಡಿ ವಿನಯ್ ನಿರ್ಮಾಣ ಮಾಡಿದ್ದು, ರಕ್ಷಯ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ನವೀನ್ ಕ್ಯಾಮೆರಾ ವರ್ಕ್, ಅರ್ಜುನ್ ಕಿಟ್ಟು ಸಂಕಲನ, ಚೇತನ್ ಸಂಗೀತ ನಿರ್ದೇಶನ, ಅಭಿನಂದನ್ ದೇಶಪ್ರಿಯ ಸಂಭಾಷಣೆ ಈ ಚಿತ್ರಕ್ಕೆ ಇದೆ. ಉಡುಪಿ, ಮಂಗಳೂರು, ಕಾರ್ಕಳ, ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಫೆಬ್ರವರಿ ತಿಂಗಳಲ್ಲಿ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ