ಸುರೇಶ್ ಲಕ್ಕೂರ್ ನಿರ್ದೇಶನ ಮಾಡಿರುವ ‘ದೇವರ ಕನಸು’ ಚಿತ್ರ ಪ್ರತಿಷ್ಠಿತ ಕಾನ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ. 2019ರಲ್ಲಿಯೇ ಶೂಟಿಂಗ್ ಆರಂಭಿಸಿದ್ದ ಈ ಸಿನಿಮಾ ಒಟ್ಟು 29 ದಿನಗಳಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡಿತು. ಈಗ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಕಾಲಿಡುತ್ತಿದೆ. ಮೊದಲ ಹೆಜ್ಜೆಯಾಗಿ ಪ್ರತಿಷ್ಠಿತ ಕಾನ್ ಚಿತ್ರೋತ್ಸವದ ಅವಕಾಶ ಸಿಕ್ಕಿದ್ದು, ಮೇ ಕೊನೇ ವಾರದಲ್ಲಿ ಪ್ರದರ್ಶನವಾಗಲಿದೆ. ಬೇರೆ ಬೇರೆ ಸಿನಿಮೋತ್ಸವಗಳಿಂದಲೂ ಆಹ್ವಾನ ಬರುತ್ತಿರುವುದು ಚಿತ್ರತಂಡದ ಖುಷಿಗೆ ಕಾರಣ ಆಗಿದೆ.
ಇದೊಂದು ಸಾಮಾಜಿಕ ಸಂದೇಶ ಸಾರುವ ಸಿನಿಮಾ. ಸ್ವಂತ ಸೈಕಲ್ ಪಡೆದುಕೊಳ್ಳಬೇಕು ಎಂದು ಬಯಸುವ 12 ವರ್ಷದ ಬಾಲಕನ ಕಥೆಯನ್ನು ಈ ಚಿತ್ರ ಹೊಂದಿದೆ. ಸೈಕಲ್ ಖರೀದಿಸಿ ಊರ ಸೈಕಲ್ ರೇಸ್ನಲ್ಲಿ ಗೆಲುವು ಸಾಧಿಸುವುದು ಆತನ ಕನಸು. ತನ್ನ ಈ ಕನಸನ್ನು ನನಸು ಮಾಡಿಕೊಳ್ಳಲು ಆತ ಏನೆಲ್ಲ ಹರಸಾಹಸ ಮಾಡುತ್ತಾನೆ ಎಂಬುದೇ ಚಿತ್ರದ ಕಥೆ.
ನ್ಯೂಯಾರ್ಕ್ ಸಿನಿಮಾ ಅಕಾಡೆಮಿಯಲ್ಲಿ ತರಬೇತಿ ಪಡೆದು ಬಂದಿರುವ ನಿರ್ದೇಶಕ ಸುರೇಶ್ ಲಕ್ಕೂರ್ ಅವರಿಗೆ ಇದು ಮೊದಲ ಚಿತ್ರ. ಈ ಮೊದಲು ಅವರು ಕನ್ನಡದ ದೃಶ್ಯ ಚಿತ್ರತಂಡದಲ್ಲಿ ಕೆಲಸ ಮಾಡಿದ್ದರು. ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮಕ್ಕಳ ಸಿನಿಮಾ ಮೂಲಕ ಅವರು ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಚಿಂತಾಮಣಿ ಬಳಿಯ ಹಿರೇಪಳ್ಳಿ, ಕನಂಪಲ್ಲಿ, ಕೈವಾರ ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.
ದೀಪಕ್, ಅಮೂಲ್ಯ, ಯುವರಾಜ್ ಕಿಣಿ, ಆರುಷಿ ವೇದಿಕಾ, ಮಣಿ, ರೂಪಾ, ವಿಜಯ್ ರಾಕೇಶ್ ಮುಂತಾದವರು ನಟಿಸಿದ್ದಾರೆ. ಸಿ. ಜಯಕುಮಾರ್, ಸಿ. ಶೇಖರ್ ನಿರ್ಮಾಣ ಮಾಡಿದ್ದಾರೆ. ಗಂಗಾಧರ್, ಶಂಕರ್, ಸಿ. ಸುಬ್ಬಯ್ಯ ಸಹ ನಿರ್ಮಾಪಕರಾಗಿದ್ದಾರೆ. ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.
ದೇಶಾದ್ಯಂತ ಇರುವ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿರುವುದು ವಿಶೇಷ. ರತ್ನಜಿತ್ ರಾಯ್ ಛಾಯಾಗ್ರಹಣ, ಅನಿರ್ಬನ್ ಗಂಗೂಲಿ ಸೌಂಡ್ ಡಿಸೈನಿಂಗ್, ಜಿಸ್ನು ಸೇನ್ ಸಂಕಲನ ಮಾಡಿದ್ದಾರೆ. ಇವರೆಲ್ಲ ಪಶ್ಚಿಮ ಬಂಗಾಳದವರು. ಚೆನ್ನೈ ಮೂಲದ ನಿತ್ಯಾನಂದ ಸೌಂಡ್, ಸುಂದರ್ ಆರ್. ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕೇರಳದ ಜಿಷಾ ಮ್ಯಾಥ್ಯು ವಸ್ತ್ರ ವಿನ್ಯಾಸ, ಮನೋಜ್ ಅಂಗಮಾಲಿ ಮೇಕಪ್ ಜವಾಬ್ದಾರಿ ನಿಭಾಯಿಸಿದ್ದಾರೆ. ಕರ್ನಾಟಕದ ಲಿಂಗರಾಜ್ ಇತಿಹಾಸ್ ಸಂಭಾಷಣೆ ಮತ್ತು ಸಾಹಿತ್ಯ ಬರೆದ್ದಾರೆ. ಚನ್ನಬಸವ ಪ್ರೊಡಕ್ಷನ್ ಡಿಸೈನರ್ ಆಗಿ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಸುನೀಲ್ ರಾಮ್ ಕಥೆ ಬರೆದಿದ್ದಾರೆ.
ಇದನ್ನೂ ಓದಿ: Puglya Movie: ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿಗೆ ಪಾತ್ರವಾದ ಮರಾಠಿ ಚಿತ್ರ ‘ಪುಗ್ಲ್ಯಾ’
ಸಿನಿಮಾ ಹುಚ್ಚು ಕೊರೊನಾದಂತೆ ವೇಗವಾಗಿ ಹರಡಲಿ: ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಿಚ್ಚ ಸುದೀಪ್ ಆಶಯ