ದರ್ಶನ್ ಪ್ರಕರಣ: ವಿಚಾರಣೆಗೆ ಹಾಜರಾದ ನಿರ್ದೇಶಕ ಮಿಲನಾ ಪ್ರಕಾಶ್
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದು, ದರ್ಶನ್ ಬಂಧನವಾದಾಗ ನಟಿಸುತ್ತಿದ್ದ ‘ಡೆವಿಲ್’ ಸಿನಿಮಾದ ನಿರ್ದೇಶಕ ಮಿಲನಾ ಪ್ರಕಾಶ್ ಅವರಿಗೆ ನೊಟೀಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನವಾಗಿದ್ದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಮಿಲನಾ ಪ್ರಕಾಶ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜೂನ್ 11 ರಂದು ದರ್ಶನ್ರ ಬಂಧನವಾದಾಗ ದರ್ಶನ್ ‘ಡೆವಿಲ್’ ಸಿನಿಮಾದಲ್ಲಿ ನಟಿಸಲೆಂದು ಮೈಸೂರಿಗೆ ತೆರಳಿದ್ದರು. ‘ಡೆವಿಲ್’ ಸಿನಿಮಾವನ್ನು ಪ್ರಕಾಶ್ ನಿರ್ದೇಶನ ಮಾಡುತ್ತಿದ್ದರು. ಮೈಸೂರಿನಲ್ಲಿ ದರ್ಶನ್ಗೆ ರೂಂ ಬುಕ್ ಮಾಡಿದ್ದಿದ್ದು ಪ್ರಕಾಶ್ ಅವರೇ, ಹಾಗಾಗಿ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ.
ದರ್ಶನ್ ನಟಿಸುತ್ತಿರುವ ‘ಡೆವಿಲ್’ ಸಿನಿಮಾವನ್ನು ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. 2017 ರಲ್ಲಿ ದರ್ಶನ್ ನಟನೆಯ ‘ತಾರಕ್’ ಸಿನಿಮಾವನ್ನು ಪ್ರಕಾಶ್ ನಿರ್ದೇಶನ ಮಾಡಿದ್ದರು. ಅದಾದ ಬಳಿಕ ಈಗ ‘ಡೆವಿಲ್’ ಸಿನಿಮಾ ಮೂಲಕವೇ ಪ್ರಕಾಶ್ ಮತ್ತೆ ನಿರ್ದೇಶಕನಾಗಿ ಚಿತ್ರರಂಗಕ್ಕೆ ರೀ ಎಂಟ್ರಿ ನೀಡಲು ಸಜ್ಜಾಗಿದ್ದರು. ಆದರೆ ಚಿತ್ರೀಕರಣ ನಡೆಯುತ್ತಿರುವಾಗಲೇ ದರ್ಶನ್ ಬಂಧನವಾಗಿದೆ.
ಜೂನ್ 8ರಂದು ರೇಣುಕಾ ಸ್ವಾಮಿ ಕೊಲೆ ಆದ ಬಳಿಕ ದರ್ಶನ್ ಮೈಸೂರಿಗೆ ತೆರಳಿದ್ದರು. ಅಲ್ಲಿ ನಿರ್ದೇಶಕ ಪ್ರಕಾಶ್ ಅವರನ್ನು ಭೇಟಿ ಆಗಿದ್ದರು. ಪ್ರಕಾಶ್ ಅವರೇ ದರ್ಶನ್ಗೆ ರ್ಯಾಡಿಸನ್ ಬ್ಲೂ ಹೋಟೆಲ್ನಲ್ಲಿ ರೂಂ ಮಾಡಿ ಕೊಟ್ಟಿದ್ದರು ಎನ್ನಲಾಗಿದೆ. ಕೊಲೆ ಆದ ಬಳಿಕ ದರ್ಶನ್ ಸೆಟ್ನಲ್ಲಿ ಚಿತ್ರೀಕರಣದಲ್ಲಿಯೂ ಪಾಲ್ಗೊಂಡಿದ್ದರು ಎನ್ನಲಾಗಿದ್ದು, ಪ್ರಕಾಶ್ ಅವರೊಟ್ಟಿಗೆ ಹೆಚ್ಚು ಸಮಯ ಕಳೆದಿದ್ದಾರೆ. ಈ ಸಮಯದಲ್ಲಿ ಪ್ರಕರಣದ ಬಗ್ಗೆ ದರ್ಶನ್, ಪ್ರಕಾಶ್ ಜೊತೆಗೆ ಏನಾದರೂ ಮಾತನಾಡಿದರಾ ಎಂಬಿತ್ಯಾದಿ ವಿಚಾರ ತಿಳಿಯಲೆಂದು ಅವರನ್ನು ವಿಚಾರಣೆಗೆ ಕರೆಸಲಾಗಿದೆ.
ಇದನ್ನೂ ಓದಿ: ದರ್ಶನ್ ಆರೋಪಿ ಮಾತ್ರ, ಕಣ್ಣಾರೆ ನೋಡದ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದ ನಟಿ
ದರ್ಶನ್ ಬಂಧನ ಆದಾಗಿನಿಂದಲೂ ಪ್ರಕಾಶ್ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಎದುರು ಹಾಜರಾಗಿದ್ದಾರೆ. ದರ್ಶನ್ ಬಂಧನದ ಬಳಿಕ ‘ಡೆವಿಲ್’ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಲಾಗಿದೆ. ಸಿನಿಮಾಕ್ಕೆ ಪ್ರಕಾಶ್ ಹಾಗೂ ಜಯಮ್ಮ ಎಂಬುವರು ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ದರ್ಶನ್ ಎದುರು ಬಿಗ್ಬಾಸ್ ವಿನಯ್ ವಿಲನ್ ಆಗಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಅವರೇ ಮುಖ್ಯ ವಿಲನ್ ಆಗಿದ್ದಾರಾ ಎಂಬ ಬಗ್ಗೆ ಪೂರ್ಣ ಮಾಹಿತಿ ಇಲ್ಲ.
‘ಡೆವಿಲ್’ ಸಿನಿಮಾದಲ್ಲಿ ನಾಯಕಿಯಾಗಿ ರಚನಾ ರೈ ನಟಿಸುತ್ತಿದ್ದಾರೆ. ಮರಾಠಿ ನಟ ಮಹೇಶ್ ಮಂಜ್ರೇಕರ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ಬಾಸ್ ವಿನಯ್ ಗೌಡ ಸಹ ಇದ್ದಾರೆ. ಸಿನಿಮಾಕ್ಕೆ ಅಜನೀಶ್ ಲೋಕನಾಥ್ ನೀಡಿದ್ದಾರೆ. ದರ್ಶನ್ ಹೊರಗೆ ಬರುವವರೆಗೆ ಸಿನಿಮಾದ ಚಿತ್ರೀಕರಣ ನಡೆಯುವುದಿಲ್ಲ. ದರ್ಶನ್ ಯಾವಾಗ ಹೊರಗೆ ಬರುತ್ತಾರೆಯೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ