‘ಬಡವ ರಾಸ್ಕಲ್​’ ಕಲೆಕ್ಷನ್​ 15 ಕೋಟಿ ರೂಪಾಯಿ? ಧನಂಜಯ ಹೇಳಿದ್ದು ಇಷ್ಟು

‘ಬಡವ ರಾಸ್ಕಲ್​’ ಗೆದ್ದ ಸಂಭ್ರಮದಲ್ಲಿ ರಾಜ್ಯದ ಕೆಲ ಜಿಲ್ಲೆಗಳಿಗೆ ಧನಂಜಯ ಅವರು ಭೇಟಿ ನೀಡಿದ್ದಾರೆ. ಹಾಸನ, ಬಳ್ಳಾರಿ ಮೊದಲಾದ ಜಿಲ್ಲೆಗಳಿಗೆ ತೆರಳಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ರಾಯಚೂರು, ಬೆಳಗಾವಿ ಮೊದಲಾದ ಕಡೆಗೆ ತೆರಳೋಕೆ ಸಾಧ್ಯವಾಗಿಲ್ಲ.

‘ಬಡವ ರಾಸ್ಕಲ್​’ ಕಲೆಕ್ಷನ್​ 15 ಕೋಟಿ ರೂಪಾಯಿ? ಧನಂಜಯ ಹೇಳಿದ್ದು ಇಷ್ಟು
ಧನಂಜಯ-ಅಮೃತಾ ಅಯ್ಯಂಗಾರ್
Edited By:

Updated on: Jan 06, 2022 | 3:57 PM

‘ಬಡವ ರಾಸ್ಕಲ್​’  (Badava Rascal) ಸಿನಿಮಾ ಗೆಲುವು ಕಂಡಿದೆ. ಡಾಲಿ ಧನಂಜಯ​ ಅವರು ಮೊದಲ ನಿರ್ಮಾಣದಲ್ಲೇ ಯಶಸ್ಸು ಪಡೆದಿದ್ದಾರೆ. ಅವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಧನಂಜಯಗೆ ಸಿಕ್ಕ ಈ ಗೆಲುವು ಅವರ ವೃತ್ತಿ ಜೀವನದ ದೃಷ್ಟಿಯಿಂದ ಬಹಳ ಮಹತ್ವ ಪಡೆದುಕೊಂಡಿದೆ. ಈ ಚಿತ್ರ ಒಟ್ಟೂ ಮಾಡಿದ ಗಳಿಕೆ ಎಷ್ಟು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ‘ಬಡವ ರಾಸ್ಕಲ್​’ 15 ಕೋಟಿ ಕಲೆಕ್ಷನ್​ ಮಾಡಿದೆ ಎನ್ನುವ ಸುದ್ದಿ ಗಾಂಧಿ ನಗರದ ಅಂಗಳದಲ್ಲಿ ಹರಿದಾಡಿತ್ತು. ಇದಕ್ಕೆ ಧನಂಜಯ ಅವರು ಉತ್ತರ ನೀಡಿದ್ದಾರೆ. ಅವರ ಲೆಕ್ಕಾಚಾರದ ಪ್ರಕಾರ ಸಿನಿಮಾ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿಲ್ಲ.

‘ಬಡವ ರಾಸ್ಕಲ್​’ ಗೆದ್ದ ಸಂಭ್ರಮದಲ್ಲಿ ರಾಜ್ಯದ ಕೆಲ ಜಿಲ್ಲೆಗಳಿಗೆ ಧನಂಜಯ ಅವರು ಭೇಟಿ ನೀಡಿದ್ದಾರೆ. ಹಾಸನ, ಬಳ್ಳಾರಿ ಮೊದಲಾದ ಜಿಲ್ಲೆಗಳಿಗೆ ತೆರಳಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ರಾಯಚೂರು, ಬೆಳಗಾವಿ ಮೊದಲಾದ ಕಡೆಗೆ ತೆರಳೋಕೆ ಸಾಧ್ಯವಾಗಿಲ್ಲ. ಬೆಳಗಾವಿಯಲ್ಲಿ ಒಂದು ವಿಜಯೋತ್ಸವ ಆಚರಿಸಬೇಕು ಎನ್ನುವ ಉದ್ದೇಶ ತಂಡದ್ದಾಗಿತ್ತು. ಅದಕ್ಕೆ ಕೊರೊನಾ ಮೂರನೇ ಅಲೆ ಅಡ್ಡಗಾಲು ಹಾಕಿದೆ. ಈ ಮಧ್ಯೆ ಕಲೆಕ್ಷನ್​ ಬಗ್ಗೆ ಧನಂಜಯ ಅವರು ಮಾತನಾಡಿದ್ದಾರೆ.

‘ಬಡವ ರಾಸ್ಕಲ್​’ ಶ್ರೀಮಂತನಾಗಿದ್ದಾನಾ ಎನ್ನುವ ಪ್ರಶ್ನೆ ಧನಂಜಯ ಅವರಿಗೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅವರು, ‘ನಮ್ಮ ‘ಬಡವ ರಾಸ್ಕಲ್​’ ಶ್ರೀಮಂತನಾಗಿಲ್ಲ. ಆದರೆ ಸೇಫ್​ ಅಂತೂ ಆಗಿದ್ದಾನೆ’ ಎಂದಿದ್ದಾರೆ. ಹಾಗಾದರೆ ಸಿನಿಮಾದ ಗಳಿಕೆ 15 ಕೋಟಿ ರೂಪಾಯಿ ದಾಟಿದೆಯಾ? ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ‘ಎಷ್ಟು ಕಲೆಕ್ಷನ್​ ಆಗಿದೆ ಎಂಬುದರ ಪಕ್ಕಾ ಲೆಕ್ಕ ನನಗೆ ಇಲ್ಲ. ಈ ಬಗ್ಗೆ ಡಿಸ್ಟ್ರಿಬ್ಯೂಟರ್​ಗಳನ್ನು ಕೇಳಬೇಕು. ನನಗೆ ಅನ್ನಿಸಿದ ಹಾಗೆ ಸಿನಿಮಾ ಅಷ್ಟೊಂದು ಗಳಿಕೆ ಮಾಡಿಲ್ಲ. ಸಿನಿಮಾ ಆ ಮಟ್ಟಿಗೆ ಗಳಿಕೆ ಮಾಡಿದ್ದರೆ ಹೆಲಿಕಾಪ್ಟರ್​ನಲ್ಲಿ ಬಂದು ಎಲ್ಲರಿಗೂ ಥ್ಯಾಂಕ್ಸ್​ ಹೇಳುತ್ತಿದ್ದೆ’ ಎಂದಿದ್ದಾರೆ ಧನಂಜಯ. ಇಷ್ಟೆಲ್ಲ ಮಾತನಾಡಿದ ಹೊರತಾಗಿಯೂ ಅವರು ಅಸಲಿ ಕಲೆಕ್ಷನ್​ ಎಷ್ಟು ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.

ಮುಖ್ಯ ಪಾತ್ರವನ್ನೂ ನಿಭಾಯಿಸಿರುವ ಧನಂಜಯ​ಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್​  ನಟಿಸಿದ್ದಾರೆ. ವಾಸುಕಿ ವೈಭವ್​ ಸಂಗೀತ ನಿರ್ದೇಶನ, ಪ್ರೀತಾ ಜಯರಾಮನ್​ ಛಾಯಾಗ್ರಹಣ ಮಾಡಿದ್ದಾರೆ. ಪೋಷಕ ಪಾತ್ರಗಳಲ್ಲಿ ನಾಗ ಭೂಷಣ್​, ರಂಗಾಯಣ ರಘು, ತಾರಾ ಅನುರಾಧ ಹೈಲೈಟ್​ ಆಗಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ಧನಂಜಯ ಅವರನ್ನು ನೋಡೋಕೆ ಮುಗಿಬಿದ್ದ ಫ್ಯಾನ್ಸ್​

Badava Rascal: ಬಡವ ರಾಸ್ಕಲ್ ಬೆನ್ನುತಟ್ಟಿದ ಪ್ರಶಾಂತ್ ನೀಲ್; ಚಿತ್ರತಂಡಕ್ಕೆ ಹೇಳಿದ್ದೇನು?

Published On - 3:56 pm, Thu, 6 January 22