
ನಟ ಧರ್ಮ ಕೀರ್ತಿರಾಜ್ (Dharma Keerthiraj) ಅವರು ಬಿಗ್ ಬಾಸ್ ಶೋ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಹಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ಅವರು 25ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ‘ನಯನ ಮನೋಹರ’ (Nayana Manohara) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಅನಾವರಣ ಆಯಿತು. ಜೊತೆಗೆ ಟೀಸರ್ ಕೂಡ ಬಿಡುಗಡೆ ಮಾಡಲಾಗಿದೆ. ಯುಬಿ ಸಿಟಿಯ ಮ್ಯಾರಿಯಟ್ ಅಪಾರ್ಟ್‌ಮೆಂಟ್ಸ್‌ನಲ್ಲಿ ಈ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಅನುಷ್ ಸಿದ್ದಪ್ಪ ಅವರು ‘ಎಕ್ಸ್ಕ್ವಿಸಿಟ್ ಎಂಟರ್‌ಟೈನ್‌ಮೆಂಟ್ಸ್’ ಮೂಲಕ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.
ಪುನೀತ್ ಕೆಜಿಆರ್ ಅವರು ‘ನಯನ ಮನೋಹರ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ತಮ್ಮದೇ ‘ಲಾಸ್ಟ್ ಬೆಂಚ್ ವಂಡರ್ಸ್ ಸಿನ್ಸ್ 1990’ ಎಂಬ ತಂಡದೊಂದಿಗೆ ಅವರು ಈ ಸಿನಿಮಾ ಮಾತ್ತಿದ್ದಾರೆ. ‘ಇದು ನಿಮ್ಮನ್ನು ನಿಮಗೆ ಪರಿಚಯಿಸುವ ಸುಂದರ ಕಾವ್ಯ’ ಎಂಬ ಟ್ಯಾಗ್ಲೈನ್ ಈ ಸಿನಿಮಾಗೆ ಇದೆ. ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಉಪೇಂದ್ರ ಹಾಗೂ ವಿನೋದ್ ಪ್ರಭಾಕರ್ ಅವರು ಅತಿಥಿಗಳಾಗಿ ಆಗಮಿಸಿದ್ದರು.
ವೇದಿಕೆಯಲ್ಲಿ ಧರ್ಮ ಕೀರ್ತಿರಾಜ್ ಅವರು ಮಾತನಾಡಿದರು. ‘ಅಪ್ಪ, ಅಮ್ಮ, ಅಕ್ಕ ಬಂದಿರುವುದು ನನಗೆ ಶಕ್ತಿ ತಂದಿದೆ. 25ನೇ ಸಿನಿಮಾ ಒಂದು ಮೈಲಿಗಲ್ಲು. ಮುಖ್ಯವಾದ ಹೀರೋ ಅಂದರೆ ನಿರ್ಮಾಪಕರು. ನನ್ನ ಅದೃಷ್ಟಕ್ಕೆ ಅವರೇ ಕಾರಣ. ನಿರ್ದೇಶಕರು ಕಥೆ ಹೇಳಿದಾಗ ಬಹಳ ಸಂತೋಷ ಆಯಿತು. 3 ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ’ ಎಂದು ಧರ್ಮ ಕೀರ್ತಿರಾಜ್ ಮಾಹಿತಿ ನೀಡಿದರು.
ವಾಸುಕಿ ವೈಭವ್ ಅವರು ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ನಿರ್ದೇಶಕ ಪುನೀತ್ ಕೆಜಿಆರ್ ಮಾತನಾಡಿ, ‘ಈ ಸಿನಿಮಾ ಧರ್ಮ ಕೀರ್ತಿರಾಜ್ ಅವರಿಗೆ ಗೆಲುವು ಕೊಡುತ್ತದೆ’ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ನಾಯಕಿ ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ನಿರ್ದೇಶಕರು ಹೇಳಿದ್ದಾರೆ. ಈ ಚಿತ್ರತಂಡಕ್ಕೆ ಪ್ರಿಯಾಂಕಾ ಉಪೇಂದ್ರ, ವಿನೋದ್ ಪ್ರಭಾಕರ್ ಶುಭ ಹಾರೈಸಿದರು.
ಇದನ್ನೂ ಓದಿ: ಟಾಲಿವುಡ್ಗೆ ಧರ್ಮ ಕೀರ್ತಿರಾಜ್; ಅಪ್ಸರೆಯ ಜೊತೆ ಸಿನಿಮಾ
ಪ್ರಿಯಾಂಕಾ ಉಪೇಂದ್ರ ಮಾತನಾಡಿ, ‘ಸಿನಿಮಾ 100ನೇ ದಿನ ಪ್ರದರ್ಶನ ಕಂಡು ಇದೇ ಜಾಗದಲ್ಲಿ ಸಂಭ್ರಮಿಸೋಣ. ನಿರ್ಮಾಪಕರ ಅಭಿರುಚಿ ಏನು ಎಂಬುದು ತುಣುಕುಗಳಲ್ಲಿ ಕಂಡುಬಂದಿದೆ. ಟೀಸರ್‌ನಲ್ಲಿ ಇರುವಂತೆಯೇ ಸಿನಿಮಾ ಮಾಡಿ’ ಎಂದು ಸಲಹೆ ನೀಡಿದರು. ‘ಟೀಸರ್ ಚೆನ್ನಾಗಿ ಬಂದಿದೆ. ಉತ್ತಮ ಸಿನಿಮಾ ಇದಾಗಲಿದೆ ಅಂತ ಅನಿಸಿದೆ. ಪಾತ್ರದ ಪರಿಚಯ ಚೆನ್ನಾಗಿ ಮಾಡಿದ್ದೀರಿ’ ಎಂದು ವಿನೋದ್ ಪ್ರಭಾಕರ್ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.