‘ನಾನು ಮಾರ್ಟಿನ್​ ಅಲ್ಲ’; ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಧ್ರುವ ಸರ್ಜಾ: ಯಾರು ನಿಜವಾದ ಮಾರ್ಟಿನ್​?

| Updated By: ಮದನ್​ ಕುಮಾರ್​

Updated on: Aug 16, 2021 | 12:09 PM

ಹೀರೋ ಪಾತ್ರದ ಹೆಸರನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಇಡುವ ಒಂದು ಟ್ರೆಂಡ್​ ಮೊದಲಿನಿಂದಲೂ ಇದೆ. ಹಾಗಾಗಿ, ‘ಮಾರ್ಟಿನ್​’ ಚಿತ್ರದಲ್ಲಿ ಧ್ರುವ ಸರ್ಜಾ ಅವರ ಪಾತ್ರದ ಹೆಸರು ಮಾರ್ಟಿನ್​ ಆಗಿರುತ್ತದೆ ಎಂಬುದು ಬಹುತೇಕರ ಊಹೆ. ಆದರೆ ಅದು ನಿಜವಲ್ಲ ಎನ್ನುತ್ತಿದೆ ಚಿತ್ರತಂಡ.

‘ನಾನು ಮಾರ್ಟಿನ್​ ಅಲ್ಲ’; ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಧ್ರುವ ಸರ್ಜಾ: ಯಾರು ನಿಜವಾದ ಮಾರ್ಟಿನ್​?
ಉದಯ್​ ಕೆ. ಮೆಹ್ತಾ, ಧ್ರುವ ಸರ್ಜಾ, ಎ.ಪಿ. ಅರ್ಜುನ್​
Follow us on

‘ಆ್ಯಕ್ಷನ್​ ಪ್ರಿನ್ಸ್​’ ಧ್ರುವ ಸರ್ಜಾ (Dhruva Sarja) ಅವರ ಹೊಸ ಸಿನಿಮಾ ‘ಮಾರ್ಟಿನ್​’ (Martin) ಸೆಟ್ಟೇರಿದೆ. 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಈ ಚಿತ್ರದ ಮುಹೂರ್ತ ನೆರವೇರಿಸಲಾಗಿರುವುದು ವಿಶೇಷ. ಧ್ರುವ ಸರ್ಜಾ ಅವರ ಮೊದಲ ಚಿತ್ರ ‘ಅದ್ದೂರಿ’ಗೆ ನಿರ್ದೇಶನ ಮಾಡಿದ್ದ ಎ.ಪಿ. ಅರ್ಜುನ್ (AP Arjun)​ ಅವರೇ ಈಗ ಮಾರ್ಟಿನ್​’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಖ್ಯಾತ ನಿರ್ಮಾಪಕ ಉದಯ್​ ಮೆಹ್ತಾ ಅವರು ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಪಾತ್ರವರ್ಗದ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಸಿನಿಮಾ ಸೆಟ್ಟೇರಿದ ದಿನವೇ ‘ನಾನು ಮಾರ್ಟಿನ್​ ಅಲ್ಲ’ ಎಂದಿದ್ದಾರೆ ಧ್ರುವ ಸರ್ಜಾ!

ಸಾಮಾನ್ಯವಾಗಿ ಹೀರೋ ಪಾತ್ರದ ಹೆಸರನ್ನೇ ಚಿತ್ರದ ಶೀರ್ಷಿಕೆಯನ್ನಾಗಿ ಇಡಲಾಗುತ್ತದೆ. ಅದೇ ರೀತಿ ‘ಮಾರ್ಟಿನ್​’ ಚಿತ್ರದಲ್ಲಿ ಧ್ರುವ ಸರ್ಜಾ ಅವರ ಪಾತ್ರದ ಹೆಸರು ಮಾರ್ಟಿನ್​ ಆಗಿರುತ್ತದೆ ಎಂಬುದು ಬಹುತೇಕರ ಊಹೆ. ಆದರೆ ಅದು ನಿಜವಲ್ಲ ಎಂದು ಧ್ರುವ ಸರ್ಜಾ ಆರಂಭದಲ್ಲಿಯೇ ಸ್ಪಷ್ಟಪಡಿಸುತ್ತಿದ್ದಾರೆ. ‘ಮಾರ್ಟಿನ್​ ಎಂಬುದು ಒಂದು ಹೆಸರು. ಆದರೆ ಈ ಚಿತ್ರದಲ್ಲಿ ನಾನು ಮಾರ್ಟಿನ್​ ಅಲ್ಲ. ಅದು ಯಾರು ಎಂಬುದು ಸಿನಿಮಾ ನೋಡಿದ ಮೇಲೆ ತಿಳಿಯಲಿದೆ. ಅದಕ್ಕಾಗಿಯೇ ಈ ಟೀಸರ್​ನಲ್ಲಿ Who is Martin ಎಂಬ ಡೈಲಾಗ್​ ಇದೆ’ ಎಂದಿದ್ದಾರೆ ಧ್ರುವ ಸರ್ಜಾ.

ಇಷ್ಟು ದಿನ ಧ್ರುವ ಸರ್ಜಾ ಅವರ ಎಲ್ಲ ಸಿನಿಮಾಗಳಲ್ಲಿ ಉದ್ದುದ್ದ ಡೈಲಾಗ್​ಗಳು ಫೇಮಸ್​ ಆಗುತ್ತಿದ್ದವು. ಆದರೆ ಮಾರ್ಟಿನ್​ ವಿಚಾರದಲ್ಲಿ ಒಂದು ಬದಲಾವಣೆ ಇರಲಿದೆ. ‘ಈ ಸಿನಿಮಾದಲ್ಲಿ ನಾನು ಉದ್ದುದ್ದ ಡೈಲಾಗ್​ ಹೊಡೆಯಲ್ಲ. ಎಲ್ಲವೂ ಚಿಕ್ಕದಾಗಿ, ಸ್ಟ್ರಾಂಗ್​ ಆಗಿರಲಿವೆ. ಪ್ರಶಾಂತ್​ ರಾಜಪ್ಪ ಡೈಲಾಗ್​ ಬರೆಯುತ್ತಿದ್ದಾರೆ’ ಎಂದು ಧ್ರುವ ಹೇಳಿದ್ದಾರೆ.

ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ತಯಾರಾಗಲಿದೆ. ಅಂದಾಜು ಮೂರು ಕೋಟಿ ರೂ. ಖರ್ಚು ಮಾಡಿ ಒಂದು ದೃಶ್ಯದ ಚಿತ್ರೀಕರಣ ಮಾಡಲಾಗುವುದು. ಮೂರು ಎಕರೆ ಜಾಗದಲ್ಲಿ ಜೈಲಿನ ಸೆಟ್​ ಹಾಕಲಾಗಿದೆ. ಅದು ಚಿತ್ರದಲ್ಲಿ ಹೈಲೈಟ್​ ಆಗಲಿದೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ ನಿರ್ಮಾಪಕ ಉದಯ್ ಕೆ.​ ಮೆಹ್ತಾ.

(ಮಾರ್ಟಿನ್​ ಚಿತ್ರದ ಟೀಸರ್​)

‘ಇದೊಂದು ಗ್ಯಾಂಗ್​ಸ್ಟರ್​ ಕಥೆ. ಆತನ ಲವ್​ಸ್ಟೋರಿ ಇದೆ. ತಾಯಿ-ಮಗನ ಸೆಂಟಿಮೆಂಟ್​ ಇದೆ. ಎಲ್ಲ ಭಾಷೆಗೂ ಈ ಟೈಟಲ್​ ಸೂಕ್ತ ಆಗಲಿದೆ. ಎಲ್ಲ ಭಾಷೆಗೂ ಹೊಂದಿಕೆ ಆಗುವಂತಹ ಶೈಲಿಯಲ್ಲಿ ಡೈಲಾಗ್​ ಇರಲಿದೆ. ಇನ್ನು ಕೆಲವೇ ದಿನಗಳಲ್ಲಿ ಹೀರೋಯಿನ್​ ಯಾರು ಎಂಬುದು ಗೊತ್ತಾಗುತ್ತದೆ’ ಎಂದಿದ್ದಾರೆ ನಿರ್ದೇಶಕ ಎ.ಪಿ. ಅರ್ಜುನ್​. ಈ ಚಿತ್ರಕ್ಕೆ ಸತ್ಯ ಹೆಗಡೆ ಛಾಯಾಗ್ರಹಣ, ಮಣಿ ಶರ್ಮಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಸೆಟ್ಟೇರಿದ ಧ್ರುವ ಸರ್ಜಾ ಹೊಸ ಚಿತ್ರ ‘ಮಾರ್ಟಿನ್’; ಶುಭ ಹಾರೈಸಿದ ರವಿಚಂದ್ರನ್​

‘ದುಬಾರಿ ಸಿನಿಮಾ ಖಂಡಿತಾ ಮಾಡ್ತೀವಿ’; ಜೊತೆಯಾಗಿ ನಿಂತು ಸ್ಪಷ್ಟನೆ ನೀಡಿದ ಧ್ರುವ ಸರ್ಜಾ-ನಂದಕಿಶೋರ್​