ಆನ್‌ಲೈನ್ ಕ್ಲಾಸ್ ಕಿರಿಕಿರಿ ತಪ್ಪಿಸಲು ಇಲ್ಲಿದೆ ಉಪಾಯ; ಕಿಚ್ಚ ಸುದೀಪ್ ಟ್ರಸ್ಟ್ ಕಡೆಯಿಂದ ಮಕ್ಕಳಿಗಾಗಿ ಹೊಸ ಆ್ಯಪ್
Online Class App: ಡಾರ್ಕ್ ಬೋರ್ಡ್ ಆ್ಯನಿಮೇಷನ್ ಎಜುಕೇಷನ್ ಎಂಬ ಆ್ಯಪ್ ಬಳಸಿ ಆನ್‌ಲೈನ್ ಕ್ಲಾಸ್ ಮಾಡಬಹುದು. ಈ ಹೊಸ ಆ್ಯಪ್ನಿಂದ ವಿದ್ಯಾರ್ಥಿಗಳಿಗೆ ದೊಡ್ಡ ಲಾಭ ಇದೆ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಹೇಳಿದೆ.
ನಟನೆ ಜೊತೆಗೆ ಹಲವು ಜನಪರ ಕಾರ್ಯಗಳನ್ನು ಕಿಚ್ಚ ಸುದೀಪ್ (Kichcha Sudeep) ಅವರು ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ (Kichcha Sudeep Charitable Society) ಮೂಲಕ ಅನೇಕ ಶಾಲೆಗಳನ್ನು ದತ್ತು ಪಡೆದುಕೊಳ್ಳುವ ಕೆಲಸ ಈಗಾಗಲೇ ಯಶಸ್ವಿ ಆಗಿದೆ. ಈಗ ಅಂತಹ ಶಾಲೆಗಳಲ್ಲಿ ಹೊಸ ಆ್ಯಪ್ ಪರಿಚಯಿಸಲಾಗುತ್ತಿದೆ. ಆನ್‌ಲೈನ್ ಕ್ಲಾಸ್ನಲ್ಲಿ (Online Class) ಸದ್ಯ ಉಂಟಾಗುತ್ತಿರುವ ತೊಡಕುಗಳನ್ನು ನಿವಾರಿಸಲು ಈ ಹೊಸ ಆ್ಯಪ್ ಸಹಕಾರಿ ಆಗಲಿದೆ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿಯ ಅಧ್ಯಕ್ಷ ರಮೇಶ್ ಕಿಟ್ಟಿ ಹೇಳಿದ್ದಾರೆ. ಹಾಗಾದರೆ ಏನು ಈ ಆ್ಯಪ್ನ ವಿಶೇಷ? ಇಲ್ಲಿದೆ ಸಂಪೂರ್ಣ ಮಾಹಿತಿ.
ಈ ಆ್ಯಪ್ ಮೂಲಕ ಅಕ್ಷರ ಕ್ರಾಂತಿಯಲ್ಲಿ ಮತ್ತೊಂದು ಹೆಜ್ಜೆ ಇಡಲು ಸುದೀಪ್ ಮುಂದಾಗಿದ್ದಾರೆ. ಅವರ ತಂಡದವರು ಮಾಡಿರುವ ಹೊಸ ಆ್ಯಪ್ನಿಂದಾಗಿ ಮಕ್ಕಳ ಆನ್‌ಲೈನ್ ಕ್ಲಾಸ್ ಇನ್ನಷ್ಟು ಸುಲಭ ಆಗಲಿದೆ. ಈಗ ಆನ್‌ಲೈನ್ ಕ್ಲಾಸ್ನಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಬೆನ್ನು ನೋಡಿಕೊಂಡು ಪಾಠ ಕೇಳುತ್ತಿದ್ದಾರೆ. ಅದರಿಂದ ಪಾಠ ಅರ್ಥ ಆಗದೇ ವಿದ್ಯಾರ್ಥಿಗಳು ಕಷ್ಟಪಡುತ್ತಿದ್ದಾರೆ. ಆದರೆ ಈ ಆ್ಯಪ್ ಬಳಸಿದರೆ ಅಂಥ ಪ್ರಮೇಯ ಎದುರಾಗುವುದಿಲ್ಲ ಎಂಬ ಭರವಸೆಯನ್ನು ಕಿಚ್ಚ ಸದೀಪ್ ಚಾರಿಟೇಬಲ್ ಸೊಸೈಟಿ ನೀಡುತ್ತಿದೆ.
ಡಾರ್ಕ್ ಬೋರ್ಡ್ ಆ್ಯನಿಮೇಷನ್ ಎಜುಕೇಷನ್ ಎಂಬ ಆ್ಯಪ್ ಬಳಸಿ ಆನ್‌ಲೈನ್ ಕ್ಲಾಸ್ ಮಾಡಬಹುದು. ಇದರಿಂದ ವಿದ್ಯಾರ್ಥಿಗಳಿಗೆ ದೊಡ್ಡ ಲಾಭ ಇದೆ. ಈ ಆ್ಯಪ್ ಬಳಸಿ ಪಾಠ ಮಾಡಿದ್ರೆ ಮಕ್ಕಳಿಗೆ ಶಿಕ್ಷಕರ ಪಾಠ ಚನ್ನಾಗಿ ಅರ್ಥ ಆಗುತ್ತದೆ. ಶಾಲೆಯಲ್ಲಿ ಡಾರ್ಕ್ ಬೋರ್ಡ್ ರೂಂ ಮಾಡಿ ಪಾಠ ಮಾಡಬಹುದು. ಯಾವುದೇ ವಿಷಯದ ಪಾಠವನ್ನು ರೆಕಾರ್ಡ್ ಮಾಡಿ ಕೂಡ ವಿದ್ಯಾರ್ಥಿಗಳಿಗೆ ಕಳಿಸಬಹುದು ಎಂದು ರಮೇಶ್ ಕಿಟ್ಟಿ ಹೇಳಿದ್ದಾರೆ.
ಈ ಡಾರ್ಕ್ ಬೋರ್ಡ್ ಪಾಠ ಕೇಳಿದ್ರೆ ಮಕ್ಕಳು ಶಿಕ್ಷಕರ ಮುಂದೆ ಕೂತು ಪಾಠ ಕೇಳಿದ ಹಾಗಿರುತ್ತದೆ. ಶಿಕ್ಷಕರ ಹಾವ ಭಾವವನ್ನ ನೋಡಿ ಮಕ್ಕಳ ಪಾಠ ಅರ್ಥ ಮಾಡಿಕೊಳ್ಳಬಹುದು. ಡ್ರಾಯಿಂಗ್ ಬರೆದೂ ಕೂಡ ಪಾಠ ಮಾಡೋದಕ್ಕೆ ಸಹಾಯ ಆಗುತ್ತೆ. ಈ ಆ್ಯಪ್ ಅನ್ನು ಎಲ್ಲಾ ಸರ್ಕಾರಿ ಶಾಲೆ, ಖಾಸಗಿ ಶಾಲೆಯವರು ಬಳಸಿಕೊಳ್ಳಬಹುದು. ರಾಜ್ಯ ಸರ್ಕಾರಕ್ಕೂ ಈ ಆ್ಯಪ್ ಬಗ್ಗೆ ಮನವರಿಕೆ ಮಾಡಿಕೊಡಲು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಮುಂದಾಗುತ್ತಿದೆ.
ಶಿಕ್ಷಣ ಸಚಿವರನ್ನ ಭೇಟಿ ಮಾಡಿ ಈ ಆ್ಯಪ್ ಬಗ್ಗೆ ತಿಳಿಸಿ, ಆನ್‌ಲೈನ್ ಕ್ಲಾಸ್ಗಳಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಲಿದೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ. ದತ್ತು ಪಡೆದ ಶಾಲೆಗಳನ್ನು ಈ ಆ್ಯಪ್ ಮೂಲಕ ಸಂಪೂರ್ಣ ಡಿಜಿಟಲ್ ಆಗಿಸುವ ಕೆಲಸ ಮಾಡುತ್ತಿದ್ದಾರೆ ಕಿಚ್ಚ ಸುದೀಪ್. ಮೊದಲು ಸುದೀಪ್ ದತ್ತು ಪಡೆದ ಶಾಲೆಗಳಲ್ಲಿ ಈ ಆ್ಯಪ್ ಬಳಕೆ ಮಾಡಲಾಗುತ್ತೆ. ಆ ನಂತರ ಎಲ್ಲಾ ಶಾಲಾ ಶಿಕ್ಷಕರಿಗೂ ಇದನ್ನು ಬಳಸಿಕೊಳ್ಳಲು ಉತ್ತೇಜಿಸುವ ಕೆಲಸ ಮಾಡುತ್ತೇವೆ ಎಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ರಮೇಶ್ ಕಿಟ್ಟಿ ಹೇಳಿದ್ದಾರೆ.
ಇದನ್ನೂ ಓದಿ:
ಗಡಂಗ್ ರಕ್ಕಮನ ಮೇಲೆ ಕೊಲೆ ಆರೋಪ ಇದೆ ಎಂಬುದನ್ನು ತಿಳಿಸಿಯೇ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸುದೀಪ್
‘ಸುದೀಪ್ ಅನುಮತಿ ಕೊಟ್ಟರೆ ಪ್ರಶಾಂತ್ ಸಂಬರಗಿ ವಿರುದ್ಧ ನಾನು ನ್ಯಾಯಾಲಯಕ್ಕೆ ಹೋಗ್ತೀನಿ’: ಚಕ್ರವರ್ತಿ ಚಂದ್ರಚೂಡ್