ಮತ್ತೆ ಐಪಿಎಲ್ ಹಬ್ಬ ಶುರುವಾಗಿದೆ. ಕರುನಾಡಿನ ಮಂದಿ ಆರ್ಸಿಬಿ (RCB) ಗೆಲುವನ್ನು ನಿರೀಕ್ಷಿಸಿದ್ದಾರೆ. ಈ ಬಾರಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡ ಕಪ್ ಎತ್ತಬೇಕು ಎಂಬ ಆಸೆ ಬಲವಾಗಿದೆ. ಇತ್ತೀಚೆಗೆ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಟೀಮ್ ಚಾಂಪಿಯನ್ ಆಗಿದೆ. ಈಗ ವಿರಾಟ್ ಕೊಹ್ಲಿ ಪಡೆಯನ್ನು ಹುರಿದುಂಬಿಸಲು ನಿರ್ದೇಶಕ ಯೋಗರಾಜ್ ಭಟ್ ಅವರು ಒಂದು ಹಾಡು ಬರೆದಿದ್ದಾರೆ. ಎಂದಿನಂತೆ ತಮ್ಮ ಫನ್ನಿ ಸಾಹಿತ್ಯದ ಮೂಲಕ ಆರ್ಸಿಬಿ ತಂಡಕ್ಕೆ ವಿಶ್ ಮಾಡಿದ್ದಾರೆ. ‘ಜಿಂಗಲ ಜೈ’ (Jingala Jai) ಎಂಬ ಈ ಹಾಡು ‘ಪಂಚರಂಗಿ ಆಡಿಯೋ’ ಮೂಲಕ ಬಿಡುಗಡೆ ಆಗಿದೆ. ವಿಶೇಷ ಏನೆಂದರೆ, ‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ (Dhruva Sarja) ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ.
ಯೋಗರಾಜ್ ಭಟ್ ಬರೆದ ‘ಜಿಂಗಲ ಜೈ’ ಹಾಡಿಗೆ ಚೇತನ್ ಸೋಸ್ಕಾ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ರೇಣುಕಾ ಯೋಗರಾಜ್ ಭಟ್ ಅವರು ಇದನ್ನು ನಿರ್ಮಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶಿಸಿದ್ದಾರೆ. ಧ್ರುವ ಸರ್ಜಾ ಅವರ ಧ್ವನಿಯಿಂದ ಈ ಹಾಡಿಗೆ ಸಖತ್ ಜೋಶ್ ಬಂದಿದೆ. ಯಾಕೆಂದರೆ, ಧ್ರುವ ಸರ್ಜಾ ಅವರು ಮೈಕ್ ಮುಂದೆ ನಿಂತು ಹಾಡಿರುವುದು ಇದೇ ಮೊದಲು.
ಇದನ್ನೂ ಓದಿ: ಕೃಷ್ಣ-ಕುಚೇಲನ ಸಂಬಂಧ: ಧ್ರುವ ಸರ್ಜಾ ಬಗ್ಗೆ ‘ಕೆರೆಬೇಟೆ’ ಹೀರೋ ಹೇಳಿದ್ದೇನು?
ಚಿತ್ರರಂಗದ ಹಲವು ಪ್ರತಿಭಾವಂತರು ಸೇರಿ ‘ಜಿಂಗಲ ಜೈ’ ಹಾಡಿಗೆ ಸಾಥ್ ನೀಡಿದ್ದಾರೆ. ಧ್ರುವ ಸರ್ಜಾ ಜೊತೆ ಯೋಗರಾಜ್ ಭಟ್ ಕೂಡ ಹಾಡಿದ್ದಾರೆ. ಅಷ್ಟೇ ಅಲ್ಲದೇ, ‘ನಾ ಡ್ರೈವರ..’ ಹಾಡಿನ ಖ್ಯಾತಿಯ ಉತ್ತರ ಕರ್ನಾಟಕದ ಸಿಂಗರ್ ಮಾಳು ನಿಪನಾಳ ಕೂಡ ಈ ಗೀತೆಗೆ ಧ್ವನಿಯಾಗಿದ್ದಾರೆ. ಚೇತನ್ ಸೋಸ್ಕಾ ಕೂಡ ಜೊತೆಯಾಗಿದ್ದಾರೆ. ಎಲ್ಲರ ಸಂಗಮದಿಂದ ‘ಜಿಂಗಲ ಜೈ’ ಹಾಡು ಭರ್ಜರಿಯಾಗಿ ಮೂಡಿಬಂದಿದೆ.
‘ಜಿಂಗಲ ಜೈ’ ಹಾಡಿನಲ್ಲಿ ಅನೇಕ ಮಕ್ಕಳು ಮತ್ತು ಆರ್ಸಿಬಿ ಅಭಿಮಾನಿಗಳು ಕೂಡ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ‘ಮಾರ್ಟಿನ್’ ಸಿನಿಮಾದ ನಿರ್ದೇಶಕ ಎ.ಪಿ. ಅರ್ಜುನ್, ಮಣಿಕಂಠನ್, ದಾನಿಶ್ ಸೇಠ್ ಮುಂತಾದವರು ಸಹಕಾರ ನೀಡಿದ್ದಾರೆ. ಅಭಿರಾಜ್, ರಾಕೇಶ್ ರಾಮ್, ಶಿವ್ ಪಾಟೀಲ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಸಚಿನ್ ಕೆ. ರಾಮು ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಗುಡ್ಡು ರಾಜ್ ನೃತ್ಯ ನಿರ್ದೇಶನ ಮಾಡಿದ್ದು, ಗಡ್ಡ ವಿಜಿ ಅವರು ಕಲಾ ನಿರ್ದೇಶನ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.