ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಹಾಗೂ ಅವರ ‘ಮಾರ್ಟಿನ್’ ಸಿನಿಮಾ (Martin Movie) ತಂಡದವರು ವಿಮಾನ ದುರಂತದಿಂದ (Plane Crash) ಪಾರಾಗಿದ್ದಾರೆ. ಚಿತ್ರತಂಡದವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ವಿಷಯ ತಿಳಿಸಿದ್ದಾರೆ. ‘ಮಾರ್ಟಿನ್’ ಸಿನಿಮಾದ ಶೂಟಿಂಗ್ ಬಿರುಸಿನಿಂದ ಸಾಗುತ್ತಿವೆ. ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡದವರ ಜೊತೆ ಧ್ರುವ ಸರ್ಜಾ ಅವರು ಶ್ರೀನಗರಕ್ಕೆ ತೆರಳಿದ್ದರು. ಅಲ್ಲಿ ಶೂಟಿಂಗ್ ಮುಗಿಸಿಕೊಂಡು ದೆಹಲಿಗೆ ವಾಪಸ್ ಬರುವಾಗ ವಿಮಾನದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಆ ಸಂದರ್ಭದ ವಿಡಿಯೋವನ್ನು ಧ್ರುವ ಸರ್ಜಾ (Dhruva Sarja) ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದಂತಾಗಿದೆ. ಕ್ರ್ಯಾಶ್ ಆಗಬೇಕಿದ್ದ ಫ್ಲೈಟ್ ಕೂದಲೆಳೆ ಅಂತರದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇಂಡಿಗೋ ವಿಮಾನದಲ್ಲಿ ‘ಮಾರ್ಟಿನ್’ ಚಿತ್ರತಂಡದವರು ವಿಡಿಯೋ ಮಾಡಿದ್ದಾರೆ. ‘ಇವತ್ತಿನ ರೀತಿ ಇಷ್ಟು ಕೆಟ್ಟ ಅನುಭವ ಇಡೀ ಜೀವನದಲ್ಲೇ ಆಗಿರಲಿಲ್ಲ. ಈಗ ನಾವು ಸೇಫ್ ಆಗಿದ್ದೇವೆ. ಜೈ ಆಂಜನೇಯ. ಪೈಲಟ್ಗೆ ಧನ್ಯವಾದ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
‘ಮೊದಲ ಬಾರಿ ಸಾವನ್ನು ಹತ್ತಿರದಿಂದ ನೋಡಿ ವಾಪಸ್ ಬಂದಿದ್ದೇನೆ. ಚಿರು, ತಂದೆ-ತಾಯಿ ಹಾಗೂ ಅಭಿಮಾನಿಗಳು ಆಶೀರ್ವಾದದಿಂದ ಪಾರಾಗಿದ್ದೇನೆ. ಫ್ಲೈಟ್ನಲ್ಲಿ ಇದ್ದ ಎಲ್ಲರೂ ಜೀವ ಉಳಿಸಿಕೊಳ್ಳಲು ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು. ನಾವು ಸೇಫ್ ಆಗಿ ಲ್ಯಾಂಡ್ ಆದಾಗ ಜನರು ಖುಷಿಯಿಂದ ಕೂಗಾಡಿದರು. ತಮ್ಮ ಪ್ರೀತಿಪಾತ್ರರಿಗೆ ಕರೆ ಮಾಡಿದರು. ಆನಂದ ಭಾಷ್ಪ ಸುರಿಸಿದರು. ಚೆನ್ನಾಗಿ ಬದುಕಲು ನಮಗೆ ಈ ಮರುಜನ್ಮ ಒಂದು ಕಾರಣವಾಗಿದೆ’ ಎಂದು ಧ್ರುವ ಸರ್ಜಾ ಅವರು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ‘ದಯವಿಟ್ಟು ತಗಲಾಕ್ಕೋಬೇಡಿ’; ಇಬ್ಬರ ಮಧ್ಯೆ ದ್ವೇಷ ಬೆಳೆಸಲು ಬಂದವರಿಗೆ ಧ್ರುವ ಸರ್ಜಾ ವಾರ್ನಿಂಗ್
‘ಮಾರ್ಟಿನ್’ ಚಿತ್ರತಂಡದವರು ಸೇಫ್ ಆಗಿದ್ದಾರೆ ಎಂಬುದು ತಿಳಿದು ಅಭಿಮಾನಿಗಳು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ. ‘ಸುರಕ್ಷಿತವಾಗಿ ಬನ್ನಿ ಅಣ್ಣ. ನಿಮಗಾಗಿ ಕಾಯುತ್ತಿದ್ದೇವೆ. ನಿಮ್ಮ ಜೊತೆ ದೇವರು ಇದ್ದಾನೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ‘ಮಾರ್ಟಿನ್’ ಸಿನಿಮಾಗೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಇಮ್ರಾನ್ ಸರ್ದಾರಿಯಾ ಅವರು ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ. ಅವರು ಕೂಡ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:57 am, Tue, 20 February 24