ದಿಗಂತ್ (Diganth), ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಮದುವೆಯಾಗಲಿರುವ ಗೆಳೆಯನ ಬ್ಯಾಚುಲರ್ ಪಾರ್ಟಿಗಾಗಿ ಬ್ಯಾಂಕಾಕ್ಗೆ ಹೋದ ಗೆಳೆಯರು ಮಾಡುವ ಪಾರ್ಟಿ ಅಲ್ಲಿ ಅವರು ಎದುರಿಸುವ ಸಮಸ್ಯೆಗಳು, ಪೀಕಲಾಟಗಳ ಬಗ್ಗೆ ಈ ಸಿನಿಮಾ ಇದ್ದು, ಸಿನಿಮಾದ ಟ್ರೈಲರ್ ಸಖತ್ ಮಜವಾಗಿದೆ.
ಪತ್ನಿಯಿಂದ ಪೀಡನೆಗೆ ಒಳಗಾಗಿರುವ ಪತಿಯ ಪಾತ್ರದಲ್ಲಿ ದಿಗಂತ್ ನಟಿಸಿದ್ದಾರೆ. ಅವರ ಗೆಳೆಯನ ಪಾತ್ರದಲ್ಲಿ ಯೋಗಿ ನಟಿಸಿದ್ದಾರೆ. ಗೆಳೆಯನ ಮದುವೆ ನಿಶ್ಚಯವಾಗಿದ್ದು ಅದರ ಬ್ಯಾಚುಲರ್ ಪಾರ್ಟಿ ಮಾಡಲೆಂದು ಇಬ್ಬರೂ ಬ್ಯಾಂಕಾಕ್ಗೆ ಹೋಗುತ್ತಾರೆ. ಅವರ ಜೊತೆ ಅಚ್ಯುತ್ ಕುಮಾರ್ ತಗಲುಹಾಕಿಕೊಳ್ತಾರೆ. ಅಲ್ಲಿ ನಡೆಯುವ ಚಿತ್ರ-ವಿಚಿತ್ರ ಘಟನೆಗಳು, ಎದುರಿಸುವ ಪೀಕಲಾಟ, ಸಿಲುಕಿಕೊಳ್ಳುವ ಸಮಸ್ಯೆಗಳನ್ನು, ಅದರಿಂದ ಹೊರಗೆ ಬರುವ ರೀತಿಯನ್ನು ಹಾಸ್ಯದ ಲೇಪನದೊಂದಿಗೆ ನಿರೂಪಿಸಲಾಗಿದೆ.
ಈಗ ಬಿಡುಗಡೆ ಆಗಿರುವ ಟ್ರೈಲರ್ ಮಜವಾಗಿದೆ. ದಿಗಂತ್ರ ಸಂಸಾರ, ಪತ್ನಿಯಿಂದ ಅನುಭವಿಸುತ್ತಿರುವ ಸಮಸ್ಯೆ, ಯೋಗಿಯ ಬಿಂದಾಸ್ ಆಟಿಟ್ಯೂಡ್, ಅಚ್ಯುತ್ ಕುಮಾರ್ ಅವರ ಪಂಚ್ ಲೈನ್ಗಳು ಟ್ರೈಲರ್ನಲ್ಲಿವೆ. ಪ್ರೇಕ್ಷಕ ಸಿನಿಮಾದಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬುದರ ಝಲಕ್ ಟ್ರೈಲರ್ನಲ್ಲಿದೆ.
ಇದನ್ನೂ ಓದಿ:‘ಎಡಗೈ ಅಪಘಾತಕ್ಕೆ ಕಾರಣ’ ಟೀಸರ್ ಬಿಡುಗಡೆಗೆ ಸಿದ್ಧ: ದಿಗಂತ್ಗೆ ಕಿಚ್ಚನ ಬಲ
ಸಿನಿಮಾದಲ್ಲಿ ಭರಪೂರ ಹಾಸ್ಯ ಇರುವ ಸುಳಿವನ್ನು ಟ್ರೈಲರ್ ನೀಡುತ್ತಿದೆ. ಜೊತೆಗೆ ಕೆಲವು ಆಕ್ಷನ್, ಚೇಸ್ ದೃಶ್ಯಗಳು ಸಹ ಇರಲಿದೆ. ಡಾನ್ಗಳು, ಪಾರ್ಟಿ ಮಾಡಲು ಬಂದ ಗೆಳೆಯರ ಮೇಲೆ ಡಾನ್ನ ಕಣ್ಣು ಬೀಳುವುದೇಕೆ? ಡಾನ್ನಿಂದ ಈ ಗೆಳೆಯರು ಹೇಗೆ ಬಚಾವಾಗುತ್ತಾರೆ. ಆ ಬ್ಯಾಂಕಾಕ್ ಸುಂದರಿ ಯಾರ ಪ್ರೀತಿಗೆ ಬೀಳುತ್ತಾಳೆ ಇತ್ಯಾದಿಗಳನ್ನು ತಿಳಿಯಲು ಸಿನಿಮಾ ನೋಡಬೇಕು.
ಯೋಗಿ, ದಿಗಂತ್, ಅಚ್ಯುತ್ ಕುಮಾರ್, ಬಾಲಾಜಿ ಮನೋಹರ್, ಪ್ರಕಾಶ್ ತುಮ್ಮಿನಾಡು, ಲೂಸಿಯಾ ಪವನ್, ಶೋಭರಾಜ್, ಶೈನ್ ಶೆಟ್ಟಿ, ಸುಧಾ ಬೆಳವಾಡಿ, ಮಠ ಗುರುಪ್ರಸಾದ್, ನಾ ಸೋಮೇಶ್ವರ್, ದಿಗಂತ್ ಪತ್ನಿಯ ಪಾತ್ರದಲ್ಲಿ ಸಿರಿ ರವಿಕುಮಾರ್, ವಿಶೇಷ ಪಾತ್ರದಲ್ಲಿ ಜನಪ್ರಿಯ ಯೂಟ್ಯೂಬರ್ ವಿಕಿಪೀಡಿಯಾ ಇನ್ನೂ ಹಲವು ದಿಗ್ಗಜರು ನಟಿಸಿದ್ದಾರೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದು, ನಿರ್ದೇಶನ ಮಾಡಿರುವುದು ಅಭಿಜಿತ್ ಮಹೇಶ್. ಸಿನಿಮಾಕ್ಕೆ ಅರ್ಜುನ್ ರಾಮು ಸಂಗೀತ ನೀಡಿದ್ದಾರೆ. ಸಿನಿಮಾ ಜನವರಿ 26ಕ್ಕೆ ಬಿಡುಗಡೆ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Tue, 16 January 24