ಪುನೀತ್ ರಾಜ್ಕುಮಾರ್ ಅವರಿಗೆ ಮಾರ್ಚ್ 17 ಜನ್ಮದಿನ. ಎಲ್ಲರೂ ಅವರಿಗೆ ಶುಭಾಶಯ ಕೋರಿದ್ದಾರೆ. ಅಪ್ಪು ಖ್ಯಾತಿ ಕೇವಲ ಕನ್ನಡಿಗರಿಗೆ ಮಾತ್ರ ಸೀಮಿತವಾಗಿಲ್ಲ. ಪರಭಾಷೆಗಳಲ್ಲೂ ಅವರಿಗೆ ಫ್ಯಾನ್ಸ್ ಇದ್ದಾರೆ. ಅವರು ನಮ್ಮನ್ನು ಬಿಟ್ಟು ಹೋದ ಬಳಿಕವೂ ಅವರ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ. ಈಗ ಟೀಂ ಇಂಡಿಯಾ ಹಾಗೂ ಆರ್ಸಿಬಿ ತಂಡದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ಅವರು ಪುನೀತ್ ಮೇಲಿರುವ ಅಭಿಮಾನ ಹೊರಹಾಕಿದ್ದಾರೆ. ಅವರ ಒಳ್ಳೆಯ ಸಿನಿಮಾಗಳನ್ನು ಸೂಚಿಸಿ ಎಂದು ಕೋರಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಪ್ರಯುಕ್ತ ವಿಡಿಯೋ ಪೋಸ್ಟ್ ಮಾಡಿದ್ದಾರೆ ದಿನೇಶ್ ಕಾರ್ತಿಕ್. ‘ಚೆನ್ನೈನಿಂದ ಬಂದ ನಾನು ಸಿನಿಮಾ ಪ್ರಿಯ. ನಮ್ಮಲ್ಲಿ ರಜನಿಕಾಂತ್, ಕಮಲ್ ಹಾಸನ್, ವಿಜಯ್, ಅಜಿತ್, ಧನುಷ್, ವಿಜಯ್ ಸೇತುಪತಿ ಹೀಗೆ ಸಾಕಷ್ಟು ಸೂಪರ್ಸ್ಟಾರ್ಗಳು ಇದ್ದಾರೆ. ಈಗ ಆರ್ಸಿಬಿಯಲ್ಲಿ ಮೂರು ವರ್ಷ ಕಾಲ ಆಡಿದ ಬಳಿಕ ಸಾಕಷ್ಟು ಸಮಯ ಬೆಂಗಳೂರಿನಲ್ಲಿ ಕಳೆದಿದ್ದೇನೆ. ಈಗ ಮತ್ತೊಬ್ಬರು ಇದ್ದಾರೆ ಎಂದು ನನಗೆ ಗೊತ್ತಾಯಿತು. ಬೆಂಗಳೂರು ಅವರನ್ನು ತುಂಬಾನೇ ಇಷ್ಟಪಡುತ್ತದೆ. ಅವರೇ ಪುನೀತ್ ರಾಜ್ಕುಮಾರ್’ ಎಂದು ಅವರು ಹೇಳಿದ್ದಾರೆ.
‘ಅವರು ನಮ್ಮನ್ನು ಬೇಗ ಬಿಟ್ಟು ಹೋದರು. ಆದರೆ ಅವರು ಎಲ್ಲ ಕಡೆಗಳಲ್ಲಿ ಇದ್ದಾರೆ. ಪೋಸ್ಟರ್ಗಳಲ್ಲಿ, ರಸ್ತೆಗೆ ಅವರ ಹೆಸರು ನಾಮಕರಣ ಮಾಡಲಾಗಿದೆ. ಅವರ ಪರಂಪರೆ ನಗರದ ಪ್ರತಿ ಮೂಲೆ ಮೂಲೆಯಲ್ಲೂ ಉಳಿದುಕೊಂಡಿದೆ. ಅವರ ಹುಟ್ಟುಹಬ್ಬದ ದಿನ ನಾನು ಅವರಿಗೆ ನಮಿಸುತ್ತೇನೆ. ನಾನು ಅವರ ಯಾವ ಸಿನಿಮಾಗಳನ್ನು ವೀಕ್ಷಿಸಬೇಕು ಎಂಬುದನ್ನು ಕಮೆಂಟ್ನಲ್ಲಿ ತಿಳಿಸಿ’ ಎಂದು ಕೋರಿದ್ದಾರೆ.
ಇದನ್ನೂ ಓದಿ: ‘ಅಪ್ಪು’ ಸಿನಿಮಾ ಯಾಕೆ ನೋಡಿಲ್ಲ? ಬಲವಾದ ಕಾರಣ ಕೊಟ್ಟ ಶಿವರಾಜ್ಕುಮಾರ್
ಕಮೆಂಟ್ ಬಾಕ್ಸ್ನಲ್ಲಿ ಅನೇಕರು ವಿವಿಧ ರೀತಿಯ ಸಿನಿಮಾ ಹೆಸರುಗಳನ್ನು ಸೂಚಿಸಿದ್ದಾರೆ. ಕೆಲವರು ‘ಅಪ್ಪು’ ಚಿತ್ರವನ್ನು ಥಿಯೇಟರ್ನಲ್ಲಿ ವೀಕ್ಷಿಸುವಂತೆ ಕೋರಿದ್ದಾರೆ. ಇನ್ನೂ ಕೆಲವರು ಪುನೀತ್ ಅವರು ಬಾಲ ಕಲಾವಿದನಾಗಿ ಇದ್ದಾಗಿನಿಂದ ಅವರು ಸಾಯುವವರೆಗಿನ ಸಿನಿಮಾಗಳ ಹೆಸರನ್ನು ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.