Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ನಿರಾಕರಿಸಿದ್ದ ಪುನೀತ್ ರಾಜ್​ಕುಮಾರ್, ಕಾರಣ?

Puneeth Rajkumar: ಪುನೀತ್ ರಾಜ್​ಕುಮಾರ್ ತಮ್ಮ ಸರಳ, ಸವಿನಯ ಸ್ವಭಾವದಿಂದಾಗಿ ಕೋಟ್ಯಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಆದರೆ ನಿಮಗೆ ಗೊತ್ತೆ ಒಮ್ಮೆ ಪುನೀತ್ ರಾಜ್​ಕುಮಾರ್ ಅವರು ಪುರಿ ಜಗನ್ನಾಥ ದೇವಾಲಯದ ಒಳಗೆ ಹೋಗದೆ ಪ್ರತಿಭಟನೆ ನಡೆಸಿದ್ದರು. ಆ ವಿಷಯ 1987 ರಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಪತ್ರಿಕೆಯ ವರದಿಯ ಸಾರಾಂಶ ಇಲ್ಲಿದೆ.

ಪುರಿ ಜಗನ್ನಾಥ ದೇವಾಲಯಕ್ಕೆ ಪ್ರವೇಶಿಸಲು ನಿರಾಕರಿಸಿದ್ದ ಪುನೀತ್ ರಾಜ್​ಕುಮಾರ್, ಕಾರಣ?
Puneeth Rajkumar
Follow us
ಮಂಜುನಾಥ ಸಿ.
|

Updated on: Mar 16, 2025 | 10:11 AM

ಪುನೀತ್ ರಾಜ್​ಕುಮಾರ್ ತಮ್ಮ ಸಿನಿಮಾಗಳಿಗಿಂತಲೂ ವ್ಯಕ್ತಿತ್ವದಿಂದ ಹೆಚ್ಚು ಜನಪ್ರಿಯರು. ಪುನೀತ್ ಅವರ ಆಕರ್ಷಕ, ಸರಳ, ಸಜ್ಜನಿಕೆಯ, ಭಾತೃತ್ವ ಭಾವದ ವ್ಯಕ್ತಿತ್ವದಿಂದಾಗಿ ಅವರಿಗೆ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಆಡಂಭರವಿಲ್ಲದೆ, ಸರ್ವರನ್ನೂ ಸಮರೆಂದು ಭಾವಿಸುವ ಪುನೀತ್ ಅವರ ಅದ್ಭುತ ವ್ಯಕ್ತಿತ್ವಕ್ಕೆ ನೂರಾರು ಉದಾಹರಣೆಗಳಿವೆ. ಅಷ್ಟಕ್ಕೂ ಪುನೀತ್ ಅವರಿಗೆ ಸರ್ವರೂ ಸಮ ಎಂಬ ಶಿಕ್ಷಣ ಎಳವೆಯಲ್ಲೇ ದೊರೆತಿದೆ. ಸರ್ವರೂ ಸಮ, ಸಕಲ ಧರ್ಮಗಳೂ ಒಂದು, ಭಿನ್ನತೆ ಇದ್ದರೆ ಅದು ವ್ಯಕ್ತಿಗಳಲ್ಲಿ ಮಾತ್ರ ಎಂಬುದನ್ನು ಬಹಳ ಮುಂಚೆಯೇ ಪುನೀತ್ ರಾಜ್​ಕುಮಾರ್ ಅರಿತಿದ್ದರು. ಇದಕ್ಕೊಂದು ಅದ್ಭುತ ಉದಾಹರಣೆ ಇಲ್ಲಿದೆ ನೋಡಿ.

5ನೇ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ 1987 ರಲ್ಲಿ ಭುವನೇಶ್ವರದಲ್ಲಿ ನಡೆದಿತ್ತು. ನವೆಂಬರ್ 14 ರಿಂದ 23ರ ವರೆಗೆ ನಡೆದ ಈ ಚಲನಚಿತ್ರೋತ್ಸವದಲ್ಲಿ ಪುನೀತ್ ರಾಜ್​ಕುಮಾರ್ ಸಹ ಭಾಗವಹಿಸಿದ್ದರು. ಆಗಷ್ಟೆ ಪುನೀತ್ ರಾಜ್​ಕುಮಾರ್ ನಟನೆಯ ‘ಬೆಟ್ಟದ ಹೂ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಸಹ ಬಂದಿತ್ತು. ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಆಗ ಬಾಲನಟರಾಗಿದ್ದ ಪುನೀತ್ ರಾಜ್​ಕುಮಾರ್ ಸೇರಿದಂತೆ ಮಾಸ್ಟರ್ ಮಂಜು ಇನ್ನೂ ಕೆಲವರು ಭಾಗಿ ಆಗಿದ್ದರು. ಮಾತ್ರವಲ್ಲದೆ ಬೇರೆ ಬೇರೆ ಚಿತ್ರರಂಗಗಳಿಂದಲೂ ಬಾಲನಟರು ಆಗಮಿಸಿದ್ದರು. ಪ್ರಶಸ್ತಿ ವಿತರಣೆ ಬಳಿಕ ಎಲ್ಲರನ್ನೂ ಪ್ರವಾಸಕ್ಕೆಂದು ಕರೆದೊಯ್ಯಲಾಗಿತ್ತು.

ಈ ಸಂದರ್ಭದಲ್ಲಿ ಪುರಿ ಜಗನ್ನಾಥ್ ದೇವಾಲಯಕ್ಕೂ ಸಹ ಮಕ್ಕಳನ್ನು ಕರೆದೊಯ್ಯಲಾಯ್ತಂತೆ. ಆ ದೇವಾಲಯಕ್ಕೆ ಕೇವಲ ಹಿಂದೂಗಳಿಗೆ ಮಾತ್ರವೇ ಪ್ರವೇಶ ಇರುವುದನ್ನು ಅರಿತ ಪುನೀತ್ ರಾಜ್​ಕುಮಾರ್, ಇದು ರಾಷ್ಟ್ರೀಯ ಭಾವೈಕ್ಯತೆಗೆ ವಿರೋಧ ಎಂದರಂತೆ ಅಲ್ಲದೆ, ಪ್ರತಿಭಟನಾರ್ಥವಾಗಿ ಅವರು ಪುರಿ ಜಗನ್ನಾಥ ದೇವಾಲಯಕ್ಕೆ ಹೋಗಲೂ ಇಲ್ಲವಂತೆ. ಪುನೀತ್ ಅವರ ದಿಟ್ಟ ನಿರ್ಧಾರ ಮತ್ತು ಅವರ ಭಾವೈಕ್ಯತೆಯ ದೃಷ್ಟಿಯನ್ನು ಎಲ್ಲರೂ ಮೆಚ್ಚಿದರಂತೆ. ಈ ಬಗ್ಗೆ ಆಗ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಇದನ್ನೂ ಓದಿ:ಇದು ಪುನೀತ್ ರಾಜ್​ಕುಮಾರ್ ಬರ್ತ್​ಡೇ ಸ್ಪೆಷಲ್, ನೀವು ಇಲ್ಲಿಗೆ ಬಂದ್ರೆ ಚಾಟ್ಸ್ ಐಟಂ ಫ್ರೀ

ಡಾ ರಾಜ್​ಕುಮಾರ್ ಕುಟುಂಬದ ಅಪ್ಪಟ ಅಭಿಮಾನಿ, ಸಂಗ್ರಹಕಾರರು ಆಗಿರುವ ಮಲ್ಲಿಕಾರ್ಜುನ ಮೇಟಿ ಎಂಬುವರು ತಮ್ಮ ಫೇಸ್​ಬುಕ್​ನಲ್ಲಿ ಈ ಪತ್ರಿಕಾ ವರದಿಯ ತುಣುಕನ್ನು ಹಂಚಿಕೊಂಡಿದ್ದಾರೆ. 1987, ಡಿಸೆಂಬರ್ 04 ರಂದು ಕನ್ನಡ ಪ್ರತ್ರಿಕೆಯೊಂದರಲ್ಲಿ ಪುನೀತ್ ರಾಜ್​ಕುಮಾರ್ ಅವರು ಪ್ರತಿಭಟನಾರ್ಥವಾಗಿ ಪುರಿ ಜಗನ್ನಾಥ ದೇವಾಲಯ ಪ್ರವೇಶಿಸಲಿಲ್ಲ ಎಂಬ ವರದಿ ಪ್ರಕಟವಾಗಿದೆ. ಪುನೀತ್ ರಾಜ್​ಕುಮಾರ್ ಅವರು ಸಿನಿಮಾಗಳಲ್ಲಿ ಆಗಲಿ, ನಿಜ ಜೀವನದಲ್ಲಿ ಆಗಲಿ ಧರ್ಮ ಅಸಹಿಷ್ಣುತೆ ಪ್ರದರ್ಶಿಸಿದವರಲ್ಲ. ಸಕಲ ಧರ್ಮಗಳು ಒಂದು ಎಂದು ಭಾವಿಸಿದ್ದರು, ಬದುಕಿದ್ದರು.

ನಾಳೆ (ಮಾರ್ಚ್ 17) ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬ. ರಾಜ್ಯದಾದ್ಯಂತ ಅಭಿಮಾನಿಗಳೂ ಭಕ್ತಿ, ಗೌರವದಿಂದ ಪುನೀತ್ ಅವರ ಹುಟ್ಟುಹಬ್ಬ ಆಚರಣೆ ಮಾಡಲಿದ್ದಾರೆ. ನಾಳೆ ರಾಜ್ಯದಾದ್ಯಂತ ಹಲವಾರು ಕಡೆಗಳಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ ಶಿಬಿರಗಳು ನಡೆಯಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ