ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ: ಮೊದಲೆರಡು ಸ್ಥಾನದಲ್ಲಿ ಕನ್ನಡ ಸಿನಿಮಾಗಳು
Most Anticipated Indian Movies 2025: ಐಎಂಡಿಬಿಯು ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಆಗಾಗ್ಗೆ ಬಿಡುಗಡೆ ಮಾಡುತ್ತಿರುತ್ತದೆ. ಈ ಪಟ್ಟಿಯಲ್ಲಿ ಕಾಲ ಕಾಲಕ್ಕೆ ಬದಲಾವಣೆ ಸಹ ಆಗುತ್ತಿರುತ್ತದೆ. ಇದೀಗ ಈ ಪಟ್ಟಿಯ ಮೊದಲೆರಡು ಸ್ಥಾನದಲ್ಲಿ ಕನ್ನಡ ಸಿನಿಮಾಗಳೇ ಸ್ಥಾನ ಪಡೆದಿವೆ. ಪರಭಾಷೆಯ ಸಿನಿಮಾಗಳನ್ನು ಪಟ್ಟಿಯಲ್ಲಿ ಕೆಳಕ್ಕೆ ತಳ್ಳಿವೆ.

2025 ಆರಂಭವಾಗಿ ಮೂರು ತಿಂಗಳಾಗಿವೆ. ‘ಛಾವಾ’ (Chhava) ಸಿನಿಮಾದ ಹೊರತಾಗಿ ಇನ್ಯಾವುದೇ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಅಸಲಿಗೆ 2025 ರಲ್ಲಿ ಹಲವು ದೊಡ್ಡ ಸಿನಿಮಾಗಳು ಬಿಡುಗಡೆ ಆಗಲಿಕ್ಕಿವೆ. ಆದರೆ ಆ ಸಿನಿಮಾಗಳು ಇನ್ನಷ್ಟೆ ಬಿಡುಗಡೆ ಆಗಬೇಕಿವೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಈ ಪಟ್ಟಿಯ ಮೊದಲ ಎರಡು ಸ್ಥಾನದಲ್ಲಿ ಕನ್ನಡ ಸಿನಿಮಾಗಳೇ ಇವೆ. ಹಲವು ಸ್ಟಾರ್ ನಟರ ದೊಡ್ಡ ಸಿನಿಮಾಗಳನ್ನು ಕನ್ನಡ ಸಿನಿಮಾಗಳು ಹಿಂದೆ ಹಾಕಿವೆ.
(Most Anticipated Indian Movies of 2025) 2025ರ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಬಿಡುಗಡೆ ಮಾಡಿದ್ದು, ಕನ್ನಡದ ‘ಕಾಂತಾರ ಚಾಪ್ಟರ್ 1’ ಸಿನಿಮಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹೊಂಬಾಳೆ ನಿರ್ಮಾಣ ಮಾಡಿ, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇದೇ ವರ್ಷ ತೆರೆಗೆ ಬರಲಿದ್ದು, ಈ ಸಿನಿಮಾ 2025ರ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ ಐಎಂಡಿಬಿ ಪ್ರಕಾರ.
ಎರಡನೇ ಸ್ಥಾನದಲ್ಲಿಯೂ ಕನ್ನಡ ಸಿನಿಮಾ ಇದೆ. ಯಶ್ ನಟಿಸಿ, ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿರುವ ‘ಟಾಕ್ಸಿಕ್’ ಸಿನಿಮಾ ಎರಡನೇ ಸ್ಥಾನದಲ್ಲಿದೆ. ‘ಟಾಕ್ಸಿಕ್’ ಸಹ ಇದೇ ವರ್ಷಾಂತ್ಯಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದ್ದು, ಈ ಸಿನಿಮಾ ಸಹ ದೇಶದಾದ್ಯಂತ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿರುವ ಸಿನಿಮಾ ಆಗಿದೆ.
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ತಮಿಳು ಸಿನಿಮಾ ‘ಜನ ನಾಯಗನ್’ ಇದೆ. ದಳಪತಿ ವಿಜಯ್ ನಟಿಸುತ್ತಿರುವ ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಕೆವಿಎನ್ ಪ್ರೊಡಕ್ಷನ್ಸ್. ಈ ಸಿನಿಮಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ‘ಜನ ನಾಯಗನ್’ ವಿಜಯ್ ನಟಿಸಲಿರುವ ಕೊನೆಯ ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾ ಸಹ ಇದೇ ವರ್ಷ ತೆರೆಗೆ ಬರಲಿದೆ.
ಇದನ್ನೂ ಓದಿ: ಯಶ್ ಬಗ್ಗೆ ಗುಣಗಾನ ಮಾಡಿದ ಹಾಲಿವುಡ್ ತಂತ್ರಜ್ಞ; ಇದು ಕನ್ನಡ ಚಿತ್ರರಂಗದ ಹೆಮ್ಮೆ
ನಾಲ್ಕನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ನಟನೆಯ ‘ಸಿಖಂಧರ್’ ಸಿನಿಮಾ ಇದೆ. ಸಲ್ಮಾನ್ ಖಾನ್ ಇತ್ತೀಚೆಗಷ್ಟೆ ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಸಿನಿಮಾ ನಿರ್ದೇಶನ ಮಾಡಿರುವುದು ತಮಿಳಿನ ಎಆರ್ ಮುರುಗದಾಸ್. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಸಲ್ಮಾನ್ ಖಾನ್ರ ಆಪ್ತ ಗೆಳೆಯ ಸಾಜಿದ್ ನಾಡಿಯಾವಾಲ. ಇನ್ನು ಈ ಪಟ್ಟಿಯ ಐದನೇ ಸ್ಥಾನದಲ್ಲಿ ಅಜಿತ್ ನಟನೆಯ ‘ಗುಡ್ ಬ್ಯಾಡ್ ಮತ್ತು ಅಗ್ಲಿ’ ಸಿನಿಮಾ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ