ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರು ನಟಿಯಾಗಬೇಕೆಂಬ ಮಹದಾಸೆಯಿಂದ ಚಿತ್ರರಂಗಕ್ಕೆ ಕಾಲಿಟ್ಟವರು. ಮುದ್ದು ಮುಖದ ಪವಿತ್ರಾ ಗೌಡ ಆರಂಭದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರಾದರೂ ಅದಾದ ಬಳಿಕ ಬೇರೆಯದೇ ಹಾದಿ ಹಿಡಿದುಕೊಂಡರು. ಅವರ ಸೌಂದರ್ಯ ಮೆಚ್ಚಿ ಕೆಲವು ಸಿನಿಮಾಗಳಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು ಆದರೆ ವೃತ್ತಿಪರತೆ ಕೊರತೆಯಿಂದಾಗಿ ಸಿನಿಮಾಗಳಿಂದ ಪವಿತ್ರಾ ಹೊರನಡೆದರು ಎನ್ನಲಾಗುತ್ತಿದೆ. ಪವಿತ್ರಾರನ್ನು ತಮ್ಮ ಸಿನಿಮಾದ ಮುಖ್ಯ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದ ನಿರ್ದೇಶಕಿ ಚಂದ್ರಕಲಾ, ಪವಿತ್ರಾ ಅವರೊಟ್ಟಿಗೆ ಕೆಲಸ ಮಾಡಿದ ಘಟನೆ ಮೆಲುಕು ಹಾಕಿದ್ದಾರೆ.
ಚಂದ್ರಕಲಾ ಅವರು ತ್ರಿಕೋನ ಪ್ರೇಮಕಥೆಯುಳ್ಳ ‘ಆಶಿಖಿ 3’ ಹೆಸರಿನ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಒಬ್ಬ ನಾಯಕಿ ಇಬ್ಬರು ನಾಯಕರಿದ್ದರು. ನಾಯಕಿಯ ಪಾತ್ರವೇ ಸಿನಿಮಾದ ಪ್ರಧಾನ ಪಾತ್ರ. ಆ ಪಾತ್ರಕ್ಕೆ ಚಂದ್ರಕಲಾ ಅವರು ಪವಿತ್ರಾ ಗೌಡ ಅವರನ್ನು ಆಯ್ಕೆ ಮಾಡಿದ್ದರು. ‘ಪವಿತ್ರಾ ಅವರನ್ನು ನೋಡಿದಾಗ ನನಗೆ ಬಹಳ ಖುಷಿಯಾಗಿತ್ತು. ಅಷ್ಟು ಮುದ್ದಾಗಿದ್ದರು ಅವರು, ಈ ಹುಡುಗಿ ಬಾಲಿವುಡ್ನಲ್ಲಿಯೂ ಹೆಸರು ಮಾಡುತ್ತೆ’ ಎಂದುಕೊಂಡಿದ್ದೆ ಆದರೆ ಆಗಿದ್ದೇ ಬೇರೆ ಎಂದಿದ್ದಾರೆ ಚಂದ್ರಕಲಾ.
‘ಆಶಿಖಿ 3’ ಸಿನಿಮಾಕ್ಕೆ ನಾಯಕಿಯನ್ನಾಗಿ ಪವಿತ್ರಾರನ್ನು ಆಯ್ಕೆ ಮಾಡಿದ್ದೆ. ನಾಯಕಿ ಪಾತ್ರಕ್ಕೆ ನಾವು ಶಾಪಿಂಗ್ ಮಾಡೆದೆವು. ಅವರು ಹೇಳಿದ ಬ್ರ್ಯಾಂಡ್ನ ಬಟ್ಟೆಗಳನ್ನೇ ಅವರಿಗೆ ಕೊಡಿಸಿದ್ದೆ. ಅವರು ಹೇಳಿದ ಬ್ರ್ಯಾಂಡ್ನ ಚಪ್ಪಲಿಗಳನ್ನೂ ಸಹ ಕೊಡಿಸಿದ್ದೆ. ಮದುವೆ ಮನೆಯಿಂದ ತಪ್ಪಿಸಿಕೊಂಡು ಹೋಗುವ ಹುಡುಗಿಯ ಪಾತ್ರವದು. ಹಾಗಾಗಿ ಮೆಹಂದಿ ಸಹ ಪವಿತ್ರಾ ಕೇಳಿದವರಿಂದಲೇ ಹಾಕಿಸಿದ್ದೆ. ಸಿನಿಮಾದ ಶೂಟಿಂಗ್ ದಿನ ಪವಿತ್ರಾ ಬಂದಾಗ ಅವರ ಕೈಯಲ್ಲಿ ಮೆಹಂದಿ ಇರಲಿಲ್ಲ. ಅವರು ಅಳಿಸಿಕೊಂಡು ಬಿಟ್ಟಿದ್ದರು. ಕೂಡಲೇ ನಾನು ಯಾರನ್ನೋ ಕಳಿಸಿ ಕೃತಕ ಮೆಹಂದಿ ತರಿಸಿ ಹಾಕಿಸಿ ಶೂಟಿಂಗ್ ಪ್ರಾರಂಭಿಸಿದ್ದೆ. ಅವರಿಗೆ ಸಿನಿಮಾದ ಮೇಲೆ, ನಟನೆ ಮೇಲೆ ಶ್ರದ್ಧೆ ಇರಲಿಲ್ಲ ಎಂಬುದು ಆಗಲೇ ನನಗೆ ಗೊತ್ತಾಯ್ತು’ ಎಂದಿದ್ದಾರೆ ಚಂದ್ರಕಲಾ.
‘ಸಿನಿಮಾ ಪ್ರಾರಂಭಕ್ಕೆ ಮುನ್ನವೇ ಕಾಸ್ಟ್ಯೂಮ್ ಹೇಗಿರುತ್ತದೆ ಎಂದು ಹೇಳಿದ್ದೆ. ಶಾರ್ಟ್ಸ್ ಎಲ್ಲ ಹಾಕಬೇಕಿತ್ತು, ಬಹಳ ಬಬ್ಲಿಯಾದ ಪಾತ್ರ ಅವರದ್ದಾಗಿತ್ತು. ಆಗ ಆದಿ ಆ ಸಿನಿಮಾದ ನಾಯಕರಾಗಿದ್ದರು. ಕಾರ್ನಲ್ಲಿ ಆ ಸಿನಿಮಾದ ದೃಶ್ಯವೊಂದನ್ನು ಶೂಟ್ ಮಾಡುತ್ತಿದ್ದೆವು. ಆದರೆ ಅವರಿಂದ ನಟನೆಯೇ ಬರಲಿಲ್ಲ, ಬಹಳ ಕಷ್ಟಪಟ್ಟರು. ನಾಗರಭಾವಿಯಲ್ಲಿ ಶೂಟಿಂಗ್ ಮಾಡುತ್ತಿದ್ದೆವು ಆಗೆಲ್ಲ ಬಟ್ಟೆ ಚೇಂಜ್ ಮಾಡುವ ವಿಷಯಕ್ಕೆ ಬಹಳ ಸಮಸ್ಯೆ ಕೊಟ್ಟರು. ತಡೆದುಕೊಂಡೆ. ಸೀನ್ ಮಾಡುವಾಗಲೂ ಸಹ ಕೆಲವು ಕಿರಿಕ್ ಮಾಡಿದರು. ನಾನಂತೂ ಡಿಸೈಡ್ ಮಾಡಿದ್ದೆ, ಈ ಹುಡುಗಿಗೆ ಚೆನ್ನಾಗಿ ವರ್ಕ್ಶಾಪ್ ಮಾಡಿ ನಟನೆ ಕಲಿಸಿ ಆ ಬಳಿಕವೇ ಕರೆದುಕೊಂಡು ಬರಬೇಕು ಎಂದು’ ಎಂದು ನೆನಪು ಮಾಡಿಕೊಂಡಿದ್ದಾರೆ ಚಂದ್ರಕಲಾ.
ಇದನ್ನೂ ಓದಿ:ಪವಿತ್ರಾ ಗೌಡ ಜಾಮೀನು ಪ್ರಕ್ರಿಯೆಯ ಬಗ್ಗೆ ವಕೀಲ ಹೇಳಿದ್ದಿಷ್ಟು?
‘ಆದರೆ ಮಾರನೇಯ ದಿನ ಪವಿತ್ರಾ ಗೌಡ ನನಗೆ ಕಾಲ್ ಮಾಡಿದರು. ಇಲ್ಲ ನನಗೆ ಕಂಫರ್ಟ್ ಆಗುತ್ತಿಲ್ಲ. ನನ್ನಿಂದ ನಟಿಸಲು ಆಗುವುದಿಲ್ಲ ಎಂದುಬಿಟ್ಟರು. ಅಸಲಿಗೆ ಅವರ ಯೋಚನೆ ಬೇರೆ ಇತ್ತು, ಕ್ಯಾರಾವ್ಯಾನ್ ಇರುತ್ತದೆ. ಬಹಳ ದೊಡ್ಡ ಸಂಖ್ಯೆಯ ಸಿಬ್ಬಂದಿ ಇರುತ್ತಾರೆ ಎಂದೆಲ್ಲ ಅವರು ಕಲ್ಪನೆ ಮಾಡಿಕೊಂಡಿದ್ದರು. ಆದರೆ ಅದ್ಯಾವುದೂ ಇಲ್ಲದೇ ಇದ್ದಿದ್ದಕ್ಕೆ ಅವರು ಅಪ್ಸೆಟ್ ಆಗಿದ್ದರು. ಆದರೆ ಅವರಿಗೆ ಅದೆಲ್ಲ ಬೇಕು ಎಂದಿದ್ದರೆ ಅವರು ಮೊದಲೇ ಕೇಳ ಬೇಕಿತ್ತು, ನಾವು ಮೊದಲೇ ಆಗುವುದಿಲ್ಲ ಎಂದುಬಿಡುತ್ತಿದ್ದೆವು’ ಎಂದಿದ್ದಾರೆ ಚಂದ್ರಕಲಾ.
‘ಪವಿತ್ರಾಗಾಗಿ ನಾನು ಬಹಳ ಬಟ್ಟೆ ಎಲ್ಲ ಖರೀದಿಸಿದ್ದೆ, ದುಬಾರಿ ವಧುವಿನ ಉಡುಗೊರೆ ಎಲ್ಲ ಖರೀದಿಸಿದ್ದೆ. ಕೊನೆಗೆ ಅದನ್ನೆಲ್ಲ ಲೆಕ್ಕ ಹಾಕಿ ಅದಕ್ಕೆಲ್ಲ ಖರ್ಚು ಮಾಡಿರುವ ಹಣ ವಾಪಸ್ ಮಾಡುವಂತೆ ಕೇಳಿದೆ. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡ ಪವಿತ್ರಾ ಆ ಬಳಿಕ ಹಣ ವಾಪಸ್ ಕೊಟ್ಟರು. ಅವರು ಬಿಟ್ಟಿದ್ದು ನಮಗೂ ಒಳ್ಳೆಯದೇ ಆಯ್ತು. ಅವರನ್ನು ಹಾಕಿಕೊಂಡು ಎರಡು ದಿನ ಶೂಟಿಂಗ್ ಮಾಡುವಷ್ಟರಲ್ಲಿ ನಮಗೆ ಸಾಕಾಗಿತ್ತು. ಅವರು ಬಿಟ್ಟ ಬಳಿಕ ಒಳ್ಳೆಯ ಹುಡುಗಿ ಸಿಕ್ಕು ಸಿನಿಮಾ ಪೂರ್ತಿಯಾಯ್ತು’ ಎಂದಿದ್ದಾರೆ ಚಂದ್ರಕಲಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ